Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ನಾವು ವಿದ್ಯೆ ಕಲಿಯುವ ವಿಷಯದಿಂದ ಹಿಡಿದು ವೃದ್ದಾಪ್ಯದವರೆಗೆ ನೆಮ್ಮದಿಯಿಂದ ಜೀವಿಸಲು ಏನೇನು ಮಾಡಬೇಕು..? ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಯಾವ ರೀತಿ ಇರಿಸಿಕೊಳ್ಳಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ಜೀವನ ಸಂಗಾತಿ ಆಯ್ಕೆ ಮಾಡುವ ಬಗ್ಗೆಯೂ ಚಾಣಕ್ಯರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಮೊದಲನೇಯದಾಗಿ ಅವರ ಗುಣವನ್ನು ತಿಳಿದುಕೊಳ್ಳಿ. ಗುಣ ಉತ್ತಮವಾಗಿದ್ದರೆ, ನಿಮ್ಮ ಜೀವನವೂ ಉತ್ತಮವಾಗಿರುತ್ತದೆ. ಕೆಲವೊಮ್ಮೆ ತೋರಿಕೆಯ ಗುಣವೂ ಇರಬಹುದು. ಆದರೆ ಅವರಿಗಿರುವ ಗುಣ ನಿಜವಾಗಿಯೂ ಉತ್ತಮವೋ, ಅಥವಾ ತೋರಿಕೆಗೆ ಉತ್ತಮವಾಗಿರುವ ಗುಣವೋ ಅಂತಾ ತಿಳಿದುಕೊಳ್ಳುವುದು ನಿಮ್ಮ ಕೆಲಸ. ಸಿಹಿ ಸಿಹಿಯಾಗಿ ಮಾತನಾಡಿ, ನಿಮ್ಮನ್ನು ಹೊಗಳಿಕೊಂಡೇ ಇದ್ದರೆ, ನಿಮ್ಮ ಮೇಲೆ ಕೋಪಿಸಿಕೊಳ್ಳದಿದ್ದರೆ, ಅಂಥವರನ್ನು ಅಷ್ಟು ಬೇಗ ನಂಬಬಾರದು. ಏಕೆಂದರೆ, ಉತ್ತಮರ ಮಾತಿನಲ್ಲಿ ಅತೀಯಾದ ಸಿಹಿ ಇರುವುದಿಲ್ಲ. ನಿಮ್ಮ ಮೇಲಿನ ಕಾಳಜಿಗಾದರೂ, ಅವರಿಗೆ ನಿಮ್ಮ ಮೇಲೆ ಕೋಪ ಬಂದೇ ಬರುತ್ತದೆ.
ಇನ್ನು ಅವರ ಮಾತುಗಳನ್ನು ಗಮನಿಸಿ, ಇನ್ನೊಬ್ಬರ ಬಗ್ಗೆ ತಪ್ಪಾಗಿ ಮಾತನಾಡುವುದು. ಸ್ವಾರ್ಥಿಗಳ ರೀತಿ ವರ್ತಿಸುವುದು, ಅಹಂಕಾರದಿಂದ ಮಾತನಾಡುವ ಗುಣ ಉಳ್ಳವರಿಂದ ದೂರವಿರುವುದು ಉತ್ತಮ. ಜೊತೆಗೆ ಎಲ್ಲರ ಎದುರಿಗೆ ನಿಮ್ಮೊಂದಿಗೆ ಅವರು ಹೇಗೆ ಮಾತನಾಡುತ್ತಾರೆ ಅನ್ನೋದು ಕೂಡ ನೀವು ಗಮನಿಸಬೇಕು. ನಿಮಗೆ ಗೌರವಿಸುತ್ತಾರೋ, ಅಥವಾ ನಿಮ್ಮ ಬಗ್ಗೆ ತಮಾಷೆ ಮಾಡುತ್ತಾರೋ ಎಂದು ಗಮನಿಸಿ.
ಇನ್ನೊಬ್ಬರ ಬಗ್ಗೆ ನೀವು ಕೆಟ್ಟದಾಗಿ ಮಾತನಾಡಿದಾಗ, ಅದನ್ನು ವಿರೋಧಿಸಿದರೆ, ಅವರು ಉತ್ತಮ ಗುಣ ಉಳ್ಳವರು ಎಂದರ್ಥ. ಏಕೆಂದರೆ, ಉತ್ತಮ ಗುಣ ಉಳ್ಳವರು ತಮ್ಮಷ್ಟಕ್ಕೆ ತಾವಿರುತ್ತಾರೆ. ಇನ್ನೊಬ್ಬರ ವಿಷಯಕ್ಕೆ ಹೋಗುವುದಿಲ್ಲ. ಇಂಥವರನ್ನು ನೀವು ನಂಬಬಹುದು.
ಇನ್ನು ಕೊನೆಯದಾಗಿ ನಿಮ್ಮ ಜೀವನ ಸಂಗಾತಿಯಾಗುವವರಿಗೆ ಸಹಾಯದ ಮನೋಭಾವ ಇದೆಯೇ ಎಂದು ನೋಡುವುದು ತುಂಬಾ ಮುಖ್ಯ. ಸಹಾಯ ಮಾಡುವ ಗುಣವಿರುವವರು ಉತ್ತಮವಾಗಿ ವೈವಾಹಿಕ ಜೀವನ ನಿರ್ವಹಿಸಬಲ್ಲರು. ಜವಾಬ್ದಾರಿ ಇಲ್ಲದೇ, ಸಹಾಯ ಮಾಡಲು ಹಿಂಜರಿಯುವ ಮನಸ್ಥಿತಿ ಇರುವವರು ನಿಮಗೆಂದೂ ನಮ್ಮದಿ ನೀಡುವ ಜೀವನ ಸಂಗಾತಿ ಆಗಲಾರರು.