Saturday, April 19, 2025

Latest Posts

ತಿರುಪತಿಯ 2ನೇ ಘಾಟ್‌ ರಸ್ತೆಯಲ್ಲಿ ಭೂಕುಸಿತ-ಸಂಚಾರಕ್ಕೆ ತಡೆ

- Advertisement -

ತಿರುಪತಿ: ತಿರುಮಲದ ಪ್ರಸಿದ್ಧ ವೆಂಕಟೇಶ್ವರ ದೇಗುಲಕ್ಕೆ ಹೋಗುವ ಎರಡನೇ ಘಾಟ್‌ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ರಸ್ತೆಯ ಒಂದು ಬದಿ ಕುಸಿತಕ್ಕೆ ಒಳಗಾಗಿದ್ದರೆ, ಇನ್ನೊಂದು ಬದಿಯಲ್ಲಿ ಭಾರಿ ಬೃಹತ್‌ ಬಂಡೆ ಕಲ್ಲುಗಳು ಬಿದ್ದಿವೆ.

ಹೀಗಾಗಿ ಈ ರಸ್ತೆಯಲ್ಲಿ ಅನಿರ್ದಿಷ್ಟಾವಧಿವರೆಗೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

‘ಭೂಕುಸಿತವು ಬುಧವಾರ ಮುಂಜಾನೆ ಸಂಭವಿಸಿದೆ. ಇದೇ ವೇಳೆಯಲ್ಲಿ 20 ಭಕ್ತರಿದ್ದ ಬಸ್‌ ಬೆಟ್ಟವೇರುತ್ತಿತ್ತು. ರಸ್ತೆಯಲ್ಲಿ ಭಾರಿ ಗಾತ್ರದ ಬಂಡೆಗಳು ಉರುಳುವುದನ್ನು ಕಂಡ ಕೂಡಲೇ ಬಸ್‌ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್‌ ಅನ್ನು ಕೂಡಲೇ ನಿಲ್ಲಿಸಿದ್ದಾರೆ. ಇದರಿಂದ ಬಸ್‌ನಲ್ಲಿದ್ದ ಭಕ್ತರು ಬದುಕುಳಿದಿದ್ದಾರೆ’ ಎಂದು ದೇವಾಲಯದ ಸಿಬ್ಬಂದಿ ತಿಳಿಸಿದ್ದಾರೆ.

‘ಕಾರು ಗಾತ್ರದ ಬಂಡೆಗಳೂ ಸೇರಿದಂತೆ ದೊಡ್ಡ ಗಾತ್ರದ ಬಂಡೆಗಳು ಉರುಳಿದ್ದರಿಂದ, ರಸ್ತೆಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಆಗಿದೆ. ಅಲ್ಲದೆ ಸುಮಾರು 20 ಕಿ.ಮೀ ಉದ್ದದ ಸುರಳಿಯಾಕಾರ ರಸ್ತೆಯಲ್ಲಿ 1000 ಅಡಿ ಮತ್ತು 800 ಅಡಿ ಎತ್ತರದಲ್ಲಿ ತಡೆಗೋಡೆಗಳಿಗೂ ಹಾನಿಯಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ತಿರುಮಲದಲ್ಲಿ ಭಾರೀ ಮಳೆ ಸುರಿದಿತ್ತು. ಮೂರು ದಿನಗಳ ಬಿಡುವಿನ ಬಳಿಕ ಮತ್ತೆ ಮಂಗಳವಾರ ರಾತ್ರಿ ಸಾಧಾರಣ ಮಳೆಯಾಗಿದೆ. ಇದು ಬೆಟ್ಟದಲ್ಲಿ ಮಣ್ಣು ಕುಸಿತಕ್ಕೆ ಕಾರಣವಾಗಿದೆ. ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನವದೆಹಲಿಯ ಐಐಟಿಯ ತಜ್ಞರ ತಂಡವು ರಸ್ತೆಯ ಹಾನಿ ಸ್ಥಳಗಳಿಗೆ ಶೀಘ್ರದಲ್ಲೇ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ ಬಿಗಿ ಮುನ್ನೆಚ್ಚರಿಕಾ ಕ್ರಮಗಳ ನಡುವೆ ಹಳೆಯ ಘಾಟ್ ರಸ್ತೆಯಲ್ಲಿ ಆಂಧ್ರ ಪ್ರದೇಶ ರಸ್ತೆ ಸಾರಿಗೆ ನಿಗಮದ ಬಸ್‌ಗಳೂ ಸೇರಿದಂತೆ ಯಾತ್ರಾರ್ಥಿಗಳು ಸಾಗುವ ವಾಹನಗಳಿಗೆ ಅನುಮತಿ ನೀಡಲಾಗಿದೆ. ಆನ್‌ಲೈನ್‌ ಮೂಲಕ ದರ್ಶನದ ಟಿಕೆಟ್‌ಗಳನ್ನು ಖರೀದಿಸಿದ ಬಳಿಕ, ತಿರುಮಲಕ್ಕೆ ಭೇಟಿ ನೀಡಲು ಸಾಧ್ಯವಾಗದ ಭಕ್ತರು ಆರು ತಿಂಗಳೊಳಗೆ ಯಾವುದೇ ದಿನ ತಿರುಮಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

- Advertisement -

Latest Posts

Don't Miss