International News: ಅಮೆರಿಕ ಸರ್ಕಾರದಿಂದ ಹೊರಬಂದ ಬೆನ್ನಲ್ಲೇ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಟ್ರಂಪ್ ಅವರ ಕನಸಿನ ತೆರಿಗೆ ಬಿಲ್‌ಗೆ ಸಂಬಂಧಿಸಿದಂತೆ ಉಂಟಾದ ಭಿನ್ನಭಿಪ್ರಾಯದಿಂದ ಡಿಒಜಿಇ ಮುಖ್ಯಸ್ಥರ ಹುದ್ದೆಯನ್ನು ಮಸ್ಕ್ ತೊರೆದಿದ್ದರು. ಈಗ ಅದೇ ವಿಚಾರವನ್ನು ಇಟ್ಟುಕೊಂಡು ಟ್ರಂಪ್ ನೀತಿಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದಾರೆ.
ಅಮೆರಿಕಾದ ಜನರಿಗೆ ದ್ರೋಹ ಬಗೆದ ಎಲ್ಲಾ ರಾಜಕಾರಣಿಗಳನ್ನು ನಾವು ವಜಾಗೊಳಿಸುತ್ತೇವೆ..
ಇನ್ನೂ ಪ್ರಮುಖವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿರುವ ಮಸ್ಕ್, ಕ್ಷಮಿಸಿ ಇನ್ನು ಮುಂದೆ ಇದನ್ನು ನಾನು ಸಹಿಸಲಾರೆ. ಈ ಅತಿರೇಕದ ಮಸೂದೆಯು ಅಸಹ್ಯಕರವಾಗಿದೆ. ಇದಕ್ಕೆ ಮತ ಹಾಕಿದವರಿಗೆ ನಾಚಿಕೆಯಾಗಬೇಕು. ನೀವು ತಪ್ಪು ಮಾಡಿದ್ದೀರಿ ಎನ್ನುವುದು ನಿಮಗೆ ತಿಳಿದಿದೆ. ಈ ಮಸೂದೆ 2.5 ಟ್ರಿಲಿಯನ್ ಡಾಲರ್ ಬಜೆಟ್ ಕೊರತೆಯನ್ನು ಹೆಚ್ಚಿಸುತ್ತದೆ ಮತ್ತು ಅಮೆರಿಕ ಜನರ ಮೇಲೆ ಭಾರೀ ಪ್ರಮಾಣದ ಸಾಲದ ಹೊರೆಯನ್ನು ಹೊರಿಸುತ್ತದೆ. ಅಲ್ಲದೆ ಮುಂದಿನ ವರ್ಷದ ನವೆಂಬರ್‌ನಲ್ಲಿ, ಅಮೆರಿಕದ ಜನರಿಗೆ ದ್ರೋಹ ಬಗೆದ ಎಲ್ಲಾ ರಾಜಕಾರಣಿಗಳನ್ನು ನಾವು ವಜಾಗೊಳಿಸುತ್ತೇವೆ ಎನ್ನುವ ಮೂಲಕ ಖಾರವಾಗಿಯೇ ಟ್ರಂಪ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಟ್ರಂಪ್ ವಿರುದ್ಧ ಅಸಮಾಧಾನ ಹೊರಹಾಕಿದ್ದ ಟೆಸ್ಲಾ ಮುಖ್ಯಸ್ಥ..!
ಅಲ್ಲದೆ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯನ್ನು ಟೀಕಿಸಿದ ಒಂದು ದಿನದ ಬಳಿಕ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರು ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಹುದ್ದೆಯಿಂದ ಕಳೆದ ವಾರವಷ್ಟೇ ಹೊರ ಬಂದಿದ್ದರು. ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಡಿಒಜಿಇ ದಕ್ಷತೆಯ ಮೇಲೆ ಪರಿಣಾಮ ಬೀರಲಿದ್ದು, ಇದು ಇಲಾಖೆಯನ್ನು ದುರ್ಬಲಗೊಳಿಸಲಿದೆ ಎಂದು ಮಸ್ಕ್ ತಮ್ಮ ಆಪ್ತರಾಗಿದ್ದ ಟ್ರಂಪ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಮಸೂದೆ ಬಜೆಟ್ ಕೊರತೆಯನ್ನು ಹೆಚ್ಚಿಸುತ್ತದೆ ಎಂದಿದ್ದ ಮಸ್ಕ್..
ಡೊನಾಲ್ಡ್ ಟ್ರಂಪ್ ಅವರು ವೆಚ್ಚ ಕಡಿತಗೊಳಿಸಲು ಬಿಗ್ ಬ್ಯುಟಿಫುಲ್ ಮಸೂದೆಯನ್ನು ಪರಿಚಯಿಸಿದ್ದರು. ಈ ಮಸೂದೆಯ ಬಗ್ಗೆ ಅಮೆರಿಕದ ಆರ್ಥಿಕ ತಜ್ಞರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮಸ್ಕ್, ಈ ಮಸೂದೆ ಬಜೆಟ್ ಕೊರತೆಯನ್ನು ಹೆಚ್ಚಿಸುತ್ತದೆ, ಮಸೂದೆಯೇನೋ ದೊಡ್ಡದಾಗಿರಬಹುದು ಅಥವಾ ಸುಂದರವಾಗಿರಬಹುದು. ಆದರೆ ಅದು ಎರಡೂ ಆಗಬಹುದೇ ಅಂತ ನನಗೆ ತಿಳಿದಿಲ್ಲ. ಆದರೆ ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳುವ ಮೂಲಕ ಮಸ್ಕ್ ಅಮೆರಿಕದ ಅಧ್ಯಕ್ಷರ ವಿರುದ್ಧ ಸೆಡ್ಡು ಹೊಡೆದಿದ್ದರು.
