Sunday, February 9, 2025

Latest Posts

ಹುದ್ದೆಗಳನ್ನು ತ್ಯಾಗ ಮಾಡಿದವರ ಆದರ್ಶ ಮಾರ್ಗದಲ್ಲಿ ನಾವು ನಡೆಯೋಣ: ಸಿಎಂ ಸಿದ್ದರಾಮಯ್ಯ

- Advertisement -

Political News: ಜನವರಿ 21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಕಾರ್ಯಕ್ರಮ ಮತ್ತು ಜೈ ಬಾಪು- ಜೈ ಭೀಮ್ – ಜೈ ಸಂವಿಧಾನ ಅಭಿಯಾನದ ಬೃಹತ್ ಸಮಾವೇಶದ ಪೂರ್ವ ಸಿದ್ಧತಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಹಲವು ರಾಜಕೀಯ ಗಣ್ಯರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿರುವ ಸಿಎಂ, ಜೈ ಬಾಪು- ಜೈ ಭೀಮ್- ಜೈ ಸಂವಿಧಾನದ ಐತಿಹಾಸಿಕ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸೋಣ. ಜನವರಿ 21ರ ಬೆಳಗಾವಿಯ ಚಾರಿತ್ರಿಕ ಸಮಾವೇಶಕ್ಕೆ ಎಲ್ಲರೂ ಜೊತೆಯಾಗಿ ಮುನ್ನಡೆಯೋಣ. ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನದ ಬಗ್ಗೆ ಗೌರವ ಇರುವ ಎಲ್ಲರಿಗೂ ಸಮಾವೇಶಕ್ಕೆ ಸ್ವಾಗತ. ಆರ್‌ಎಸ್‌ಎಸ್‌ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ದೇಶಕ್ಕೆ ದ್ರೋಹ ಬಗೆದ ಚರಿತ್ರೆಯನ್ನು ಹೊಂದಿದೆ ಎಂದು ಸಿಎಂ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಹೋರಾಟ, ತ್ಯಾಗ, ಬಲಿದಾನಗಳಿಂದ ಕಟ್ಟಿದ್ದಾಗಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ತಮ್ಮ ಪಾಲಿಗೆ ಒದಗಿ ಬಂದಿದ್ದ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಈ ಆದರ್ಶಗಳ ಮಾರ್ಗದಲ್ಲಿ ನಾವು ಮುನ್ನಡೆಯೋಣ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬಗ್ಗೆ ಗೌರವ ಇಲ್ಲದೆ ವಿಗ್ರಹ ಮಾಡಿಟ್ಟುಕೊಂಡಿರುವ ಬಿಜೆಪಿಯವರಿಗೆ ಗಾಂಧಿ ಬಗ್ಗೆ ಗೌರವ ಇಲ್ಲ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೌರವ ಇಲ್ಲ. ಅಂಬೇಡ್ಕರ್, ನೆಹರೂ ಯಾರ ಬಗ್ಗೆಯೂ ಗೌರವ ಇಲ್ಲ. ಇಂತಹವರಿಗೆ ದೇಶದ ಸಂವಿಧಾನ ಮತ್ತು ಚರಿತ್ರೆಯ ಬಗ್ಗೆಯೂ ಗೌರವ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅಂಬೇಡ್ಕರ್, ಗಾಂಧಿ, ನೆಹರೂ ಮತ್ತು ಕಾಂಗ್ರೆಸ್ಸಿನ ಹೋರಾಟದ ಚರಿತ್ರೆಯನ್ನು ನಾವು ಮುಂದಿನ ಪೀಳಿಗೆಗೆ ಅರ್ಥ ಮಾಡಿಸಬೇಕಿದೆ. ನಾವು ಗಾಂಧಿ ವಂಶಸ್ಥರು, ಅವರು ಗೋಡ್ಸೆ ವಂಶಸ್ಥರು. ಬಿಜೆಪಿ ಮತ್ತು ಕಾಂಗ್ರೆಸ್ಸಿನ ಈ ಸೈದ್ಧಾಂತಿಕ ವ್ಯತ್ಯಾಸವನ್ನು ಇವತ್ತಿನ ಯುವ ಪೀಳಿಗೆಗೆ ಅರ್ಥೈಸಬೇಕಿದೆ. ಇದಕ್ಕಾಗಿ ಜನವರಿ 21ರ ಗಾಂಧಿ ಭಾರತ ಸಮಾವೇಶವನ್ನು ಅತ್ಯಂತ ಯಶಸ್ವಿಗೊಳಿಸೋಣ. ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನದ ಬಗ್ಗೆ ಗೌರವ ಇರುವ ಎಲ್ಲರಿಗೂ, ಎಲ್ಲಾ ಪಕ್ಷದವರಿಗೂ ಸಮಾವೇಷಕ್ಕೆ ಸ್ವಾಗತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

Latest Posts

Don't Miss