ಬೆಂಗಳೂರು : ರಾಜ್ಯದಲ್ಲಿ ವಾರಾಂತ್ಯದ ಲಾಕ್‍ಡೌನ್ ಹಾಗೂ ನೈಟ್‍ಕರ್ಫ್ಯೂ ಬೇಕಾ, ಬೇಡವಾ ಎಂಬುದನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸಿ ಸರ್ಕಾರ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ತೊಂದರೆ ಕೊಟ್ಟು, ಅವರ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸಿ ಲಾಕ್‍ಡೌನ್ ಇಲ್ಲವೆ, ನೈಟ್ ಕರ್ಫ್ಯೂ ವಿಸ್ತರಣೆ ಮಾಡಬೇಕೆಂಬ ದುರುದ್ದೇಶ ಸರ್ಕಾರಕ್ಕೂ ಇಲ್ಲ. ಏನೇ ಕ್ರಮ ಕೈಗೊಂಡರೂ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹತ್ವದ ಸಭೆ ಕರೆದಿದ್ದಾರೆ. ತಜ್ಞರು ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಆಗಮಿಸಲಿದ್ದಾರೆ. ನಾವು ಎಲ್ಲ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಅಂತಿಮವಾಗಿ ಮುಖ್ಯಮಂತ್ರಿಗಳು ಉತ್ತಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇನ್ನು ಮುಂದೆ ಪ್ರತಿದಿನ 1,20,000 ಕೋವಿಡ್ ಪ್ರಕರಣಗಳು ಬರುವ ಸಾಧ್ಯತೆಗಳಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಕಡಿಮೆ ಎಂದರೂ 60 ರಿಂದ 70 ಸಾವಿರ ಪ್ರಕರಣಗಳು ದಾಖಲಾಗಬಹುದು. ಇದರ ಬಗ್ಗೆಯೂ ನಾವು ಚಿಂತಿಸಬೇಕಲ್ಲವೆ ಎಂದು ಸುಧಾಕರ್ ಮಾಧ್ಯಮದವರನ್ನು ಪ್ರಶ್ನಿಸಿದರು.
ತಜ್ಞರ ಸಲಹೆಯಂತೆ ಸರ್ಕಾರ ಮುನ್ನಡೆಯಲಿದೆ. ಅವರು ನೀಡುತ್ತಿರುವ ಶಿಫಾರಸುಗಳನ್ನು ನಾವು ಅನುಷ್ಠಾನ ಮಾಡುತ್ತಿದ್ದೇವೆ. ನಾಳೆ ಯಾವ ಶಿಫಾರಸು ನೀಡುತ್ತಾರೋ ನೋಡೋಣ. ಜನತೆಗೆ ಒಳ್ಳೆಯದಾಗುತ್ತದೆ ಎನ್ನುವುದಾದರೆ ಸರ್ಕಾರವೂ ಒಳ್ಳೆಯ ನಿರ್ಧಾರ ಮಾಡಲಿದೆ ಎಂದರು. ನಾಳೆ ಗುಡ್‍ಫ್ರೈಡೆ. ಜನತೆ ಪಾಲಿಗೆ ಶುಭ ಸುದ್ದಿ ಸಿಗಲಿದೆಯೇ ಎಂಬ ಪ್ರಶ್ನೆಗೆ ಗುಡ್‍ಫ್ರೈಡೆ ಅಂದರೆ ಏನು ಎಂದು ಗೊತ್ತಲ್ಲವೇ ಎಂದು ಮಾರ್ಮಿಕವಾಗಿ ಹೇಳಿದರು.
ರಾಜಧಾನಿ ಬೆಂಗಳೂರಿಗೆ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಬೇಕೆ, ಬೇಡವೆ ಎಂಬುದರ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚೆಯಾಗಲಿದೆ. ಇಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ನಮಗೂ ಕೂಡ ಆತಂಕವಿದೆ. ತಜ್ಞರು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲು ಹೇಳುತ್ತಾರೋ ನನಗೂ ಮಾಹಿತಿ ಇಲ್ಲ. ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡೇ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ನಾಳಿನ ಸಭೆಯು ಅಂಕಿ-ಅಂಶಗಳ ಆಧಾರದ ಮೇಲೆ ನಡೆಯಲಿದೆ. ನಾವು ತೆಗೆದುಕೊಂಡಿರುವ ಕ್ರಮಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದರ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.