Saturday, April 26, 2025

Latest Posts

ಜನರಿಗೆ ಒಂದು ಚಿಂತೆಯಾದರೆ, ಇವರದ್ದು ಇನ್ನೊಂದು ಚಿಂತೆ: ಶಾಸಕರ ವೇತನ ಶೇ 50 ರಷ್ಟು ಹೆಚ್ಚಳ‌

- Advertisement -

Political News: ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿಹೋಗಿರುವುದು ಒಂದೆಡೆಯಾದರೆ, ತಮ್ಮ ವೇತನವನ್ನು ಹೆಚ್ಚಳ ಮಾಡಲು ಶಾಸಕರು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಧ್ಯಕ್ಷ ಯು.ಟಿ.ಖಾದರ್‌, ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಉಭಯ ಸದನ ಕಲಾಪ ಸಲಹಾ ಸಮಿತಿ ನಡೆಸಿರುವ ಸಭೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಸೇರಿದಂತೆ ಎಲ್ಲ ಶಾಸಕರು ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿದ್ದಾರೆ. ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ವೇತನ ಪರಿಷ್ಕರಣೆಯ ಪ್ರಸ್ತಾಪವನ್ನು ಮುಂದಿಟ್ಟು ಸುಮಾರು ಶೇ 50ರಷ್ಟು ವೇತನ ಹೆಚ್ಚಿಸುವಂತೆ ಸಭೆಯಲ್ಲಿ ಮನವಿ ಮಾಡಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಶಾಸಕರ ವೇತನ ಪರಿಷ್ಕರಣೆಯ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸುವುದಾಗಿ ಶಾಸಕರಿಗೆ ಭರವಸೆ ನೀಡಿದ್ದಾರೆ.

ಅಲ್ಲದೆ ಬಸವರಾಜ್ ಹೊರಟ್ಟಿ, ಈ ಹಿಂದಿನ 2022ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರ ವೇತನ ಹೆಚ್ಚಳ ಸಂಬಂಧ ವಿಧೇಯಕ ಮಂಡಿಸಲಾಗಿತ್ತು. ಅದರಲ್ಲಿ 5 ವರ್ಷಕ್ಕೆ ವೇತನ ಹೆಚ್ಚಳ ಮಾಡುವ ಕಾಯ್ದೆಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವೇತನ ಹೆಚ್ಚಳ ಮಾಡಬೇಕಾದರೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯ ಇದೆ ಎಂದು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಶಾಸಕರ ಸಂಬಳವನ್ನು ಹೆಚ್ಚಳ ಮಾಡುವ ಕುರಿತು ಎರಡೂ ಸದನಗಳಲ್ಲಿ ಚರ್ಚೆಯಾದ ಬಳಿಕವೇ ಮುಂದಿನ ತೀರ್ಮಾನವನ್ನು ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಇನ್ನೂ ರಾಜ್ಯದ ಶಾಸಕರ ಬಹುದಿನದ ಬೇಡಿಕೆಯಾಗಿರುವ ಶಾಸಕರ ಕ್ಲಬ್‌ಗೆ 20 ಕೋಟಿ ರೂಪಾಯಿಗಳನ್ನೂ ಸಹ ಬಿಡುಗಡೆ ಮಾಡುವ ಸಂಬಂಧ ಚರ್ಚೆಯಾಗಿದೆ. ಇದಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನೀಡಲು ಒತ್ತಾಯಿಸುವುದರ ಬಗ್ಗೆಯೂ ಮಾತುಕತೆಗಳು ನಡೆದಿವೆ.

2022ರಲ್ಲೂ‌ ಶಾಸಕರಿಗೆ ಆಗಿತ್ತು 50% ಸಂಬಳ ಹೈಕ್..

ಇನ್ನೂ ಈ ಬಾರಿಯ ಬೇಡಿಕೆಯಂತೆಯೇ ಕಳೆದ 2022ರಲ್ಲಿಯೂ ಶಾಸಕರು ತಮ್ಮ ಸಂಬಳವನ್ನು ಹೆಚ್ಚಳ ಮಾಡಿಕೊಂಡಿದ್ದರು. ಈ ಹಿಂದೆ 2022ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ತಿದ್ದುಪಡಿ ಮಸೂದೆ 2022 ಹಾಗೂ ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಹಾಗೂ ಭತ್ಯೆಗಳ ತಿದ್ದುಪಡಿ ಮಸೂದೆ 2022 ಅಂದಿನ ವಿಧಾನಸಭೆಯಲ್ಲಿ ಜಾರಿಗೆ ಬಂದಿತ್ತು. ಅಲ್ಲದೆ 2022ರ ಏಪ್ರಿಲ್ 1 ರಿಂದ ಈ ವೇತನ ಹೆಚ್ಚಳ ಜಾರಿಗೆ ಬಂದಿತ್ತು. ಈ ತಿದ್ದುಪಡಿಯಂತೆ ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರ ವೇತನದಲ್ಲಿ ಶೇ 60ರಷ್ಟು, ಮುಖ್ಯಮಂತ್ರಿ ಮತ್ತು ಸಚಿವರ ವೇತನದಲ್ಲಿ ಶೇ50, ಸಭಾಧ್ಯಕ್ಷರು, ಸಭಾಪತಿ ಮತ್ತು ವಿರೋಧ ಪಕ್ಷಗಳ ನಾಯಕರ ವೇತನದಲ್ಲಿ ಶೇ50 ರಷ್ಟು ಜಾಸ್ತಿಯಾಗಿತ್ತು. ಅಲ್ಲದೆ ಆಗ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 92.40 ಕೋಟಿ ರೂ. ಹೆಚ್ಚುವರಿ ಹೊರೆಯಾಗಿತ್ತು. ಈ ಕಾಯ್ದೆ ಪ್ರಕಾರ, ಮುಂದಿನ ಅವಧಿಯಲ್ಲಿ ಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷದ ನಾಯಕರು, ವಿಧಾನಪರಿಷತ್‌ ಸಭಾಪತಿ, ವಿಧಾನಸಭೆಯ ಸಭಾಧ್ಯಕ್ಷರು ಹಾಗೂ ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯನ್ನು ನಿಗದಿತವಾಗಿ ಐದು ವರ್ಷಗಳಿಗೊಮ್ಮೆ ನಡೆಸುವಂತೆ ನಿಯಮ ರೂಪಿಸಲಾಗಿತ್ತು. ಅದರೆ ಇದೀಗ ತಮ್ಮ ಸಂಬಳವನ್ನು ಹೆಚ್ಚಳ ಮಾಡಬೇಕಾದರೆ ತಾವೇ ತಂದ ನಿಯಮಗಳನ್ನು ಮುರಿಯುವ ಸ್ಥಿತಿಗೆ ಶಾಸಕರು ಹಾಗೂ ಮಂತ್ರಿಗಳು ತಲುಪಿದ್ದಾರೆ.‌

- Advertisement -

Latest Posts

Don't Miss