Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಗ್ರಾಮೀಣ ಪೋಲೀಸ್ ಠಾಣೆ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ ಮೀನಿನಂತೆ ಈಜುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ.
ಇನ್ಸ್ಪೆಕ್ಟರ್ ಒಳಗೊಂಡಿದ್ದ 6 ಜನರ ಪ್ರೈಡ್ ಆಫ್ ಇಂಡಿಯಾ ತಂಡ, ಇಂಗ್ಲೆಂಡ್ ಗೆ ಹೋಗಿ, ಅಲ್ಲಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ, ಭಾರತದ ಕೀರ್ತಿ ಪತಾಕೆ ಹಾರಿಸಿದೆ. 43 ಕಿ.ಮೀ. ಉದ್ದದ ಇಂಗ್ಲಿಷ್ ಕಾಲುವೆಯನ್ನು 13 ಗಂಟೆ 37 ನಿಮಿಷಗಳಲ್ಲಿ ಈಜುವ ಮೂಲಕ ಸಾಧನೆ ಮಾಡಿದೆ ಈ ತಂಡ.
ಇಂಗ್ಲೆಂಡ್‌ನ ಸ್ಯಾಮ್‌ಥೈರ್ ಹೊಯ್ ದಡದಿಂದ ಈ ಈಜು ಆರಂಭವಾಗಿದ್ದು, ಫ್ರಾನ್ಸ್‌ನ ವಿಸ್ಸೆಂಟ್ ಬೀಚ್‌ನಲ್ಲಿ ಮುಕ್ತಾಯವಾಗಿದೆ. ಮುರುಗೇಶ್ ಅವರ ತಂಡ ಜೂನ್ 16 ರಂದು ಬೆಳಗಿನ 2.15 ಕ್ಕೆ ಈಜು ಆರಂಭಿಸಿ, ಮಧ್ಯಾಹ್ನ 3.52ಕ್ಕೆ ಮುಕ್ತಾಯಗ“ಳಿಸಿದೆ. 13 ರಿಂದ 16 ಡಿಗ್ರಿ ಸೆಲ್ಸಿಯಸ್‌ನಂತಹ ಚಳಿ, ಉಕ್ಕೇರುವ ಅಲೆಗಳ ನಡುವೆಯೂ 43 ಕಿ.ಮೀ.ದೂರವನ್ನು ಕೇವಲ 13.37 ಗಂಟೆಗಳಲ್ಲಿ ಈಜುವ ಮೂಲಕ ಗುರಿ ತಲುಪಿದ್ದಾರೆ.
ಇನ್ನು ಇಂಥ ಸಾಧನೆ ಮಾಡೋದು ಸಾಮಾನ್ಯ ವಿಷಯವೇ ಅಲ್ಲ. ಏಕೆಂದರೆ ಇಂಥ ಸ್ಪರ್ಧೆಯಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಆದರೆ ವಾಂತಿಭೇದಿ, ತಲೆ ಸುತ್ತುವದು, ಇತರೆ ಸಮಸ್ಯೆ ಕಾಡಿದ್ದರೂ ಛಲ ಬಿಡದೆ ಕೆಚ್ಚೆದೆಯಿಂದ ಅಭೂತಪೂರ್ವ ಸಾಧನೆ ಮಾಡಿದ್ದಾರೆ ಮುರುಗೇಶ್ ಅವರ ತಂಡ.
ಈ ಮೂಲಕ ತಮ್ಮ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ, ಭಾರತದ ತ್ರಿವರ್ಣ ಧ್ವಜ ಹಿಡಿದು, ಸಂಭ್ರಮಿಸಿದ್ದಾರೆ.