Health Tips: ನಮ್ಮ ಊಟವನ್ನು ಪರಿಪೂರ್ಣಗೊಳಿಸುವ ಪದಾರ್ಥ ಎಂದರೆ ಮೊಸರು. ಮೊದಲು ಅನ್ನ ಸಾರು, ಪಲ್ಯ ಎಲ್ಲವೂ ತಿಂದು, ಕೊನೆಯಲ್ಲಿ ಮೊಸರು ಅಥವಾ ಮಜ್ಜಿಗೆಯಿಂದ ಊಟ ಮಾಡುವುದು ಪದ್ಧತಿ. ಮೊಸರು ಅಥವಾ ಮಜ್ಜಿಗೆ ಸೇವಿಸಿದ ಬಳಿಕ, ಬೇರೆ ಏನನ್ನೂ ಸೇವಿಸಬಾರದು ಎಂಬ ನಿಯಮವಿದೆ. ಈ ನಿಯಮ ಮಾಡಿರುವುದು ಏಕೆಂದರೆ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗಲಿ ಮತ್ತು ನಮ್ಮ ಆರೋಗ್ಯ ಚೆನ್ನಾಗಿರಲಿ ಎಂದು. ಹಾಗಾಗಿ ಇಂದು ನಾವು ಮೊಸರಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ.
ಮೊಸರನ್ನು ಸೂರ್ಯಾಸ್ತದ ಮುನ್ನವೇ ತಿನ್ನಬೇಕು. ಸೂರ್ಯಾಸ್ತವಾದ ಬಳಿಕ ಮೊಸರಿನ ಸೇವನೆ ಮಾಡಿದರೆ, ಅದು ಆರೋಗ್ಯಕ್ಕೆ ಉತ್ತಮವಲ್ಲ. ಹಾಗಾಗಿ ಮೊಸರನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನವಷ್ಟೇ ಸೇವಿಸಬೇಕು. ಮೊಸರಿನ ಸೇವನೆಯಿಂದ ನಾವು ತಿಂದ ಆಹಾರ ಸರಳವಾಗಿ ಜೀರ್ಣವಾಗುತ್ತದೆ. ಗ್ಯಾಸ್ ಮತ್ತು ಆ್ಯಸಿಡಿಟಿ ಸಮಸ್ಯೆ ಇದ್ದಲ್ಲಿ, ಮೊಸರಿನ ಸೇವನೆ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
ಆಹಾರ ಸರಿಯಾಗಿ ಜೀರ್ಣವಾದಾಗ, ಮಲ ಮೂತ್ರ ವಿಸರ್ಜನೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಮಲಬದ್ದತೆ ಸಮಸ್ಯೆ ಇದ್ದವರು ಮೊಸರಿನ ಸೇವನೆ ಮಾಡಿದರೆ, ಮಲವಿಸರ್ಜನೆಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಮೊಸರು ಸೇವಿಸುವಾಗ, ಅದಕ್ಕೆ ಕೊಂಚ ನೀರು ಹಾಕಿ ಸೇರಿಸಿ. ಇದರಿಂದ ನಿಮ್ಮ ದೇಹ ತಂಪಾಗುತ್ತದೆ.
ಇನ್ನು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಬೇಕು ಅಂದ್ರೆ, ನೀವು ಪ್ರತಿದಿನ ಮೊಸರಿನ ಸೇವನೆ ಮಾಡಬೇಕು. ಸೂರ್ಯನಿರುವ ಸಮಯದಲ್ಲಿ ನೀವು ಮೊಸರಿನ ಸೇವನೆ ಮಾಡುವುದರಿಂದ ಅದು ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಚೈತನ್ಯ ತುಂಬುತ್ತದೆ.
ನಮ್ಮ ಮೂಳೆಗಳು ಗಟ್ಟಿಮುಟ್ಟಾಗಬೇಕು, ನಮ್ಮ ದೇಹಕ್ಕೆ ಶಕ್ತಿ ಬೇಕು, ನಾವು ಬಲಶಾಲಿಯಾಗಬೇಕು ಅಂದ್ರೆ, ಮೊಸರಿನ ಸೇವನೆ ಮಾಡಬೇಕು. ಎಷ್ಟೋ ಕ್ರೀಡಾಪಟುಗಳು, ಸೆಲೆಬ್ರಿಟಿಗಳು, ಡಯಟ್ ಪಾಲಿಸುವವರು ತಮ್ಮ ಮಧ್ಯಾಹ್ನದ ಊಟ ಮತ್ತು ಬೆಳಗ್ಗಿನ ತಿಂಡಿಯಲ್ಲಿ ತಪ್ಪದೇ ಮೊಸರಿನ ಸೇವನೆ ಮಾಡುತ್ತಾರೆ.
ಏಕೆಂದರೆ, ಮೊಸರಿನ ಸೇವನೆಯಿಂದ ಬರೀ ದೇಹದ ಆರೋಗ್ಯ ಚೆನ್ನಾಗಿರುವುದಲ್ಲದೇ, ಕೂದಲ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ನಮ್ಮ ತ್ವಚೆ ಆರೋಗ್ಯಕರವಾಗಿರುತ್ತದೆ. ದೇಹದ ತೂಕ ಕಳೆದುಕೊಳ್ಳಬೇಕು. ಫಿಟ್ ಆಗಿರಬೇಕು ಅಂದ್ರೆ ಕೂಡ ಮೊಸರಿನ ಸೇವನೆ ಮಾಡಬೇಕು. ಹಾಗಾಗಿ ಕ್ರೀಡಾಪಟುಗಳು, ಡಯಟ್ ಮಾಡುವವರು ಮೊಸರಿನ ಸೇವನೆ ಮಾಡುತ್ತಾರೆ.
ಇದೆಲ್ಲ ಮೊಸರಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳು. ಆದರೆ ಯಾವಾಗ ಮೊಸರಿನ ಸೇವನೆ ಮಾಡಬಾರದು..? ಮೊಸರಿನ ಸೇವನೆ ಮಾಡುವಾಗ ಯಾವ ತಪ್ಪು ಮಾಡಬಾರದು ಅಂತಾ ಮುಂದಿನ ಭಾಗದಲ್ಲಿ ತಿಳಿಯೋಣ.