Health Tips: ನಮ್ಮ ಮೂಡ್ ಎಷ್ಟು ಚೆನ್ನಾಗಿರುತ್ತದೆಯೋ, ನಮ್ಮ ಜೀವನ ಅಷ್ಟೇ ಖುಷಿ ಖುಷಿಯಾಗಿರುತ್ತದೆ. ಇಂದಿನ ಯುವ ಪೀಳಿಗೆಯವರಿಗೆ ಅದರಲ್ಲೂ 90ರ ದಶಕದ ಮಕ್ಕಳಿಗೆ, ತಮ್ಮ ಬಾಲ್ಯದ ಜೀವನ ಅದೆಷ್ಟು ಉತ್ತಮವಾಗಿತ್ತು ಅಂತಲೇ ಅನ್ನಿಸುತ್ತದೆ. ಏಕೆಂದರೆ, ಆ ಸಮಯದಲ್ಲಿ ಸ್ಮಾರ್ಟ್ ಫೋನ್, ಇಂಟರ್‌ನೆಟ್ ಇರಲಿಲ್ಲ. ಬೆಳಿಗ್ಗೆ ಎದ್ದ ಬಳಿಕ, ಎಲ್ಲರೂ ತಮ್ಮ ತಮ್ಮ ಕೆಲಸ ಮುಗಿಸಿ, ಸಂಜೆಯಾಗುತ್ತಿದ್ದಂತೆ, ಕುಟುಂಬಸ್ಥರೆಲ್ಲ ಕೂತು ಟಿವಿ ನೋಡುವುದು. ಸುಖ ದುಃಖಗಳನ್ನು ಮಾತನಾಡಿಕೊಳ್ಳುವುದು ಮಾಡುತ್ತಿದ್ದರು.
ಕರೆಂಟ್ ಹೋದಾಗ ಮಕ್ಕಳು ಸೇರಿ ಆಟವಾಡಿದರೆ, ದೊಡ್ಡವರೆಲ್ಲ ಹಲವು ವಿಷಯಗಳ ಬಗ್ಗೆ ಹರಟೆ ಹೊಡೆಯುತ್ತಿದ್ದರು. ಇನ್ನು ಕೆಲವರು ದೀಪ ಹಚ್ಚಿ ಭಜನೆ ಹೇಳುತ್ತ ಕೂರುತ್ತಿದ್ದರು. ಆದರೆ ಈಗ ಜೀವನ ಬದಲಾಗಿದೆ. ಕಥೆ ಪುಸ್ತಕ, ಭಜನೆ ಪುಸ್ತಕ, ಸುಖ ದುಃಖದ ಹರಟೆ ಜಾಗಕ್ಕೆ ಸ್ಮಾರ್ಟ್ ಫೋನ್ ಬಂದು ಕೂತಿದೆ. ಕಿರಿಯರಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಒಂದೊಂದು ಸ್ಮಾರ್ಟ್ ಫೋನ್ ಇದೆ. ಎಲ್ಲರೂ ಫೇಸ್‌ಬುಕ್, ವಾಟ್ಸಪ್ ಬಳಸುವವರೇ. ಹಾಗಾಗಿ ಇಂದಿನ ಕಾಲದ ಹಲವರ ಮೂಡ್ ಸರಿಯಾಗಿರುವುದೇ ಅಪರೂಪ.
ಹಾಗಾಗಿ ಇಂದು ನಾವು ನಮ್ಮ ಮೂಡನ್ನು ಚೆನ್ನಾಗಿ ಮಾಡಿಕೊಳ್ಳಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ನಿಮ್ಮ ಮೂಡ್ ಚೆನ್ನಾಗಿರಬೇಕು. ಇಡೀ ದಿನ ನೀವು ಚೈತನ್ಯದಾಯಕರಾಗಿರಬೇಕು ಅಂದ್ರೆ, ಬೆಳಿಗ್ಗೆ ಬೇಗ ಎದ್ದು ವಾಕಿಂಗ್ ಹೋಗಿ, ಹಚ್ಚ ಹಸಿರು ಪ್ರದೇಶದಲ್ಲಿ ವಾಕಿಂಗ್ ಹೋಗುವುದರಿಂದ, ಬರೀ ಗಾಲಿನಲ್ಲಿ ವಾಕಿಂಗ್ ಮಾಡುವುದರಿಂದ, ನಿಮ್ಮ ಆರೋಗ್ಯ ಚೆನ್ನಾಗಿರುವುದಲ್ಲದೇ, ನಿಮ್ಮ ಮಾನಸಿಕ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
ನೀವು ಈ ಸಮಯದಲ್ಲಿ ಯೋಗ ಕೂಡ ಮಾಡಬಹುದು. ಧ್ಯಾನ, ಪ್ರಾಣಾಯಾಮ, ಯೋಗ ಮಾಡುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಅಲ್ಲದೇ, ಬೆಳಗ್ಗೆ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಿ ಯೋಗ ಮಾಡಿದರೆ, ನಿಮ್ಮ ಮಾನಸಿಕ, ದೈಹಿಕ ಆರೋಗ್ಯ ಎರಡೂ ವೃದ್ಧಿಸುತ್ತದೆ. ವಾರಕ್ಕೆ ಎರಡು ಬಾರಿ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲನ್ನು ಇಡುವುದರಿಂದ, ಬಾಯಾರಿಕೆಯಾದಾಗಲೆಲ್ಲ ಚೆನ್ನಾಗಿ ನೀರು ಕುಡಿಯುವುದರಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ.