Moral story
ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ.ಆತ ಮಹಾಜಿಮಣ. ತಾನು ಗಳಿಸಿಟ್ಟ ಹಣವನ್ನು ಯಾರಾದರೂ ತೆಗೆದುಕೊಂಡು ಹೋದಾರು ಎನ್ನುವ ಭಯದಿಂದ ತನ್ನೆಲ್ಲಾ ಸಂಪತ್ತನ್ನು ಊರಾಚೆ ಇರುವ ಬನ್ನಿ ಗಿಡದ ಕೆಳಗೆ ಹುದುಗಿಸಿಡುತ್ತಾನೆ. ಪ್ರತಿನಿತ್ಯ ರಾತ್ರಿ ಕಂದೀಲು ಹಿಡಿದು ಆ ಸ್ಥಳಕ್ಕೆ ಬಂದು ಎಲ್ಲವೂ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಹೋಗುತ್ತಿರುತ್ತಾನೆ.
ಇದೇ ಸಂದರ್ಭದಲ್ಲಿ ತನ್ನ ಬಳಿ ಸಾಲ ತೆಗೆದುಕೊಂಡಿದ್ದ ಬಡವನಿಗೆ ಹಣ ಹಿಂದಿರುಗಿಸುವಂತೆ ಶ್ರೀಮಂತ ದುಂಬಾಲು ಬೀಳುತ್ತಾನೆ. ಕೊಟ್ಟ ಹಣವನ್ನೇನಾದರೂ ಹಿಂದಿರುಗಿಸದಿದ್ದರೆ ಮನೆಯನ್ನು ಹರಾಜು ಹಾಕುವೆ ಎಂದು ಬೆದರಿಸುತ್ತಾನೆ. ಶ್ರೀಮಂತನ ಮಾತಿಗೆ ಬಡವ ತೀರಾ ನೋಯುತ್ತಾನೆ. ತನ್ನ ಸ್ಥಿತಿಗೆ ಬೇಸತ್ತು ನಡು ಕತ್ತಲಲ್ಲಿ ಊರಾಚೆ ಇರುವ ಬನ್ನಿ ಮರದ ಬಳಿ ಬರುತ್ತಾನೆ. ಸಾಯಲು ನಿರ್ಧರಿಸುತ್ತಾನೆ.
ಅಷ್ಟು ಹೊತ್ತಿಗೆ ಕಂದೀಲು ಹಿಡಿದುಕೊಂಡು ವ್ಯಕ್ತಿಯೋರ್ವ ಅಲ್ಲಿಗೆ ಬರುತ್ತಿರುವುದನ್ನು ನೋಡುತ್ತಾನೆ. ಬಡವ ಮರದ ಹಿಂದಿರುವ ಪೊಟರೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ಮುಂದೇನಾಗುತ್ತದೆ ಎಂದು ಕುತೂಹಲದಿಂದ ನೋಡುತ್ತಾನೆ.
ಎಂದಿನಂತೆ ಶ್ರೀಮಂತ ಮರದ ಕೆಳಗೆ ಮಣ್ಣು ಅಗೆದು, ಬಚ್ಚಿಟ್ಟಿದ್ದ ದುಡ್ಡು, ಒಡವೆಗಳನ್ನೆಲ್ಲ ಕಣ್ಣಿಗೊತ್ತಿಕೊಂಡು ಮತ್ತೆ ಮರಳಿ ಅಲ್ಲಿಯೇ ಇರಿಸಿ ಮನೆಗೆ ತೆರಳುತ್ತಾನೆ. ಶ್ರೀಮಂತ ಹೋದ ನಂತರ ಬಡವ ನಿಧಾನವಾಗಿ ಹಣವನ್ನು ಬಚ್ಚಿಟ್ಟಿರುವ ಜಾಗದತ್ತ ಬರುತ್ತಾನೆ. ಅಲ್ಲಿ ಅವಿತಿಟ್ಟಿದ್ದ ಅಪಾರ ಸಂಪತ್ತನ್ನು ತೆಗೆದುಕೊಂಡು ಮನೆಗೆ ತೆರಳುತ್ತಾನೆ. ಮಾರನೆಯ ದಿನ ಶ್ರೀಮಂತನ ಮನೆಗೆ ಬಂದು ಅವನು ಕೊಟ್ಟ ಸಾಲಕ್ಕಿಂತ ದುಪ್ಪಟ್ಟು ಹಣವನ್ನು ನೀಡುತ್ತಾನೆ. ಉಳಿದ ಹಣದಲ್ಲಿ ತನಗೆ ಬೇಕಾದಷ್ಟನ್ನು ಇಟ್ಟುಕೊಂಡು ಇನ್ನುಳಿದುದನ್ನು ಬಡವರಿಗೆ ಹಂಚಿಬಿಡುತ್ತಾನೆ. ಆ ರಾತ್ರಿಯೇ ಹಳ್ಳಿಯನ್ನು ಬಿಟ್ಟು ಮತ್ತೊಂದು ಊರಿಗೆ ತೆರಳುತ್ತಾನೆ.
ಅದೇ ರಾತ್ರಿ ಶ್ರೀಮಂತ ಎಂದಿನಂತೆ ಬನ್ನಿ ಗಿಡದ ಕೆಳಗೆ ಅಗೆದು ನೋಡಿದರೆ ಅಲ್ಲೇನು ಇರುವುದಿಲ್ಲ. ಯಾರೊಂದಿಗೂ ಹೇಳಿಕೊಳ್ಳಲಾಗದೇ ಗೋಳಾಡುತ್ತಾನೆ.