Saturday, July 27, 2024

Latest Posts

ರಾಜ ಕಾಲುವೆ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರದಲ್ಲೇ ಕ್ರಮ: ತುರ್ತು ಸ್ಪಂದನಾ ತಂಡ ರಚನೆ: ಡಿಸಿ ದಿವ್ಯಪ್ರಭು

- Advertisement -

Hubli News: ಹುಬ್ಬಳ್ಳಿ : ಹುಬ್ಬಳ್ಳಿ ನಗರದಲ್ಲಿರುವ ರಾಜ ಕಾಲುವೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡು, ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಅಲ್ಫಾವಧಿ ಹಾಗೂ ದೀರ್ಘಾವಧಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.

ಇಂದು ಹುಬ್ಬಳ್ಳಿಯ ವಿವಿಧ ಮಳೆ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಮುಂದಿನ ವಾರದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಅಲ್ಲದೇ ಮುಂಗಾರು ಮಳೆಯು ವಾಡಿಕೆಗಿಂತ ಹೆಚ್ಚಾಗಲಿದೆ. ಈಗಾಗಲೇ ಪೂರ್ವ ಮುಂಗಾರು ಮಳೆ ಸಿದ್ಧತಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾದರೆ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಅವುಗಳನ್ನು ತುರ್ತಾಗಿ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಚರಂಡಿ, ಒಳ ಚರಂಡಿ, ರಾಜ ಕಾಲುವೆ ಸ್ವಚ್ಛತೆಗೆ ಆದ್ಯತೆ ನೀಡಿ
ನಗರ ಪ್ರದೇಶದಲ್ಲಿರುವ ಎಲ್ಲಾ ಚರಂಡಿ, ಒಳ ಚರಂಡಿ ಮತ್ತು ರಾಜ ಕಾಲುವೆಯನ್ನು ಸ್ವಚ್ಛಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಯಾವುದೇ ರೀತಿಯಲ್ಲಿ ಹೂಳು ತುಂಬಿಕೊಳ್ಳದಂತೆ ಕ್ರಮ ವಹಿಸಬೇಕು. ಅಲ್ಲದೇ ಸಾರ್ವಜನಿಕರು ಕಸ, ತ್ಯಾಜ್ಯ ವಸ್ತುಗಳು, ಅನಗತ್ಯ ವಸ್ತುಗಳನ್ನು ರಾಜ ಕಾಲುವೆಗೆ ಎಸೆಯಬಾರದು. ಅದರ ಬದಲಿಗೆ ಪಾಲಿಕೆಯ ತ್ಯಾಜ್ಯ ಸಂಗ್ರಹ ವಾಹನಕ್ಕೆ ಹಾಕಬೇಕು. ಇದರಿಂದ ರಾಜ ಕಾಲುವೆಯಲ್ಲಿ ತ್ಯಾಜ್ಯ ತುಂಬಿಕೊಂಡು ನೀರು ತಗ್ಗು ಪ್ರದೇಶಗಳಿಗೆ ನುಗ್ಗುವುದು ತಪ್ಪುತ್ತದೆ. ಕೆಲವು ಕಡೆಗಳಲ್ಲಿ ಮ್ಯಾನ್ ಹೋಲ್‌ಗಳು ತೆರೆದುಕೊಂಡಿರುವುದು ಗಮನಕ್ಕೆ ಬಂದಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಮ್ಯಾನ್ ಹೋಲ್‌ಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಪ್ರತಿ ವಾರ್ಡ್ ಹಂತದಲ್ಲಿ ಸ್ವಚ್ಛತೆ ಬಗ್ಗೆ ಪ್ರಚಾರ ಮಾಡಬೇಕಾಗಿದೆ. ಮೇದಾರ ಓಣಿಯಲ್ಲಿನ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುವುದರ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು, ಅಂಗಡಿ ಮಾಲೀಕರ ಜೊತೆ ಚರ್ಚಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನಾರಾಯಣ ಸೋಫಾ, ಸದರ್ ಸೋಫಾ ಪ್ರದೇಶದ ಮನೆಗಳಿಗೆ ರಾಜ ಕಾಲುವೆ ನೀರು ನುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಿಯಾದ ಯೋಜನೆ ರೂಪಿಸಿ, ಮನೆಗಳಿಗೆ ನೀರು ಪ್ರವೇಶಿಸದಂತೆ ಕ್ರಮ ವಹಿಸಲಾಗುವುದು. ರಾಜ ಕಾಲುವೆ ಬಗ್ಗೆ ವಿಸ್ತೃತ ಯೋಜನಾ ವರದಿ ತಯಾರಿಸಿ, ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ರಾಜ ಕಾಲುವೆ ಅತೀಕ್ರಮಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಜನಪ್ರತಿನಿಧಿಗಳು, ಸಾರ್ವಜನಿಕರ ಅಭಿಪ್ರಾಯವನ್ನು ತೆಗೆದುಕೊಂಡು ಮುಂದಿನ ಕ್ರಮ ವಹಿಸಲಾಗುವುದು. ಮಳೆಯಿಂದ ಯಾವುದೇ ಜೀವ ಹಾನಿ ಆಗಬಾರದು ಎಂಬುದು ನಮ್ಮ ಉದ್ಧೇಶವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು. ತುರ್ತು ಸ್ಪಂದನಾ ತಂಡ ರಚಿಸಲಾಗುವುದು. ತಂಡವು ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.

