Political News: ಬೆಂಗಳೂರು, ಜುಲೈ 24: ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜನ-ಜೀವನ ಹಾಗೂ ಆಸ್ತಿ-ಪಾಸ್ತಿ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಸಚಿವರು, “ಜೂನ್ ತಿಂಗಳಲ್ಲಿ ರಾಜ್ಯಕ್ಕೆ ಮಳೆ ಶೇ.56ರಷ್ಟು ಕೊರತೆಯಾಗಿತ್ತು. ಆದರೆ ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಹೀಗಾಗಿ ಮಳೆ ಕೊರತೆಯ ಪ್ರಮಾಣ ಶೇ.56 ರಿಂದ ಶೇ.14ಕ್ಕೆ ಇಳಿದಿದೆ. ರಾಜ್ಯದಲ್ಲಿ ಒಟ್ಟಾರೆ ಶೇ.80 ರಷ್ಟು ಮಳೆಯಾಗಿದೆ. ಕಳೆದ ಒಂದು ವಾರದಿಂದ ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಭಾಗಗಳಾದ ಬೀದರ್ ಹಾಗೂ ಕಲಬುರಗಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜನ-ಜೀವನ ಮತ್ತು ಆಸ್ತಿ-ಪಾಸ್ತಿಗಳ ನಷ್ಟವಾಗದಂತೆ ಮುಂಜಾಗ್ರತಾ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.
ಎಲ್ಲೆಲ್ಲಿ ಮಳೆ?
ಉತ್ತರ ಒಳನಾಡು ಭಾಗಗಳಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ವಾಡಿಕೆಗಿಂತ ಶೇ.170 ರಷ್ಟು ಅಧಿಕ ಮಳೆಯಾಗಿದೆ. ಗುಲಬುರ್ಗಾ ಜಿಲ್ಲೆಯಲ್ಲಿ ಶೇ. 300, ಯಾದಗಿರಿ ಶೇ.160, ಬೀದರ್ ಶೇ.155, ಬೆಳಗಾವಿಯಲ್ಲಿ ಶೇ.186, ಬಾಗಲಕೋಟೆ ಶೇ.174, ವಿಜಯಪುರ ಶೇ.185 ಹಾಗೂ ಗದಗ ಜಿಲ್ಲೆಯಲ್ಲಿ ಶೇ.166 ರಷ್ಟು ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಎಲ್ಲೆಲ್ಲಿ ಮಳೆ ಕೊರತೆ?
ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದರೂ, ಬೆಂಗಳೂರು ನಗರ, ಬೆಂ-ಗ್ರಾಮೀಣ, ರಾಮನಗರ, ಕೋಲಾರ, ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ.
ಕಳೆದ ಕೆಲ ವಾರದಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರೂ, ಅಲ್ಲಿನ ವಾಡಿಕೆ ಮಳೆಗಿಂತ ಈಗಿನ ಒಟ್ಟಾರೆ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ, ಜುಲೈ.28ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆ ವರದಿ ಇದ್ದು, ಮಳೆ ಕೊರತೆ ನೀಗುವ ವಿಶ್ವಾಸವಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಬರ ಮಾನದಂಡ ಬದಲಿಸಲು ಕೇಂದ್ರಕ್ಕೆ ಪತ್ರ:
ರಾಜ್ಯದ 85 ತಾಲೂಕುಗಳಲ್ಲಿ ಶೇ.20ರಷ್ಟು ಮಳೆ ಕೊರತೆಯಾಗಿದೆ. ಈ ತಾಲೂಕುಗಳಲ್ಲಿ ಬರ ಘೋಷಣೆ ಸಂಬಂಧ ಚಿಂತನೆ ನಡೆಸಲಾಗುತ್ತಿದೆ. ಆದರೆ, ಕೇಂದ್ರದ “ಬರ ಮಾನದಂಡ” ಕಠಿಣವಾಗಿದ್ದು, ಇದನ್ನು ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ಸಚಿವ ಕೃಷ್ಣಭೈರೇಗೌಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2016ರಲ್ಲಿ ಕೇಂದ್ರ ಸರ್ಕಾರದ “ಬರ ಮಾನದಂಡ” ಬದಲಾಗಿದೆ. ಅದಕ್ಕೂ ಮುನ್ನ ಶೇ.20 ರಷ್ಟು ಮಳೆ ಕೊರತೆಯಾಗಿದ್ದರೂ ‘ಬರ’ ಎಂದು ಪರಿಗಣಿಸಲಾಗಿತ್ತು. ಆದರೆ, ಈಗ ಬರ ಘೋಷಣೆಗೆ ಶೇ.60ರಷ್ಟು ಮಳೆ ಕೊರತೆಯಾಗಿರಬೇಕು. ಅಲ್ಲದೆ, ಸತತ ಮೂರು ವಾರಗಳ ಕಾಲ ಮಳೆಯಾಗಿರಬಾರದು ಎಂಬ ಮಾನದಂಡವನ್ನು ನೀಡಲಾಗಿದೆ.
