Political News: ನಿಖಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದಿದ್ದು, ಚೆನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸ್ ಟಾರ್ಗೇಟ್ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಿಖಿಲ್, ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಂತರ ಜೆಡಿಎಸ್ ಕಾರ್ಯಕರ್ತರನ್ನು ಅಲ್ಲಿನ ಕಾಂಗ್ರೆಸ್ ಪಕ್ಷದ ಹೊಸ ಶಾಸಕ, ಪೊಲೀಸ್ ಇಲಾಖೆಯ ಮೂಲಕ ಟಾರ್ಗೆಟ್ ಮಾಡಿ ಹಿಂಸಿಸುತ್ತಿರುವುದು ಕಳವಳಕಾರಿ. ಕ್ಷುಲ್ಲಕ ವಿಷಯಗಳನ್ನಿಟ್ಟುಕೊಂಡು ವಿರೋಧ ಪಕ್ಷಗಳ ಕಾರ್ಯಕರ್ತರು, ಮುಖಂಡರಿಗೆ ಕಿರುಕುಳ ನೀಡುವುದು ಅಕ್ಷಮ್ಯ. ಪ್ರಜಾಪ್ರಭುತ್ವದಲ್ಲಿ ಇಂಥ ನಡೆ ಒಳ್ಳೆಯದಲ್ಲ, ಅದನ್ನು ಸಹಿಸುವ ಪ್ರಶ್ನೆಯೂ ಇಲ್ಲ ಎಂದು ನಿಖಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಕೈಕಟ್ಟಿ ಕೂರುವ ಜಾಯಮಾನ ನಮ್ಮದಲ್ಲ. ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ, ಕಾಂಗ್ರೆಸ್ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುವ ಯಾವುದೇ ಇಲಾಖೆಯ ಅಧಿಕಾರಿಗಳು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ನಿಖಿಲ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಈ ಹೊಸ ಶಾಸಕ ಕ್ಷೇತ್ರದ ಕೆಲಸ ಮಾಡಬೇಕು, ಕೊಟ್ಟ ಭರವಸೆಗಳನ್ನು ಮೊದಲು ಈಡೇರಿಸಬೇಕು. ಅದು ಬಿಟ್ಟು ಜೆಡಿಎಸ್ ಕಾರ್ಯಕರ್ತರನ್ನು ಮುಗಿಸುತ್ತೇನೆ, ದಮನ ಮಾಡುತ್ತೇನೆ ಎನ್ನುವುದು ಅಹಂಕಾರ. ನಮ್ಮ ಕಾರ್ಯಕರ್ತರನ್ನು ರಕ್ಷಣೆ ಮಾಡಿಕೊಳ್ಳುವುದು ನಮಗೆ ಗೊತ್ತಿದೆ ಎಂದು ನಿಖಿಲ್ ಕುಮಾರ್ ಟ್ವೀಟಿಸಿದ್ದಾರೆ.
ನಾನು ನ್ಯಾಯದಲ್ಲಿ ನಂಬಿಕೆ ಇರಿಸಿದ್ದೇನೆ. ಚನ್ನಪಟ್ಟಣ ಹಾಗೂ ರಾಜ್ಯದ ಜನತೆಯ ಪರವಾಗಿ ಸದಾ ಇರುತ್ತೇನೆ. ಅವರಿಗಾಗಿ ದುಡಿಯುತ್ತೇನೆ. ಹೆದರಿಸಿ, ಬೆದರಿಸುವ ರಾಜಕೀಯಕ್ಕೆ ಬಗ್ಗಲ್ಲ. ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಇಂಥ ಗೊಡ್ಡು ಬೆದರಿಕೆಗಳಿಗೆ ಜಗ್ಗುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾನಿದ್ದೇನೆ, ಇಡೀ ಪಕ್ಷವಿದೆ. ಒಟ್ಟಾಗಿ ಹೋರಾಟ ಮಾಡೋಣ. ಸೋತಿದ್ದೇವೆಯೇ ಹೊರತು ಸತ್ತಿಲ್ಲ ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.