ಇಂದು ನಾವು ಕರ್ನಾಟಕದಲ್ಲಿರುವ ಪ್ರಮುಖ, ಪ್ರಸಿದ್ಧ ದೇವಿ ದೇವಸ್ಥಾನಗಳ ಬಗ್ಗೆ ಪುಟ್ಟ ಮಾಹಿತಿಯನ್ನ ನೀಡಲಿದ್ದೇವೆ. ಮೊದಲ ಭಾಗದಲ್ಲಿ, ಚಾಮುಂಡಿ ಬೆಟ್ಟ, ಕಟೀಲು ದೇವಸ್ಥಾನ, ಪೊಳಲಿ, ಶೃಂಗೇರಿ, ನಿಮಿಷಾಂಬಾ ದೇವಸ್ಥಾನದ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.
1.. ಚಾಮುಂಡಿ ಬೆಟ್ಟ. ಮೈಸೂರಿನ ಚಾಮುಂಡಿ ದೇವಸ್ಥಾನ ವಿಶ್ವವಿಖ್ಯಾತ ದೇವಿ ದೇವಸ್ಥಾನವಾಗಿದೆ. ಮೈಸೂರು ದಸರಾದ ಸಮಯದಲ್ಲಿ ವಿಶ್ವದ ಹಲವು ಭಾಗಗಳಿಂದ ಜನ ಜಂಬೂಸವಾರಿ ನೋಡಲು ಬರುತ್ತಿದ್ದರು. ಆದ್ರೀಗ ಕೊರೋನಾ ಕಾರಣದಿಂದ ಜನರಿಗೆ ನಿರ್ಬಂಧ ಹೇರಲಾಗಿದೆ. ಇನ್ನು ಮಹಿಷಾಸುರನನ್ನು ಸಂಹಾರ ಮಾಡಿದ ಚಾಮುಂಡೇಶ್ವರಿ ಭಕ್ತರ ರಕ್ಷಣೆಗಾಗಿ ಇಲ್ಲೇ ನೆಲೆ ನಿಂತಳು.
2.. ಕಟೀಲು ದುರ್ಗಾ ಪರಮೇಶ್ವರಿ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಕಟೀಲು ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನ ಕೂಡಾ ಒಂದು. ನಂದಿನಿ ನದಿಯ ಮಧ್ಯದಲ್ಲಿ ಕಟೀಲು ಕ್ಷೇತ್ರವಿದೆ. ಅರುಣಾಸುರನೆಂಬ ರಾಕ್ಷಸ, ಋಷಿ ಮುನಿಗಳಿಗೆ ತೊಂದರೆ ನೀಡುತ್ತಿದ್ದ. ಆಗ ಅವರೆಲ್ಲ ತಾಯಿಯಲ್ಲಿ ತಮ್ಮ ಕಷ್ಟ ಹೇಳಿಕೊಂಡರು. ಆಗ ದೇವಿ, ದುಂಬಿಯ ರೂಪದಲ್ಲಿ ಅರುಣಾ ಸುರನ ವಧೆ ಮಾಡಿದಳು. ಕಟಿ ಅಂದರೆ ಸೊಂಟ, ಇಳೆ ಎಂದರೆ ಭೂಮಿ. ಇವೆರಡು ಸೇರಿ, ಕಟೀಲು ಎಂದಾಯಿತು.
3.. ಪೊಳಲಿ ರಾಜ ರಾಜೇಶ್ವರಿ. ಬಂಟ್ವಾಳ ಜಿಲ್ಲೆಯ ಪೊಳಲಿ ಎಂಬಲ್ಲಿ ರಾಜ ರಾಜೇಶ್ವರಿ ದೇವಸ್ಥಾನವಿದೆ. ಇಲ್ಲಿ ಪ್ರತೀ ವರ್ಷ ಮಾರ್ಚ್‌ನಿಂದ ಏಪ್ರಿಲ್ ತನಕ, ಒಂದು ತಿಂಗಳು ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ಕೊನೆಯ ಹತ್ತು ದಿನ ಅದ್ಧೂರಿ ಜಾತ್ರಾ ಮಹೋತ್ಸವ, ತೇರು ಎಳೆಯುವ ಸಂಭ್ರಮ, ಬಲಿ ಸುತ್ತುವುದು, ಚೆಂಡೆ ಬಾರಿಸುವುದು, ದೆವರು ಹೊರುವುದು, ಚೆಂಡಾಟ ಆಡುವುದು, ಇತ್ಯಾದಿ ಕಾರ್ಯಕ್ರಮವಿರುತ್ತದೆ. ಇನ್ನು ಇಲ್ಲಿನ ದೇವಿಯ ವಿಗ್ರಹವೇ ವಿಶೇಷ. ಇದು ಜೇಡಿ ಮಣ್ಣಿನಿಂದ ಮಾಡಲಾಗಿದ್ದು, ಈ ವಿಗ್ರಹಕ್ಕೆ ಯಾವುದೇ ಅಭಿಷೇಕ ನಡೆಯುವುದಿಲ್ಲ. ಸುರತಾ ರಾಜ ಈ ದೇವಸ್ಥಾನವನ್ನು ನಿರ್ಮಿಸಿದ್ದಾನೆಂದು ಹೇಳಲಾಗಿದೆ.
4.. ಶೃಂಗೇರಿ ಶಾರದಾಂಬೆ. ಅದ್ವೈತ ತತ್ವ ಸಾರಿದ, ಆದಿ ಶಂಕರಾಚಾರ್ಯರು ಭಾರತದಲ್ಲಿ ಸ್ಥಾಪಿಸಿದ ಶಕ್ತಿ ಪೀಠಗಳಲ್ಲಿ, ಶೃಂಗೇರಿ ಶಾರದಾಂಬೆಯ ದೇವಸ್ಥಾನ ಕೂಡ ಒಂದು. ಋಷ್ಯಶೃಂಗಗಿರಿ ಎಂಬ ಪರ್ವತ ಸಮೀಪದಲ್ಲೇ ಇರುವ ಕಾರಣಕ್ಕೆ, ಈ ಊರಿಗೆ ಶೃಂಗೇರಿ ಎಂಬ ಹೆಸರು ಬಂದಿದೆ. ಮಕ್ಕಳಿಗೆ ಮೊದಲ ಬಾರಿ ವಿದ್ಯಾಭ್ಯಾಸ ಮಾಡಿಸುವುದಿದ್ದಲ್ಲಿ, ಜನ ಇಲ್ಲಿಗೆ ಬರುತ್ತಾರೆ.
5.. ನಿಮಿಶಾಂಬಾ ದೇವಸ್ಥಾನ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಿಮಿಶಾಂಬಾ ದೇವಸ್ಥಾನವಿದೆ. ಪಾರ್ವತಿಯ ಅವತಾರವಾದ ನಿಮಿಶಾಂಬಾ ದೇವಿ, ನಿಮಿಷ ನಿಮಿಷಕ್ಕೂ ವರ ನೀಡುತ್ತಾಳೆಂಬ ಕಾರಣಕ್ಕೆ, ಈ ದೇವಿಯನ್ನು ನಿಮಿಶಾಂಬಾ ದೇವಿ ಎಂದು ಕರೆಯುತ್ತಾರೆ. ಕಾವೇರಿ ನದಿ ತಟದಲ್ಲಿರುವ ನಿಮಿಶಾಂಬ ದೇವಿಯ ದರ್ಶನ ಪಡೆಯಲು, ವರ್ಷಕ್ಕೆ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಇನ್ನುಳಿದ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ.