ಹಿಜಾಬ್ ವಿವಾದ (Hijab Controversy) ಕುರಿತಂತೆ ಹೈಕೋರ್ಟ್ (high court) ನ ತ್ರಿಸದಸ್ಯ ಪೀಠ ಎರಡು ವಾರಗಳ ಕಾಲ ಸತತವಾಗಿ ವಾದ-ಪ್ರತಿವಾದಗಳನ್ನು ಕೇಳುತ್ತಾ ವಿಚಾರಣೆಯನ್ನು ನಡೆಸಿದೆ. ಹಿಜಾಬ್ ಧರಿಸಲು ಅವಕಾಶ ಕೋರಿ ಅರ್ಜಿ ಅರ್ಜಿ ಸಲ್ಲಿಸಿದವರ ಪರ ದೇವದತ್ ಕಾಮತ್ (Devdath Kamath) ವಾದವನ್ನು ಮಾಡಿಸಿದ್ದು, ಸರ್ಕಾರದ ಪರವಾಗಿ ಅಡ್ವಕೇಟ್ ಜನರಲ್ ಪ್ರಭುಲಿಂಗ್ ನಾವದಗಿ (Prabhuling Navadagi) ವಾದವನ್ನು ಮಂಡಿಸಿದರು. ಎರಡು ವಾರಗಳ ಕಾಲ ವಿಚಾರಣೆ ನಡೆಸಿದ ಹೈಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆಯನ್ನು ಅಂತಿಮಗೊಳಿಸಿ ನ್ಯಾಯಾಂಗ ತೀರ್ಪನ್ನು ಕಾಯ್ದಿರಿಸಿದೆ. ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ.ಜೆಎಂ ಖಾಜಿ ಅವರಿದ್ದ ಪೂರ್ಣ ಪೀಠ ಫೆ.10 ರಂದು ಅರ್ಜಿ ವಿಚಾರಣೆ ಪ್ರಾರಂಭಿಸಿತ್ತು. ಎರಡು ವಾರಗಳ ಕಾಲ ಸತತ ವಿಚಾರಣೆ ನಡೆದಿದೆ. ಸರ್ಕಾರಿ ಆದೇಶವನ್ನು ಉಡುಪಿಯ ಸರ್ಕಾರಿ ಪದವಿಪೂರ್ವ ವಿದ್ಯಾರ್ಥಿನಿಯರ ಕಾಲೇಜು ಹಾಗೂ ಮತ್ತಿತರರು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಹಿಜಾಬ್ ಅಥವಾ ಹೆಡ್ ಸ್ಕಾರ್ಫ್ ಇಸ್ಲಾಮ್ ನ ಕಡ್ಡಾಯ ಭಾಗವಾಗಿದೆ. ಕೇರಳ ಹಾಗೂ ಮದ್ರಾಸ್ ಹೈಕೋರ್ಟ್ ಗಳು ಇಸ್ಲಾಮಿಕ್ ಗ್ರಂಥಗಳನ್ನು ಪರಿಶೀಲಿಸಿ ಈ ನಿರ್ಧಾರಕ್ಕೆ ಬಂದಿವೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ. ಪ್ರತಿವಾದ ಮಂಡಿಸಿರುವ ಸರ್ಕಾರಿ ಪರ ವಕೀಲರು, ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡಿದ್ದು, ಹಿಜಾಬ್ ಕೂಡ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಹೇಳಿದ್ದು ಸುಪ್ರೀಂ ಕೋರ್ಟ್ ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದೆ. ಶಿರೂರು ಮಠದ ಪ್ರಕರಣದಿಂದ ಮೊದಲುಗೊಂಡು ಶಬರಿಮಲೆ ಪ್ರಕರಣಗಳವರೆಗೆ ತಮ್ಮ ವಾದಗಳ ಸಮರ್ಥನೆಗೆ ಉಲ್ಲೇಖಗಳನ್ನು ನೀಡುತ್ತಾ, ಹಿಜಾಬ್ ಸಂವಿಧಾನದ ಆರ್ಟಿಕಲ್ 25 ರ ಅಡಿಯಲ್ಲಿ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಹೇಳಿದ್ದಾರೆ.