Political News: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು, ಪಕ್ಷದ ಅಭ್ಯರ್ಥಿ ಚಂದ್ರಪ್ಪ ಅವರಿಗೆ ಮತ ನೀಡುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಈ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು ಮಿಸ್ಟರ್ ಮೋದಿಯವರೇ? ಕಾಂಗ್ರೆಸ್ ಮತ್ತು ಬೇರೆ ಪಕ್ಷದ ಶಾಸಕರುಗಳಿಗೆ ಕೋಟಿ ಕೋಟಿ ಕೊಡುವುದಕ್ಕೆ ಹಣ ಎಲ್ಲಿಂದ ಬರುತ್ತೆ? ಅದು ಕಪ್ಪು ಹಣ ಅಲ್ಲವೇ? ದೇಶದ ಜನಕ್ಕೆ ಉತ್ತರ ಕೊಡಿ.ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಕೊಡ್ತೀವಿ ಅಂದ್ರಲ್ಲಾ ಕೊಟ್ರಾ? ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂತ ಭಾಷಣ ಮಾಡಿದ್ರು. ಆದಾಯ ಒಂದು ರೂಪಾಯಿ ಕೂಡ ಹೆಚ್ಚಾಗಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರಲ್ಲಾ? ಮಾಡಿದ್ರಾ ಮೋದಿಯವರೇ? ಪೆಟ್ರೋಲ್, ಡೀಸೆಲ್, ಅಡುಗೆ ಗ್ಯಾಸ್, ರಸಗೊಬ್ಬರ, ಎಣ್ಣೆ, ಕಾಳು ಬೇಳೆ ಎಲ್ಲವೂ ಅತ್ಯಂತ ಕಡಿಮೆ ಬೆಲೆಗೆ ಸಿಗುವಂತೆ ಮಾಡ್ತೀನಿ ಅಂದಿದ್ರಲ್ಲಾ ಮಾಡಿದ್ರಾ ಮಿಸ್ಟರ್ ನರೇಂದ್ರಮೋದಿ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಿಸ್ಟರ್ ಮೋದಿ ಅವರೇ, ಬಿಜೆಪಿಯ ಕಾಲದಲ್ಲಿ ಆದ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ಕೊಂಚ ನೆಮ್ಮದಿ ನೀಡಬೇಕು ಎನ್ನುವ ಕಾರಣದಿಂದ ಐದು ಗ್ಯಾರಂಟಿ ಜಾರಿ ಮಾಡಿದೆವು. ಪ್ರತೀ ಕುಟುಂಬಕ್ಕೆ 4 ರಿಂದ 6 ಸಾವಿರ ರೂಪಾಯಿ ಉಳಿತಾಯವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಾಯಿತು. ಇದು ಸಾಧ್ಯವಾಗಿದ್ದು ನಮ್ಮ ಕಾಂಗ್ರೆಸ್ ಸರ್ಕಾರದಿಂದ ಎಂದು ಸಿಎಂ ಹೇಳಿದ್ದಾರೆ.
ಈ ದೇಶದ ಶೇ.95 ರಷ್ಟು ಬಹುಸಂಖ್ಯಾತ ಜನಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುತ್ತಿರುವುದು ನಮ್ಮ ಸಂವಿಧಾನ. ಈ ಸಂವಿಧಾನವನ್ನು ಬದಲಾಯಿಸುತ್ತೀವಿ ಎನ್ನುವುದು ಬಿಜೆಪಿ ಅಜೆಂಡಾ. ಇದನ್ನು ಬಿಜೆಪಿ ಕೇಂದ್ರ ಸಚಿವರಾಗಿದ್ದವರೇ ಬಹಿರಂಗವಾಗಿ ಹೇಳಿದ್ದಾರೆ. ಆದ್ದರಿಂದ ದೇಶದ ಸಂವಿಧಾನವನ್ನು ಬದಲಾಯಿಸಿ ಮನುಸ್ಮೃತಿ ಜಾರಿಗೆ ತರಲು ಅವಕಾಶ ಕೊಡಬೇಡಿ. ಅಧಿಕಾರದಲ್ಲಿದ್ದಾಗ ಹಣ ಲೂಟಿ ಮಾಡೋದು, ಆಮೇಲೆ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಬಕ್ರಾ ಮಾಡೋದು ನರೇಂದ್ರ ಮೋದಿ ಅವರ ಸಾಧನೆ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.
ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಇಲ್ಲಿಯವರಲ್ಲ. ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಅವರು ಸೋತಾಗಲೂ ಜನರ ನಡುವೆ ಇದ್ದು ತಪಸ್ಸಿನಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿ ಕಾರಜೋಳ ಅವರು ಹಿಂದುಳಿದವರು, ದಲಿತರು, ಶ್ರಮಿಕರು, ದುಡಿಯುವ ವರ್ಗಗಳಿಗೆ ಏನೇನೂ ಮಾಡಿಲ್ಲ. ಕಾರಜೋಳ ಅವರ ಬಳಿ ಸಿಕ್ಕಾಪಟ್ಟೆ ಹಣ ಇರಬಹುದು. ಆದರೆ ಚಂದ್ರಪ್ಪ ಅವರಲ್ಲಿ ಜನಸೇವೆ ಮಾಡುವ ಸಜ್ಜನಿಕೆ, ಕಾಳಜಿ ಇದೆ. ಆದ್ದರಿಂದ ಚಿತ್ರದುರ್ಗದ ಜನತೆ “ಮಿಸ್ಟರ್ ಕಾರಜೋಳ್ ಪ್ಲೀಸ್ ಗೋ ಬ್ಯಾಕ್” ಎಂದು ಒಕ್ಕೋರಲಿನಿಂದ ಹೇಳಬೇಕು ಎಂದು ಸಿಎಂ ಕರೆ ನೀಡಿದ್ದಾರೆ.
ಆರ್.ಎಸ್.ಎಸ್ ನಲ್ಲಿ ಈ ಬಿಜೆಪಿ ನಾಯಕರಿಗೆ ಸುಳ್ಳು ಹೇಳುವ ತರಬೇತಿ ಕೊಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಿಕೊಂಡು ತಿರುಗ್ತಾ ಇದಾರೆ. ರಾಜ್ಯದ ಜನರ ಪಾಲಿನ ಬರಗಾಲದ ಹಣ ಏಕೆ ವಾಪಾಸ್ ಕೊಡಲಿಲ್ಲ ಎಂದು ನಾಡಿನ ಜನತೆ ಪ್ರಶ್ನೆ ಕೇಳಿದ್ರು. ಆದರೆ ರಾಜ್ಯ ಸರ್ಕಾರ 3 ತಿಂಗಳು ಲೇಟಾಗಿ ಮನವಿ ಮಾಡಿದ್ದಾಗಿ ಅಮಿತ್ ಶಾ ಭಯಂಕರ ಸುಳ್ಳು ಹೇಳಿದರು. ಬಡವರ ರಕ್ತ ಕುಡಿಯುವ ಇವರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ. ಇಷ್ಟು ಭೀಕರ ಬರಗಾಲ ಬಂದಿದ್ದರೂ ಒಂದೇ ಒಂದು ರೂಪಾಯಿ ರಾಜ್ಯದ ಪಾಲಿನ ಹಣ ಕೊಡದೆ ಸುಳ್ಳು ಹೇಳಿಕೊಂಡು ತಿರುಗ್ತೀರಲ್ಲಾ, ನಾಚಿಕೆ ಇಲ್ವಾ ನಿಮಗೆ ಅಮಿತ್ ಶಾ ಅವರೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಡಿ.ಸುಧಾಕರ್, ಲೋಕಸಭಾ ಅಭ್ಯರ್ಥಿ ಚಂದ್ರಪ್ಪ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ರಘುಮೂರ್ತಿ, ವೀರೇಂದ್ರ ಪಪ್ಪಿ, ಪಾವಗಡ ವೆಂಕಟೇಶ್, ಗೋವಿಂದಪ್ಪ, ಬಸಂತಪ್ಪ ಸೇರಿ ಚಿತ್ರದುರ್ಗ ದಾವಣಗೆರೆ ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರುಗಳು, ಜಿಲ್ಲಾ ಹಾಗೂ ತಾಲ್ಲೂಕು, ಬ್ಲಾಕ್ ಮಟ್ಟದ ಮುಖಂಡರುಗಳು ಉಪಸ್ಥಿತರಿದ್ದರು.
ಯಡಿಯೂರಪ್ಪನವರ ಜೊತೆ ಸರ್ಕಾರ ಮಾಡಿದ್ದು ಸುವರ್ಣ ಯುಗ: ಹೆಚ್.ಡಿ.ಕುಮಾರಸ್ವಾಮಿ