Movie News: ಶಾರುಖ್ ಅಭಿನಯದ ‘ಪಠಾಣ್’ ಚಿತ್ರವು ಜಗತ್ತಿನಾದ್ಯಂತ 1000 ಕೋಟಿ ರೂ. ಗಳಿಕೆ ಮಾಡುವ ಮೂಲಕ ಬ್ಲಾಕ್ಬಸ್ಟರ್ ಆಗಿತ್ತು. ಇದರಿಂದ ಸಹಜವಾಗಿಯೇ ಅವರ ಮುಂದಿನ ಚಿತ್ರ ‘ಜವಾನ್’ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಈ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿದ್ದು, ಈ ಪೈಕಿ ಚಿತ್ರದ ಆಡಿಯೋ ಹಕ್ಕುಗಳು ದಾಖಲೆಯ 36 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿರುವ ಸುದ್ದಿ ಬಂದಿದೆ.
‘ಜವಾನ್’ ಚಿತ್ರದ ಆಡಿಯೋ ಹಕ್ಕುಗಳನ್ನು ಭಾರತದ ಖ್ಯಾತ ಆಡಿಯೋ ಸಂಸ್ಥೆಯಾದ ಟಿ-ಸೀರೀಸ್ ತನ್ನದಾಗಿಸಿಕೊಂಡಿದ್ದು, 36 ಕೋಟಿ ರೂ.ಗಳನ್ನು ಕೊಟ್ಟು ಹಕ್ಕುಗಳನ್ನು ಪಡೆದಿದೆ ಎಂದು ಹೇಳಲಾಗಿದೆ. ಚಿತ್ರಕ್ಕೆ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್, ಈ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ನಿರ್ಮಿಸುತ್ತಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ.
‘ಜವಾನ್’ ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಯೋಗಿ ಬಾಬು, ಸುನೀಲ್ ಗ್ರೋವರ್, ಸಾನ್ಯಾ ಮಲ್ಹೋತ್ರಾ ಸೇರಿದಂತ ಹಲವು ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ. ದೀಪಿಕಾ ಪಡುಕೋಣೆ, ಸಂಜಯ್ ದತ್ ಮತ್ತು ವಿಜಯ್ ಅತಿಥಿ ಕಲಾವಿದರಾಗಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ‘ಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.
ಸದ್ದಿಲ್ಲದೆ ಶುರುವಾಗಿದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಶೂಟಿಂಗ್
ಕೇಳಿದಷ್ಟು ಹಣ ನೀಡದ್ದಕ್ಕೆ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಮಂಗಳಮುಖಿಯರು ಅರೆಸ್ಟ್