Health Tips: ಬೆಳ್ಳುಳ್ಳಿ ಅದೆಷ್ಟು ಆರೋಗ್ಯಕರ ಅನ್ನೋದು ಎಲ್ಲರಿಗೂ ಗೊತ್ತು. ಹಸಿ ಬೆಳ್ಳುಳ್ಳಿ ಸೇವನೆಯಿಂದ ಗ್ಯಾಸ್ಟಿಕ್ ಸಮಸ್ಯೆ ಹೋಗಲಾಡಿಸಬಹುದು. ಆದರೆ ಹಸಿ ಬೆಳ್ಳುಳ್ಳಿ ತಿನ್ನುವವರ ಸಂಖ್ಯೆ ಕಡಿಮೆ. ಕಾರಣ, ಅದು ಸೇವಿಸಲು ಖಾರ ಖಾರವಾಗಿರುತ್ತದೆ. ಆದರೆ ಇದಕ್ಕೊಂದು ಉಪಾಯವಿದೆ. ನೀವು ರೊಟ್ಟಿ, ಚಪಾತಿ ತಿನ್ನುವಾಗ ಹೇಗೆ ಹಸಿ ಈರುಳ್ಳಿ ತಿಂತೀರೋ, ಅದೇ ರೀತಿ ಬೆಳ್ಳುಳ್ಳಿ ತಿನ್ನಿ. ಇದರಿಂದ ಹೊಟ್ಟೆ ನೋವಿನ ಸಮಸ್ಯೆ, ಗ್ಯಾಸ್ಟಿಕ್ ಸಮಸ್ಯೆ ದೂರವಾಗುತ್ತದೆ.
ಇನ್ನು ಹುರಿದ ಬೆಳ್ಳುಳ್ಳಿ ಸೇವನೆಯಿಂದಲೂ ಹಲವು ಲಾಭಗಳಿದೆ. ಹುರಿದ ಬೆಳ್ಳುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸುಟ್ಟು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ, ಗ್ಯಾಸ್ಟಿಕ್, ಅಜೀರ್ಣ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಈ ಕಾರಣಕ್ಕೆ ಕಾಳಿನ ಸಾರು ಮಾಡಿದಾಗ, ಬೆಳ್ಳುಳ್ಳಿ ಒಗ್ಗರಣೆ ಕೊಡಲಾಗುತ್ತದೆ. ಕಾಳು ವಾಯುಕಾರಕವಾಗಿರುವ ಕಾರಣಕ್ಕೆ, ಹೊಟ್ಟೆ ಉಬ್ಬರ ಹೆಚ್ಚಾಗಬಾರದು ಎಂದು ಅದರೊಂದಿಗೆ ಬೆಳ್ಳುಳ್ಳಿ ಒಗ್ಗರಣೆ ಕೊಡಲಾಗುತ್ತದೆ.
ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಬೇಕು ಅಂದ್ರೆ ನೀವು ಬೆಳ್ಳುಳ್ಳಿ ಸೇವನೆ ಮಾಡಬೇಕು. ವಾರದಲ್ಲಿ ಒಮ್ಮೆಯಾದರೂ ಬೆಳ್ಳುಳ್ಳಿ ರೈಸ್ ಮಾಡಿ ತಿನ್ನಿ. ಪ್ಯಾನ್ ಬಿಸಿ ಮಾಡಿ, ತುಪ್ಪ, ಸಾಸಿವೆ, ಜೀರಿಗೆ, ಶೇಂಗಾ, ಕಡಲೆ ಬೇಳೆ, ಹೆಸರು ಬೇಳೆ, ಹಸಿಮೆಣಸು, ಕರಿಬೇವಿನ ಎಲೆ ಹಾಕಿ ಹುರಿಯಿರಿ. ಬಳಿಕ 10ರಿಂದ 20 ಎಸಳು ಬೆಳ್ಳುಳ್ಳಿ ಜಜ್ಜಿ ಹಾಕಿ ಹುರಿಯಿರಿ. ನಂತರ ಈರುಳ್ಳಿ ಸೇರಿಸಿ ಹುರಿದು, ಉಪ್ಪು, ಅನ್ನ, ನಿಂಬೆರಸ, ಕೊತ್ತೊಂಬರಿ ಸೊಪ್ಪು ಹಾಕಿದ್ರೆ ಬೆಳ್ಳುಳ್ಳಿ ರೈಸ್ ರೆಡಿ. ಹೀಗೆ ಮಾಡಿದ್ರೆ ತಿಂಡಿ ತಿನ್ನುವ ಮೂಲಕ ನೀವು, ಹುರಿದ ಬೆಳ್ಳುಳ್ಳಿ ತಿನ್ನುವಿರಿ. ಆದರೆ ಇಲ್ಲಿ ನೀವು ತುಪ್ಪ ಅಥವಾ ತೆಂಗಿನ ಎಣ್ಣೆಯ ಉಪಯೋಗ ಮಾಡಲೇಬೇಕು.
ಬೆಳ್ಳುಳ್ಳಿ ರಕ್ತ ಶುದ್ಧೀಕರಿಸುತ್ತದೆ. ಬಿಪಿ ನಿಯಂತ್ರಿಸುತ್ತದೆ. ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಹೀಗೆ ಅನೇಕ ಗುಣಗಳನ್ನು ಬೆಳ್ಳುಳ್ಳಿ ಹೊಂದಿರುತ್ತದೆ. ಇದನ್ನು ತಿಂದರೆ ಅಲರ್ಜಿ ಎಂದಲ್ಲಿ ಮಾತ್ರ, ನೀವು ವೈದ್ಯರ ಬಳಿ ಸಲಹೆ ಪಡೆಯುವುದು ಸೂಕ್ತ.