ಕಲಬುರಗಿ : ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಪ್ರೀತಿಸುವ ಜನರ ಸಂಖ್ಯೆ ಅಪಾರ. ಆದರೆ ಇಂದು ಪುನೀತ್ ನಮ್ಮ ಜೊತೆ ಇಲ್ಲ ಎಂಬ ಕೊರಗು ತೀವ್ರವಾಗಿದೆ. ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಅಮರವಾಗಿಸುವ ಕೆಲಸ ಎಲ್ಲೆಡೆ ನಡೆಯುತ್ತಿದೆ. ಈಗ ಕಲಬುರಗಿಯ (Kalaburagi) ದಂಪತಿಗಳು ತಮ್ಮ ಮಗುವಿಗೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಪುನೀತ್ ಎಂದರೆ ಜನರಿಗೆ ಎಷ್ಟು ಇಷ್ಟ ಎಂಬುದಕ್ಕೆ ಇಂಥ ಘಟನೆಗಳೇ ಸಾಕ್ಷಿ. ಸದ್ಯ ಈ ದಂಪತಿ ಮತ್ತು ಮಗುವಿನ ಫೋಟೋ ವೈರಲ್ ಆಗುತ್ತಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ(Javergie) ತಾಲೂಕಿನ ಯಾತನೂರು (yatanuru)ಗ್ರಾಮದ ಸಿದ್ದು ಮತ್ತು ಕಾವೇರಿ ದಂಪತಿಗೆ ಪುನೀತ್ ರಾಜ್ಕುಮಾರ್ ಎಂದರೆ ಅಚ್ಚುಮೆಚ್ಚು. ಹಾಗಾಗಿ ತಮ್ಮ ಮೊದಲನೇ ಮಗುವಿಗೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಡಿ.5ರಂದು ಈ ಜೋಡಿಗೆ ಗಂಡು ಮಗು ಜನಿಸಿತು. ಹೆರಿಗೆಗೂ ಮುನ್ನವೇ ಅವರು ಈ ತೀರ್ಮಾನಕ್ಕೆ ಬಂದಿದ್ದರು. ಒಂದುವೇಳೆ ಗಂಡು ಮಗು ಜನಿಸಿದರೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಲು ದಂಪತಿ ನಿರ್ಧರಿಸಿದ್ದರು. ಅವರ ಆಸೆ ನೆರವೇರಿದೆ. ಕಂಠೀರವ ಸ್ಡುಡಿಯೋ ಆವರಣದಲ್ಲಿ ಇರುವ ಅಪ್ಪು ಸಮಾಧಿಗೆ ಪ್ರತಿದಿನ ನೂರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಪುನೀತ್ ನಿಧನರಾಗಿ ಎರಡು ತಿಂಗಳು ಕಳೆದಿದ್ದರೂ ಕೂಡ ಸಮಾಧಿಗೆ ಭೇಟಿ ನೀಡುವ ಜನರ ಸಂಖ್ಯೆ ಕಡಿಮೆ ಆಗಿಲ್ಲ. ಪುನೀತ್ ನಿಧನರಾಗಿ ಎರಡು ತಿಂಗಳು ಕಳೆದ ಹಿನ್ನೆಲೆಯಲ್ಲಿ ಡಿ.29ರಂದು ಅವರ ಕುಟುಂಬದವರು ಬಂದು ಸಮಾಧಿಗೆ ಪೂಜೆ ಸಲ್ಲಿಸಿದ್ದರು. ಪುನೀತ್ ನಿಧನದ ಬಳಿಕ ಜನರಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಹೆಚ್ಚಿದೆ. ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಸಂತಸದ ವಿಚಾರ.