ಎಲಾನ್ ಮಸ್ಕ್ ಕ್ರಮದಿಂದ ಸರ್ಕಾರ ಅಸಮಾಧಾನಗೊಂಡಿತ್ತು..
ಗಮನಾರ್ಹ ಅಂಶವೆಂದರೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಪರ ಮತಯಾಚನೆ ಮಾಡಿದ್ದರು. 250 ಮಿಲಿಯನ್‌ಗಿಂತಲೂ ಹೆಚ್ಚು ಖರ್ಚು ಮಾಡಿದ್ದ ಮಸ್ಕ್‌ಗೆ ಇದು ತೀಕ್ಷ್ಣವಾದ ಬದಲಾವಣೆಯನ್ನು ತಿಳಿಸುತ್ತದೆ. ಅಲ್ಲದೆ ಅಮೆರಿಕದಲ್ಲಿ ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಡಿಒಜಿಇ ಮುಖ್ಯಸ್ಥರನ್ನಾಗಿ ಮಸ್ಕ್ ಅವರನ್ನು ನೇಮಕ ಮಾಡಿಕೊಂಡಿದ್ದರು. ಇದಾದ ನಂತರ ಮಸ್ಕ್ ಆರ್ಥಿಕ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವಾರು ಸರ್ಕಾರಿ ಇಲಾಖೆಗಳನ್ನು ಮುಚ್ಚಿದ್ದರು. ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರು, ಅಮೆರಿಕದ ಹಲವು ದೇಶಗಳಿಗೆ ನೀಡುತ್ತಿದ್ದ ವಿದೇಶಿ ಸಾಮಾಜಿಕ ನೆರವನ್ನು ನಿಲ್ಲಿಸಿದ್ದರು. ಇದರಿಂದಾಗಿ ಅಸಮಾಧಾನಗೊಂಡಿದ್ದ ಸರ್ಕಾರಿ ಇಲಾಖೆಯ ಕೆಂಗಣ್ಣಿಗೆ ಮಸ್ಕ್ ಗುರಿಯಾಗಿದ್ದರು.
ಸರ್ಕಾರದಲ್ಲಿದ್ದಾಗಲೂ ನಷ್ಟ ಅನುಭವಿಸಿದ್ದ ಮಸ್ಕ್..
ಅಲ್ಲದೆ ಟ್ರಂಪ್ ಆಡಳಿತದಲ್ಲಿ ಎಲಾನ್ ಮಸ್ಕ್ ಅವರ ಪಾತ್ರ ಹೆಚ್ಚಾಗುತ್ತಿದ್ದಂತೆ ಅಮೆರಿಕದ ಹಲವು ಕಡೆ ಟೆಸ್ಲಾ ಶೋರೂಂ ಮೇಲೆ ದಾಳಿಗಳು ಆಗುತ್ತಿತ್ತು. ಇದರಿಂದಾಗಿ ಟೆಸ್ಲಾ ಕಂಪನಿಗೆ ಭಾರೀ ನಷ್ಟವಾಗಿತ್ತು. ಅಲ್ಲದೆ ಮಸ್ಕ್ ಅವರು ನಿರಂತರವಾಗಿಯೂ ಸರ್ಕಾರದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ವೇಳೆಯೂ ಅವರ ಉದ್ಯಮದಲ್ಲಿ ಸಾಕಷ್ಟು ನಷ್ಟವಾಗಿತ್ತು. ಆದರೆ ಇದನ್ನು ಲೆಕ್ಕಿಸದೆ ಅವರು ಟ್ರಂಪ್ ಸರ್ಕಾರದಲ್ಲಿ ತಮ್ಮ ಹುದ್ದೆಯನ್ನು ನಿಭಾಯಿಸುತ್ತಿದ್ದರು. ಆದರೆ ಟ್ರಂಪ್ ತರುತ್ತಿರುವ ಒಂದೊಂದು ನೀತಿಗಳು, ಅದರಲ್ಲೂ ತೆರಿಗೆ ವಿಚಾರದಲ್ಲಿ ಇಟ್ಟಿರುವ ಹೆಜ್ಜೆಯನ್ನು ಟೀಕಿಸಿದ ಬಳಿಕ ಪರಿಸ್ಥಿತಿ ಅರಿತಿದ್ದ ಮಸ್ಕ್ ಅಲ್ಲಿಂದ ಹೊರಬಂದಿದ್ದು, ಈಗ ಟ್ರಂಪ್ ಸರ್ಕಾರದ ವೈಫಲ್ಯಗಳ ವಿರುದ್ಧ ತಮ್ಮ ಸಮರ ಸಾರಿದ್ದಾರೆ. ದಿನಕಳೆದಂತೆ ಈ ದಿಗ್ಗಜರ ನಡುವಿನ ಗುದ್ದಾಟ ಹೀಗೆ ಮುಂದುವರೆದರೆ ಇನ್ನೊಂದು ಹಂತ ತಲುಪುವುದನ್ನು ಅಲ್ಲಗಳೆಯುವಂತಿಲ್ಲ.