Bengaluru News: ದಿನಕಳೆದಂತೆಲ್ಲ ಅಪರಾಧಗಳು ಹೆಚ್ಚಾಗುತ್ತಿರುವ ಬೆಂಗಳೂರಿನಲ್ಲಿ ಇದೀಗ ಮತ್ತೊಂದು ಶಾಕಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ. 1 ಕೋಟಿ ರೂಪಾಯಿಗಳನ್ನು ನೀಡಿದರೆ ಕೇವಲ ಒಂದೇ ಗಂಟೆಯಲ್ಲೇ ಶೇ.20ರಷ್ಟು ಡಬಲ್ ಮಾಡಿ ಕೊಡುವುದಾಗಿ ಆಮಿಷವೊಡ್ಡಿ ರೇಷ್ಮೆ ಹಾಗೂ ಮೊಟ್ಟೆ ವ್ಯಾಪಾರಿಯೊಬ್ಬರಿಗೆ ವಂಚಿಸಿರುವ ಮೂವರು ಆರೋಪಿಗಳು ವಿದ್ಯಾರಣ್ಯಪುರ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.
ನಗರದ ಟಿ.ದಾಸರಹಳ್ಳಿ ಹತ್ತಿರದ ಮಲ್ಲಸಂದ್ರದಲ್ಲಿನ ಶಾಂತಿ ಲೇಔಟ್ ನಿವಾಸಿ ಅಂಬರೀಷ್, ಸಾಯಿ ಲೇಔಟ್‌ನ ಮಾರ್ಟಿನ್ ಹಾಗೂ ಇಂದಿರಾನಗರದ ಶ್ರೀನಿವಾಸ ವರ್ಮಾ ಬಂಧಿತರಾಗಿದ್ದು, ಆರೋಪಿಗಳಿಂದ ಬರೊಬ್ಬರಿ 97.5 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಸಚಿನ್, ದಾವಣಗೆರೆಯ ಗುರು ಹಾಗೂ ಅಗರವಾಲ್ ಸೇರಿದಂತೆ ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕಂಪನಿಯಲ್ಲಿ ಹಣ ಹೂಡಿಕೆಯ ನೆಪ..!
ಇನ್ನೂ ವಂಚನೆ ಮಾಡುವುದನ್ನು ಚೆನ್ನಾಗಿ ತಿಳಿದುಕೊಂಡಿದ್ದ ಖದೀಮರು, ಕೆಲ ದಿನಗಳ ಹಿಂದೆ ಜಯಚಂದ್ರ ಹಾಗೂ ಅವರ ಸಂಬಂಧಿ ಅಶ್ವಿನಿ ಎನ್ನುವವರಿಗೆ ಇಂದಿರಾನಗರದ ಶ್ರೀನಿವಾಸ್ ಎನ್ನುವವನ ಪರಿಚಯವಾಗಿದೆ. ಆಗ ನನಗೆ ಗೊತ್ತಿರುವ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಒಂದೇ ಗಂಟೆಯಲ್ಲೇ ಶೇ.20ರಷ್ಟು ಲಾಭ ಸಿಗಲಿದೆ ಎಂದು ಶ್ರೀನಿಮಾಸ್ ನಂಬಿಸಿದ್ದ. ಈ ಮಾತಿಗೆ ಮರುಳಾದ ಜಯಚಂದ್ರ ಅವರಿಗೆ ಸಚಿನ್ ಸೇರಿದಂತೆ ಇನ್ನುಳಿದ ಆರೋಪಿಗಳನ್ನು ಶ್ರೀನಿವಾಸ್ ಪರಿಚಯಿಸಿದ್ದಾನೆ. ಬಳಿಕ ಈ ವಂಚನೆ ಜಾಲಕ್ಕೆ ಬಿದ್ದ ಜಯಚಂದ್ರ ಬಳಿಯಿಂದ ಹಣ ವಸೂಲಿಗೆ ಶ್ರೀನಿವಾಸ್ ಗ್ಯಾಂಗ್ ಪ್ಲಾನ್ ಮಾಡುತ್ತದೆ. ಇನ್ನೂ ಹೀಗೆ ಹಣ ವಸೂಲಿ ಮಾಡಲು ಜಾಲಹಳ್ಳಿ ಸಮೀಪ ಮಾರ್ಟಿನ್ ಹೆಸರಿನಲ್ಲಿ ನಕಲಿ ಕಂಪನಿ ಸ್ಥಾಪಿಸಿದ್ದರು. ಅಲ್ಲದೆ ಮಾರ್ಚ್2ರಂದು ಜಯಚಂದ್ರ ಹಾಗೂ ಅಶ್ವಿನಿ ಅವರು ಈ ಕಂಪನಿಯ ಕಚೇರಿಗೆ ಆಗಮಿಸಿ ಮಾತುಕತೆ ನಡೆಸಿದ್ದರು. ಆಗ 1 ಕೋಟಿ ರೂಪಾಯಿ ಹಣ ನೀಡಿದರೆ ಒಂದೇ ಗಂಟೆಯಲ್ಲಿ 1.20 ಕೋಟಿ ರೂಪಾಯಿ ವಾಪಸ್ ಕೊಡುವುದಾಗಿ ನಂಬಿಸಿದ್ದಾರೆ. ಇದನ್ನು ಒಪ್ಪಿಕೊಂಡಿದ್ದ ಜಯಚಂದ್ರ ಹಾಗೂ ಅಶ್ವಿನಿ ಇಬ್ಬರು ಸೇರಿ ಹಣ ನೀಡುವಾಗ ಏಕಾಏಕಿ ಹಣ ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಂಬಿಸಿ ವಂಚಿಸಿದ್ದ ಖದೀಮ..!
ವಂಚನೆ ಕೃತ್ಯ ನಡೆದ ಬಳಿಕ ವಿದ್ಯಾರಣ್ಯಪುರ ಠಾಣೆಗೆ ತೆರಳಿ ಜಯಚಂದ್ರ ದೂರು ಸಲ್ಲಿಸಿದ್ದರು. ಆ ವೇಳೆ ಅವರ ಜತೆ ಆರೋಪಿ ಶ್ರೀನಿವಾಸ್ ಸಹ ಇದ್ದ. ತಾನು ಮುಗ್ಧ ಎಂದು ಆತ ಬಿಂಬಿಸಿಕೊಂಡಿದ್ದ. ಈ ಕೃತ್ಯ ತನಿಖೆಗಿಳಿದ ಇನ್‌ಸ್ಪೆಕ್ಟರ್ ಸಿ.ಬಿ.ಶಿವಸ್ವಾಮಿ ನೇತೃತ್ಪದ ತಂಡವು, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಶ್ರೀನಿವಾಸ್ ಮೇಲೆ ಶಂಕೆ ಮೂಡಿದೆ. ಈ ಸುಳಿವು ಆಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಹಿಂದಿನ ಕರಾಮುತ್ತು ಬಯಲಾಗಿದೆ. ತಕ್ಷಣವೇ ಶ್ರೀನಿವಾಸ್ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದಾಗ ಹಣ ತೆಗೆದುಕೊಂಡು ಹೋಗಿದ್ದ ಅಂಬರೀಷ್ ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.