ಆದರೆ, ಇತ್ತೀಚೆಗೆ ಹವಾಮಾನ ಸಾಕಷ್ಟು ಬದಲಾಗಿದೆ. ಮೂರು ವಾರ ಮಳೆ ಬರದಂತಹ ಹಾಗೂ ಮೂರು ವಾರದ ಮಳೆ ಒಂದೇ ದಿನ ಸುರಿಯುವಂತಹ ಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಹೀಗಾದಲ್ಲಿ ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ‘ಬರ’ ಘೋಷಣೆ ಸಾಧ್ಯವಿಲ್ಲ. ಆದರೆ, ಇಂತಹ ಪರಿಸ್ಥಿತಿಯಿಂದಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ‘ಬರ’ ಘೋಷಣೆ ಮಾನದಂಡ ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಬರೆದು ಒತ್ತಾಯಿಸಿದ್ದಾರೆ” ಎಂದು ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.
ಜಲಾಶಯಗಳಲ್ಲಿ ನೀರಿನ ಮಟ್ಟ ಸುಧಾರಣೆ:
ಜೂನ್ ತಿಂಗಳಲ್ಲಿ ಮಳೆಯಾಗಿದ್ದ ಪರಿಣಾಮ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಶೇ.20 ರಷ್ಟು ಮಾತ್ರ ಇತ್ತು. ಆದರೆ, ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಶೇ.40 ರಿಂದ ಶೇ.50 ಕ್ಕೆ ಏರಿಕೆಯಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದರು.
ಕಳೆದ ಏಳು ದಿನಗಳ ಅವಧಿಯಲ್ಲಿ ರಾಜ್ಯಾದ್ಯಂತ 144 ಟಿಎಂಸಿ ನೀರಿನ ಸಂಗ್ರಹಣೆ ಅಧಿಕವಾಗಿರುತ್ತದೆ. ನಿನ್ನೆ ಒಂದೇ ದಿನ 40 ಟಿಎಂಸಿ ಸಂಗ್ರಹಣೆಯಾಗಿದೆ. ಕಾವೇರಿ ನದಿಪಾತ್ರಕ್ಕೆ ಸಂಬಂಧಿಸಿದ ನಾಲ್ಕು ಜಲಾಶಯಗಳಾದ ಹಾರಂಗಿ, ಕಬಿನಿ, ಕಪಿಲಾ ಮತ್ತು ಹೇಮಾವತಿ ಜಲಾಶಯಗಳಿಗೆ 67,278 ಕ್ಯೂಸೆಕ್ ಒಳಹರಿವು ಇದೆ. ಕಬಿನಿ ಕೆಆರ್ ಎಸ್ ಜಲಾಶಯದಿಂದ 9,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಕೃಷ್ಣ ಜಲಾನಯನ ಪ್ರದೇಶದಲ್ಲಿ ಜೂನ್ ತಿಂಗಳಲ್ಲಿ ಭಾರೀ ಮಳೆ ಕೊರತೆಯಾಗಿತ್ತು. ಆದರೆ, ಈ ಕೊರತೆಯನ್ನು ಜುಲೈ ಮಳೆ ನಿರೀಕ್ಷಿತ ಮಟ್ಟಕ್ಕೆ ಸರಿದೂಗಿಸಿದೆ. ಮಲಪ್ರಭ, ಘಟಪ್ರಭ, ಆಲಮಟ್ಟಿ, ನಾರಾಯಣಪುರ ಹಾಗೂ ತುಂಗಭದ್ರ ಜಲಾಶಯಗಳಲ್ಲಿ ಒಟ್ಟಾರೆ 2,61,000 ಕ್ಯೂಸೆಕ್ ನೀರು ಒಳಹರಿವಿದೆ. ಆಮಲಮಟ್ಟಿ ಒಂದರಲ್ಲೇ 1,14,445 ಕ್ಯೂಸೆಕ್ ನೀರು ಬರುತ್ತಿದೆ. ತುಂಗಭದ್ರದಲ್ಲೂ 47,294 ಕ್ಯೂಸೆಕ್ ನೀರು ಒಳಹರಿವು ಇದ್ದು, ನೀರಿನ ಸಂಗ್ರಹ ಹೆಚ್ಚಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳಿಗೆ ಹೈ-ಅಲರ್ಟ್ ಸೂಚನೆ
ಕಲಬುರಗಿ- ಬೀದರ್ ಜಿಲ್ಲೆಗಳಲ್ಲಿ ವಾಡಿಕೆಗಿಂತ ಈಗಾಗಲೇ ಅಧಿಕ ಮಳೆಯಾಗಿದೆ. ಅಲ್ಲದೆ, ಮುಂದಿನ ನಾಲ್ಕು ದಿನಗಳಲ್ಲಿ ಬೀದರ್, ಕಲಬುರಗಿ, ಯಾದಗಿರಿ ಬಿಜಾಪುರ ಭಾಗದಲ್ಲಿ ತೀವ್ರ ಮಳೆಯಾಗಲಿದೆ ಎಂಬ ಸೂಚನೆ ಇದೆ. ಬೆಳಗಾವಿ ಭಾಗದಲ್ಲೂ ಉತ್ತಮ ಮಳೆಯಾಗಲಿದೆ.
ಅಲ್ಲದೆ, ಮಹಾರಾಷ್ಟ್ರದ ಉಜಿನಿ ಅಣೆಕಟ್ಟೆಯಿಂದ ಇನ್ನೂ ನೀರು ಬಿಡುಗಡೆಯಾಗಿಲ್ಲ. ಅಲ್ಲಿ ನೀರು ಬಿಡುಗಡೆಯಾದರೆ, ಭೀಮಾ ನದಿಪಾತ್ರ ವಿಕೋಪಕ್ಕೆ ತಿರುಗಲಿದೆ. ಜನವಸತಿಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಸ್ಥಳಗಳಲ್ಲಿ ಸ್ಥಳೀಯ ಪರಿಸ್ಥಿತಿಗಳನ್ನು ಗಮನಿಸಿ ಜನ-ಜೀವನ ಆಸ್ತಿ-ಪಾಸ್ತಿಗಳಿಗೆ ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮವಹಿಸುವಂತೆ ಮೇಲ್ಕಂಡ ಎಲ್ಲ ಜಿಲ್ಲಾಧಿಕಾರಿಗಳಿಗೆ ಹೈ-ಅಲರ್ಟ್ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Pune police: ಪೊಲೀಸ್ ಅಧಿಕಾರಿಯ ಮನೆಯಲ್ಲೇ ರಿವಲ್ವಾರ್ ನಿಂದ ಗುಂಡಿನ ಶಬ್ದ
Dhakshina Kannada Rain : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