International News: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ರೆಸಿಪ್ರೋಕಲ್ ಟ್ಯಾಕ್ಸ್ ನೀತಿಯು ಚೀನಾ ಸೇರಿದಂತೆ ಜಾಗತಿಕ ಮಟ್ಟದ ರಾಷ್ಟ್ರಗಳಲ್ಲಿ ತಲ್ಲಣ ಸೃಷ್ಟಿಸಿದೆ. ಅಲ್ಲದೆ ಇದರಿಂದ ಕಂಗೆಟ್ಟಿರುವ ಡ್ರ್ಯಾಗನ್ ರಾಷ್ಟ್ರ ಚೀನಾ ತನ್ನದೇ ಆದ ತಂತ್ರಗಾರಿಕೆಯನ್ನು ರೂಪಿಸಲು ಮುಂದಾಗಿದ್ದು, ಈ ಮೂಲಕ ಟ್ರಂಪ್ಗೆ ಸೆಡ್ಡು ಹೊಡೆಯಲು ಪ್ಲಾನ್ ಮಾಡಿದೆ.
ಭಾರತದ ಉತ್ಪನ್ನಗಳ ಆಮದು..
ಇನ್ನೂ ಅಮೆರಿಕದ ಪ್ರತೀಕಾರದ ತೆರಿಗೆ ನೀತಿಯಿಂದ ಹೊಡೆತಕ್ಕೆ ಸಿಲುಕಿರುವ ದೇಶಗಳು ಭಾರತದ ಸ್ನೇಹ ಬಯಸುತ್ತಿವೆ. ಇದೇ ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ಯೋಚಿಸಿರುವ ಚೀನಾ, ಭಾರತದಿಂದ ಅಧಿಕ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಕುರಿತು ಒಲವು ತೋರುತ್ತಿದೆ. ಈ ಕುರಿತು ಖುದ್ದು ಚೀನಾದ ರಾಯಬಾರಿ ಕ್ಸು ಫೀಹಾಂಗ್, ಭಾರತದಿಂದ ನಾವು ಚೀನಾ ಮಾರುಕಟ್ಟೆಗೆ ಹೊಂದುವ ವಸ್ತುಗಳನ್ನು ಖರೀದಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತದ ಉದ್ಯಮಿಗಳು ಚೀನಾದಲ್ಲಿ ಬ್ಯುಸಿನೆಸ್ ಆರಂಭಿಸಿ..
ಅಲ್ಲದೆ ಚೀನಾ ಭಾರತದಿಂದ ಅಧಿಕ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಎರಡೂ ರಾಷ್ಟ್ರಗಳ ಆರ್ಥಿಕ ಸಂಬಂಧವನ್ನು ಬಲಪಡಿಸಿಕೊಳ್ಳಬೇಕಿದೆ. ಇದರಿಂದ ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರ ಬೆಳವಣಿಗೆಯಾಗಲಿದೆ. ಅಲ್ಲದೆ ಭಾರತದ ಉದ್ಯಮಿಗಳು ಚೀನಾದಲ್ಲಿ ತಮ್ಮ ಉದ್ಯೋಗಗಳನ್ನು ಆರಂಭಿಸಲು ಸ್ವಾಗತಿಸುತ್ತೇವೆ ಎಂದು ಆಹ್ವಾನ ನೀಡಿದ್ದಾರೆ.
ಅಂದಹಾಗೆ ಭಾರತವೂ ಕೂಡ ಚೀನಾದ ಕಂಪನಿಗಳಿಗೆ ಪಾರದರ್ಶಕ ಹಾಗೂ ನ್ಯಾಯಯುತ ವ್ಯಾಪಾರಕ್ಕೆ ವಾತಾವರಣವನ್ನು ನಿರ್ಮಿಸಲಿದೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತೇವೆ. ಅಲ್ಲದೆ ಈ ನಿಲುವು ಉಭಯ ದೇಶಗಳ ಪರಸ್ಪರ ಲಾಭದಾಯಕ ಸಹಕಾರವನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಕ್ಸು ಫೀಹಾಂಗ್ ತಿಳಿಸಿದ್ದಾರೆ.
2020ರಲ್ಲಿ ನಿರ್ಬಂಧಿಸಲಾಗಿದ್ದ ಹೂಡಿಕೆ..
