ಭಾಗ ಒಂದು ಮತ್ತು ಎರಡರಲ್ಲಿ ನಾವು ಶ್ರೀ ವಿಷ್ಣುವಿನ 8 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಮೂರನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಒಂಭತ್ತನೇಯ ಅವತಾರ ಆದಿರಾಜ ಪ್ರಥು. ಮನುವಿನ ವಂಶದಲ್ಲಿ ಅಂಗ ಎಂಬ ರಾಜನ ವಿವಾಹ ಮೃತ್ಯುವಿನ ಮಾನಸ ಪುತ್ರಿ ಸುನಿತಾಳೊಂದಿಗೆ ನೆರವೇರಿತು. ಅವರಿಗೆ ಓರ್ವ ಪುತ್ರ ಜನಿಸಿದ. ಅವನು ದೇವರನ್ನು ನಂಬುತ್ತಿರಲಿಲ್ಲ. ಹಾಗಾಗಿ ದೇವರ ಬದಲು, ತನ್ನ ಪೂಜೆ ಮಾಡಿ ಎಂದು ಹೇಳುತ್ತಿದ್ದ. ಆಗ ಮಹಾಋಷಿಗಳು, ಮಂತ್ರೋಚ್ಛಾರಣೆ ಮೂಲಕ ಅವನ ಹತ್ಯೆ ಮಾಡಿದರು. ನಂತರ ಅದೇ ದಂಪತಿಗೆ ಪ್ರಥು ಎಂಬ ಮಗ ಜನಿಸಿದ. ಅವನೇ ವಿಷ್ಣುವಿನ 9ನೇ ಅವತಾರ. ಇವನ ಕೈಯಲ್ಲಿ ಕಮಲ ಮತ್ತು ಶ್ರೀ ಚಕ್ರದ ಚಿಹ್ನೆ ಇತ್ತು.
ಹತ್ತನೇಯ ಅವತಾರ ಮತ್ಸ್ಯಾವತಾರ. ಸೃಷ್ಟಿಯನ್ನು ಪ್ರಳಯದಿಂದ ಕಾಪಾಡಲು ಶ್ರೀ ವಿಷ್ಣು, ಮತ್ಸ್ಯಾವತಾರ ತಾಳಿದ ಎಂದು ಹೇಳಲಾಗುತ್ತದೆ. ಮತ್ಸ್ಯಾವತಾರ ಅಂದ್ರೆ, ಅರ್ಧ ಮೀನಿನ ದೇಹ ಮತ್ತು ಅರ್ಧ ಮನುಷ್ಯನ ದೇಹ. ರಾಜಾ ಸತ್ಯವೃತ ಸಮುದ್ರದಲ್ಲಿ ಜಲಾಂಜಲಿ ನೀಡುವ ವೇಳೆ ಅವರ ಕೈಯಲ್ಲಿ ಒಂದು ಪುಟ್ಟ ಮೀನು ಬಂತು. ಆ ಮೀನನ್ನು ಸಮುದ್ರಕ್ಕೆ ಬಿಡುವಾಗ, ಆ ಮೀನು ತನ್ನನು ಸಮುದ್ರಕ್ಕೆ ಬಿಟ್ಟರೆ, ದೊಡ್ಡ ಮೀನುಗಳು ತನ್ನನ್ನು ತಿನ್ನುತ್ತದೆ. ಹಾಗಾಗಿ ಆ ರೀತಿ ಮಾಡಬೇಡಿ ಎಂದು ಬೇಡಿತು. ಆಗ ಸತ್ಯವೃತ, ಅದನ್ನು ತನ್ನ ಕಮಂಡಲದಲ್ಲಿ ಇರಿಸಿಕೊಂಡ. ಕೆಲ ದಿನಗಳಲ್ಲಿ ಅದು ದೊಡ್ಡದಾಯಿತು. ಆಗ ತನ್ನ ಮನೆಯಲ್ಲಿರುವ ಕಲ್ಯಾಣಿಯಲ್ಲಿ ಅದನ್ನು ಬಿಟ್ಟ. ಆಗ ಮೀನು ಇನ್ನೂ ದೊಡ್ಡದಾಯಿತು. ಆಗ ಸತ್ಯವೃತನಿಗೆ ಇದು ಅಂತಿಂಥ ಮೀನಲ್ಲ ಎಂದು ಗೊತ್ತಾಯಿತು. ಯಾಕಂದ್ರೆ ಅದು ವಿಷ್ಣುವಿನ ರೂಪವಾದ ಮತ್ಸ್ಯವಾಗಿತ್ತು. ಮತ್ಸ್ಯಾವತಾರದಲ್ಲಿ ವಿಷ್ಣು ಪ್ರತ್ಯಕ್ಷನಾಗಿ, ಆಶೀರ್ವದಿಸಿದ.
ಹನ್ನೊಂದನೇಯ ಅವತಾರ ಕೂರ್ಮಾವತಾರ. ಅಂದ್ರೆ ಆಮೆಯ ಅವತಾರ. ದೂರ್ವಾಸ ಮುನಿಗಳು, ಇಂದ್ರನಿಗೆ ಶಾಪ ನೀಡಿದರು. ಆಗ ಇಂದ್ರ ವಿಷ್ಣುವಿನ ಬಳಿ ಸಹಾಯ ಕೇಳಿ ಬಂದ. ಆಗ ವಿಷ್ಣು ನೀವು ಶಾಪ ವಿಮೋಚನೆಗಾಗಿ ಸಮುದ್ರ ಮಂಥನ ಮಾಡೆಂದು ಹೇಳಿದ. ಆಗ ಇಂದ್ರ ದೇವತೆಗಳೊಂದಿಗೆ ಸೇರಿ ರಾಕ್ಷಸರನ್ನು ಒಪ್ಪಿಸಿ, ಸಮುದ್ರ ಮಂಥನ ಮಾಡಿದ. ಈ ವೇಳೆ ಮಂದ್ರಾಚಲ ಪರ್ವತವನ್ನು ತಂದು ಸಮುದ್ರದಲ್ಲಿಡಬೇಕಿತ್ತು. ಆಗ ಸಹಾಯಕ್ಕೆ ಬಂದವನೇ ಕೂರ್ಮಾವತಾರಿ ಶ್ರೀ ವಿಷ್ಣು.
ಹನ್ನೆರಡನೇಯ ಅವತಾರ ಧನ್ವಂತರಿ ಅವತಾರ. ಸಮುದ್ರ ಮಂಥನದ ವೇಳೆ ಬಂದ ವಿಷವನ್ನು ಕುಡಿದ ಶಿವ ವಿಷಕಂಠನಾದ. ನಂತರ ಸಮುದ್ರ ಮಂಥನದಿಂದ ಐರಾವತ, ಲಕ್ಷ್ಮೀ, ಕುದುರೆ, ಇತ್ಯಾದಿಗಳು ಬಂದವು. ಕೊನೆಯದಾಗಿ ಬಂದಿದ್ದು, ವಿಷ್ಣುವಿನ ಅವತಾರ ಧನ್ವಂತರಿ. ಧನ್ವಂತರಿ ಅಂದ್ರೆ ರೋಗ ರುಜಿನಗಳಿಗೆ ಮುಕ್ತಿ ಕೊಡುವ ದೇವರು ಎಂದರ್ಥ. ಯಾರಿಗಾದರೂ ಆರೋಗ್ಯ ಸಮಸ್ಯೆ ಕಾಡುತ್ತಿದ್ದಲ್ಲಿ, ಕೆಲವರು ಧನ್ವಂತರಿ ಹೋಮ ಮಾಡಿಸುತ್ತಾರೆ.