Spiritual Story: ಮನುಷ್ಯನಾದವನು ಶ್ರೀಮಂತನಾಗಬೇಕು ಎಂಬ ಗುರಿಯಿಟ್ಟುಕೊಳ್ಳುವುದು ಉತ್ತಮ. ಆದರೆ ಆ ಗುರಿ ತಲುಪಲು, ಅಡ್ಡದಾರಿ ಹಿಡಿಯುವುದು ತಪ್ಪು. ಅಂಥ ದುಡ್ಡು ಮನೆಯಲ್ಲಿದ್ದರೂ ಒಂದೇ, ಇಲ್ಲದಿದ್ದರೂ ಒಂದೇ, ಅಂಥ ಹಣ ಯಾವುದೇ ಕಾರಣಕ್ಕೂ ಸದುಪಯೋಗವಾಗಲು ಸಾಧ್ಯವೇ ಇಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.
ಅಡ್ಡ ದಾರಿ ಹಿಡಿದು ಗಳಿಸಿದ ಹಣ. ಅಡ್ಡದಾರಿ ಹಿಡಿದು ಗಳಿಸಿದ ಹಣ ಎಂದಿಗೂ ಉತ್ತಮ ಕಾರ್ಯಕ್ಕೆ ಹೋಗುವುದಿಲ್ಲ. ಆ ಹಣದಿಂದ ಯಾವ ಪೂಜೆ ಪುನಸ್ಕಾರ ಮಾಡಿದರೂ, ಅದರ ಪುಣ್ಯ ಪ್ರಾಪ್ತಿಯಾಗುವುದಿಲ್ಲ. ಬೇರೆಯವರಿಗೆ ಮೋಸ ಮಾಡಿ, ಹಿತೈಶಿಗಳಿಗೆ ಮೋಸ ಮಾಡಿ, ಬಡವರಿಗೆ ಸಿಗಬೇಕಾದ ಹಣ ಕಿತ್ತುಕೊಂಡು ಬಳಸುವ ದುಡ್ಡೆಲ್ಲ ಅಡ್ಡ ದಾರಿ ಹಿಡಿದು ಗಳಿಸಿದ ದುಡ್ಡು ಎನ್ನಿಸಿಕೊಳ್ಳುತ್ತದೆ.
ಲಂಚದ ಹಣ. ಸರ್ಕಾರಿ ಕೆಲಸ ಮಾಡುವ ಹಲವರು ಲಂಚ ಪಡೆದೇ ಪಡೆಯುತ್ತಾರೆ. ಹಲವರು ಸಿಕ್ಕಿಬಿದ್ದಿರುವುದೇ ಇದಕ್ಕೆ ಉದಾಹರಣೆ. ಹಾಗಂತ, ಎಲ್ಲ ಸರ್ಕಾರಿ ನೌಕರರೂ ಲಂಚ ಪಡೆಯುತ್ತಾರೆ ಅಂತಲ್ಲ. ಆದರೆ ಲಂಚ ಪಡೆದ ಹಣ ಒಂದಲ್ಲ ಒಂದು ದಿನ, ಆಸ್ಪತ್ರೆ, ಐಟಿ, ಇಡಿ, ಲೋಕಾಯುಕ್ತದ ಪಾಲಾಗೇ ಆಗುತ್ತದೆ. ದಾಳಿ ಆಗಿಯೂ ಆ ದುಡ್ಡು ಹೋಗಬಹುದು. ಅಥವಾ ಆರೋಗ್ಯ ಹಾಳಾಗಿ ಆ ದುಡ್ಡು ಹೋಗಬಹುದು. ಹಾಗಾಗಿ ಕಷ್ಟಪಟ್ಟು ದುಡಿದೇ ಹಣ ಗಳಿಸಬೇಕು.
ವೇಶ್ಯೆಯ ಮನೆಯ ದುಡ್ಡು. ವೇಶ್ಯೆ ತನ್ನ ಹೊಟ್ಟೆಪಾಡಿಗಾಗಿಯೇ ದುಡಿಯಬಹುದು. ಆದರೆ, ಅದು ಕೂಡ ತಪ್ಪು. ವೇಶ್ಯಾವಾಟಿಕೆ ಬಿಟ್ಟು, ಬೇರೆ ಕೆಲಸ ಮಾಡಿ, ನಿಯತ್ತಿನಿಂದ ಇದ್ದು ಕೂಡ ಜೀವನ ಸಾಗಿಸುವ ಅನೇಕ ದಾರಿಗಳಿದೆ. ಆದರೆ ಅದೇ ವೃತ್ತಿ ಆಯ್ಕೆ ಮಾಡಿಕೊಂಡು, ಅದರಿಂದ ದುಡಿದ ಹಣ ಎಂದಿಗೂ ಸದುಪಯೋಗವಾಗುವುದಿಲ್ಲ.
ಇನ್ನು ವೇಶ್ಯೆಯ ಮನೆ, ಅಡ್ಡದಾರಿ ಹಿಡಿದು ಶ್ರೀಮಂತರಾದವರ ಮನೆಯಲ್ಲಿ ಅನ್ನ ಉಂಡರೂ, ಆ ಪಾಪ ನಮ್ಮನ್ನು ಸುತ್ತಿಕೊಳ್ಳುತ್ತದೆ. ಹಾಗಾಗಿ ನಮಗೆ ಯಾರಾದರೂ ಮನೆಗೆ ಊಟಕ್ಕಾಗಿ ಕರೆದಾಗ, ಆ ವ್ಯಕ್ತಿಯ ವ್ಯಕ್ತಿತ್ವ ಎಂಥದ್ದು ಎಂಬ ಬಗ್ಗೆ ತಿಳಿದು, ನಾವು ಸ್ನೇಹ ಸಂಬಂಧ ಮಾಡಿಕೊಳ್ಳಬೇಕು ಅಂತಾರೆ ಹಿರಿಯರು.