2020ರ ಗಲ್ವಾನ್ ಸಂಘರ್ಷದ ನಂತರ ಭಾರತದಲ್ಲಿ ಚೀನಾ ಹೂಡಿಕೆ ಮಾಡುವುದನ್ನು ನಿರ್ಬಂಧಿಸಲಾಗಿದ್ದು, ಈವರೆಗೂ ಅದನ್ನು ಸಡಿಲಗೊಳಿಸಿಲ್ಲ. ಈ ನಡುವೆಯೇ ಇದೀಗ ಎರಡೂ ದೇಶಗಳು ಪರಸ್ಪರ ಆರ್ಥಿಕ ಸಂಬಂಧ ವೃದ್ಧಿಗೊಳಿಸಲು ಮುಂದಾಗುತ್ತಿದೆ.
ತಡರಾತ್ರಿ ಘೋಷಿಸಿದ್ದ ತೆರಿಗೆ ನೀತಿ..
ಇನ್ನು ಬಹು ಚರ್ಚಿತವಾಗುವ ಮೂಲಕ ವಿಶ್ವದ ರಾಷ್ಟ್ರಗಳಿಗೆ ಹೊಡೆತ ನೀಡುತ್ತಿರುವ ಟ್ರಂಪ್ ಸರ್ಕಾರ ಹೊರಡಿಸಿರುವ ಪ್ರತೀಕಾರದ ಸುಂಕ ನೀತಿಯಿಂದ ಭಾರತಕ್ಕೂ ಸಂಕಷ್ಟ ಎದುರಾಗಿದೆ. ಬುಧವಾರ ತಡರಾತ್ರಿ ರೆಸಿಪ್ರೋಕಲ್ ಟ್ಯಾಕ್ಸ್ ಅನ್ನು ಅಧಿಕೃತವಾಗಿ ಘೋಷಿಸಿರುವ ಟ್ರಂಪ್, ಭಾರತದ ಮೇಲೂ ಯಾವುದೇ ರೀತಿಯ ಸುಂಕವನ್ನು ಕಡಿತಗೊಳಿಸಿಲ್ಲ ಎನ್ನುವುದು ಗಮನಾರ್ಹ.
ಮೋದಿ ಅಮೆರಿಕ ಸರಿಯಾಗಿ ನೋಡ್ತಿಲ್ಲ..
ಅಲ್ಲದೆ ದೇಶಿಯ ಉತ್ಪನ್ನಗಳ ಚೇತರಿಕೆ ಹಾಗೂ ಉದ್ಯೋಗ ಸೃಷ್ಟಿಯ ಭಾಗವಾಗಿ ವಿಶ್ವದ ವಿವಿಧ ದೇಶಗಳ ಮೇಲೆ ಪ್ರತಿತೆರಿಗೆ ಹೇರುವುದು ನಮಗೆ ಅವಶ್ಯಕತೆಯಾಗಿದೆ. ಇನ್ನೂ ಪ್ರಧಾನಿ ನರೇಂದ್ರ ಮೋದಿ ನನ್ನ ಸ್ನೇಹಿತನಾಗಿದ್ದರೂ ಸಹ ಅವರು ಅಮೆರಿಕವನ್ನು ಸರಿಯಾಗಿ ನೋಡುತ್ತಿಲ್ಲ. ಹೀಗಾಗಿ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇಕಡಾ 26ರಷ್ಟು ತೆರಿಗೆಯನ್ನು ಘೋಷಣೆ ಮಾಡುತ್ತಿದ್ದೇನೆ ಎಂದು ಪ್ರತೀಕಾರ ಸುಂಕದ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ದಶಕಗಳ ಕಾಲದಿಂದಲೂ ವಿದೇಶಗಳು ಅಮೆರಿಕದ ಸಂಪತ್ತನ್ನು ಪಡೆದುಕೊಂಡು ಶ್ರೀಮಂತವಾಗಿವೆ. ಆದರೆ ಈಗ ನಮ್ಮ ಸರದಿ ಬಂದಿದೆ, ನಮ್ಮ ಮೇಲೆ ಯಾವ ದೇಶ ಎಷ್ಟು ತೆರಿಗೆ ವಿಧಿಸುತ್ತದೆಯೋ.. ನಾವು ಸಹ ಆ ದೇಶಗಳ ಮೇಲೂ ಅಷ್ಟೇ ತೆರಿಗೆಯನ್ನು ಹೇರುತ್ತೇವೆ. ಮುಂದಿನ ದಿನಗಳು ಅಮೆರಿಕದ ಪಾಲಿಗೆ ಸ್ವರ್ಣಯುಗ ಪ್ರಾರಂಭವಾಗಲಿದೆ ಎನ್ನುವ ಮೂಲಕ ಭಾರತ, ಕೆನಡಾ, ಜಪಾನ್, ವಿಯೆಟ್ನಾ ಸೇರಿದಂತೆ ಹಲವು ದೇಶಗಳ ವಿರುದ್ಧ ಟ್ರಂಪ್ ಕಿಡಿ ಕಾರಿದ್ದಾರೆ.