ವಿದ್ಯುತ್ ತಂತಿ, ಮರಗಳ ತೆರವು
ನಗರ ಪ್ರದೇಶದ ರಸ್ತೆಯ ಬದಿಗಳಲ್ಲಿರುವ ಅಪಾಯಕಾರಿ ಮರ ಹಾಗೂ ಮರದ ಕೊಂಬೆಗಳನ್ನು ತೆರವುಗೊಳಿಸಲಾಗುವುದು. ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ತ್ವರಿತಗತಿಯಲ್ಲಿ ಜೀವ ಹಾನಿ ಉಂಟು ಮಾಡುವ ಮರಗಳನ್ನು ತೆರವುಗೊಳಿಸಲಾಗುತ್ತದೆ. ಹೆಸ್ಕಾಂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಬೀಳುವಂತಹ ವಿದ್ಯುತ್ ಕಂಬಗಳನ್ನು ತೆರವು ಮಾಡಲಾಗುವುದು. ಅಲ್ಲದೇ ಅಪಾಯಕಾರಿಯಾಗುವ ರೀತಿಯಲ್ಲಿರುವ ವಿದ್ಯುತ್ ತಂತಿಗಳನ್ನು ಹಾಕದಂತೆ ತಿಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಗೋಬಿ ಮಂಚೂರಿ, ಇತರ ಖಾದ್ಯಗಳಿಗೆ ಬಣ್ಣ ಹಾಕದಂತೆ ಸೂಚನೆ
ಹುಬ್ಬಳ್ಳಿಯ ವಿವಿಧ ರಸ್ತೆ ಬದಿಯ ಅಂಗಡಿಗಳು, ಹೊಟೇಲ್‌ಗಳಲ್ಲಿ ತಯಾರಿಸುವ ಗೋಬಿ ಮಂಚೂರಿ ಹಾಗೂ ಇತರ ಖಾದ್ಯಗಳಿಗೆ ಬಣ್ಣ ಹಾಕದಂತೆ ಅಂಗಡಿಗಳ ಮಾಲೀಕರಿಗೆ ಸೂಚಿಸಲಾಗುವುದು. ಅಲ್ಲದೇ ಈ ಕುರಿತು ಆಹಾರ ಸುರಕ್ಷತಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ಅವೈಜ್ಞಾನಿಕ ರಸ್ತೆ ಉಬ್ಬು ನಿರ್ಮಿಸದಂತೆ ಕಡಿವಾಣ
ನಗರದ ವಿವಿಧ ಪ್ರದೇಶಗಳಲ್ಲಿನ ರಸ್ತೆಗಳಿಗೆ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ವೈಜ್ಞಾನಿಕವಾಗಿ ಹಾಗೂ ನಿಯಮಾನುಸಾರವಾಗಿ ರಸ್ತೆಗಳಿಗೆ ಉಬ್ಬುಗಳನ್ನು ನಿರ್ಮಿಸಬೇಕು. ಈಗಾಗಲೇ ಹಾಕಲಾಗಿರುವ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ಕೂಡಲೇ ತೆರವು ಮಾಡಲಾಗುವುದು. ಈ ಕುರಿತು ರಸ್ತೆ ಸುರಕ್ಷತಾ ಸಮಿತಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಮಾದಕ ವಸ್ತು, ಡ್ರಗ್ಸ್ ನಿಯಂತ್ರಣಕ್ಕೆ ಕ್ರಮ
ಜಿಲ್ಲೆಯಲ್ಲಿ ಹೆಚ್ಚಾಗಿ ಮಾದಕ ವಸ್ತುಗಳು, ಡ್ರಗ್ಸ್ ಮಾರಾಟವಾಗುತ್ತಿದೆ. ಹಾಗಾಗಿ ಜಿಲ್ಲೆಗೆ ಆಗಮಿಸುವ ಮಾದಕ ವಸ್ತು ಹಾಗೂ ಡ್ರಗ್ಸ್ ನಿಯಂತ್ರಣ ಮಾಡಲು ಕ್ರಮ ವಹಿಸಲಾಗುವುದು. ಯಾವುದೇ ರೀತಿಯಲ್ಲಿ ಜಿಲ್ಲೆಗೆ ಡ್ರಗ್ಸ್ ಹಾಗೂ ಮಾದಕ ವಸ್ತುಗಳು ಬರದಂತೆ ತಡೆಹಿಡಿಯಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಈ ಬಗ್ಗೆ ಪೊಲೀಸ್ ಇಲಾಖೆ ನಿಗಾ ವಹಿಸುವಂತೆ ತಿಳಿಸಲಾಗುವುದು ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಮೇದಾರ ಓಣಿ, ತುಳಜಾ ಭವಾನಿ ವೃತ್ತ, ಕಮರಿಪೇಟೆ ಪೊಲೀಸ್ ಠಾಣೆ, ಹಳೆ ಹುಬ್ಬಳ್ಳಿ ಸೇತುವೆ ಹಾಗೂ ಗಬ್ಬೂರು ಸರ್ವೀಸ್ ರೋಡ್ ಕೆಳ ಹಂತದ ಸೇತುವೆಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಪಾಲಿಕೆ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ, ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಇಂಥ ಘಟನೆ ನಡೆಯಲು ಪೊಲೀಸ್ ಕಮಿಷನರ್‌ ಕಾರಣ: ಮೊದಲು ರಿಸೈನ್ ಕೊಟ್ಟು ಹೋಗಲಿ: ನಿರಂಜನ್ ಹಿರೇಮಠ್

ಹುಬ್ಬಳ್ಳಿಯಲ್ಲಿ ಮತ್ತೋರ್ವ ಪಾಗಲ್ ಪ್ರೇಮಿಯಿಂದ ಹರಿದ ನೆತ್ತರು.! – ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಯುವತಿ

“ಅಂಜಲಿ ಕೊ* ಮಾಡಿದ ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿ,” ಮಹಿಳೆಯ ಆಕ್ರೋಶ

- Advertisement -

Latest Posts

Don't Miss