International News: ಜಾಗತಿಕ ಮಟ್ಟದಲ್ಲಿ ಮಾರಕವಾಗಿರುವ ಉಗ್ರ ಚಟುವಟಿಕೆಗಳನ್ನು ಪೋಷಿಸುವಲ್ಲಿ ಪಾಕಿಸ್ತಾನ ತೊಡಗಿಸಿಕೊಂಡಿದೆ ಎನ್ನುವುದು ಆಗಾಗ ಹೊರಬೀಳುತ್ತಲೇ ಇದೆ. ಅದರಂತೆಯೇ ಈಗ ಪಾಕ್‌ನ ಇನ್ನೊಂದು ರೀತಿಯ ಉಗ್ರ ಪ್ರೇಮ ಬಯಲಾಗಿದೆ.
ಮುಂಬೈ ದಾಳಿಯ ರೂವಾರಿ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಸೇರಿದಂತೆ ಭಾರತಕ್ಕೆ ಬೇಕಾಗಿರುವ ಪಾಕಿಸ್ತಾನದ ಉಗ್ರರಿಗೆ ಜೀವ ಭಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವು ಭಯೋತ್ಪಾದನಾ ದಾಳಿಗಳಿಗೆ ಕಾರಣರಾದ ಉಗ್ರರ ಭದ್ರತೆಯನ್ನು ಪಾಕಿಸ್ತಾನ ಹೆಚ್ಚಿಸಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆ ಮಾಹಿತಿ ಹೊರಹಾಕಿದೆ.
ಈ ಕುರಿತು ಮಾಹಿತಿ ಸಂಗ್ರಹಿಸಿರುವ ಸಂಸ್ಥೆಯು, ಭಾರತಕ್ಕೆ ಬೇಕಾಗಿರುವ 25ಕ್ಕೂ ಹೆಚ್ಚು ಉಗ್ರರು ಕಳೆದ 2 ವರ್ಷಗಳಲ್ಲಿ ರಹಸ್ಯವಾಗಿ ಅನಾಮಿಕ ವ್ಯಕ್ತಿಗಳಿಂದ ಗುಂಡಿನ ದಾಳಿಗೆ ಬಲಿಯಾದ ಬಳಿಕ ಈ ಮಹತ್ವದ ಬೆಳವಣಿಗೆಯು ನಡೆದಿದೆ ಎನ್ನುವುದು ಗಮನಾರ್ಹವಾಗಿದೆ. ಇನ್ನೂ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿದ್ದ ಹಲವು ಟೆರರಿಸ್ಟ್‌ಗಳನ್ನು ಪಾಕಿಸ್ತಾನ ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಟ್ಟಿದೆ. ಈ ಮೂಲಕ ಪಾಕಿಸ್ತಾನ ಉಗ್ರ ಚಟುವಟಿಕೆಗಳನ್ನು ಬೆಂಬಲಿಸುತ್ತದೆ, ಭಯೋತ್ಪಾದಕರನ್ನು ಬೆಳೆಸುತ್ತಿದೆ ಎಂಬುವುದು ಮತ್ತೊಮ್ಮೇ ಸಾಬೀತಾಗಿದೆ.
ಅಲ್ಲದೆ ಮುಖ್ಯವಾಗಿ ಈ ಬಗ್ಗೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಯಾಗಿರುವ ಐಎಸ್‌ಐ ಎಲ್ಲ ಉಗ್ರರ ಸುರಕ್ಷತಾ ಕ್ರಮಗಳನ್ನು ಮೇಲ್ವಿಚಾರಣೆ ನಡೆಸುತ್ತಿದೆ. ಇನ್ನೂ ಉಗ್ರ ಹಫೀಜ್ ಸಯೀದ್, ಭಾರತದ ಹಲವೆಡೆ ಸಂಭವಿಸಿದ್ದ ಉಗ್ರ ಕೃತ್ಯಗಳ ರೂವಾರಿಯಾಗಿದ್ದನು. ಅಲ್ಲದೆ ಈತನೂ ಸಹ ಇತರ ಉಗ್ರರಂತೆಯೇ, ಅನಾಮಿಕರ ಗುಂಡಿಗೆ ಬಲಿಯಾಗಬಹುದು ಎಂದು ವಿದೇಶಾಂಗ ವ್ಯವಹಾರಗಳ ತಜ್ಞ ರೊಬಿಂದರ್ ಸಚ್‌ದೇವ್ ವಿಶ್ಲೇಷಣ್ ಮಾಡಿದ್ದಾರೆ. ಇನ್ನೂ ಹಫೀಜ್ ಆಪ್ತ ಖತಲ್ ಸಹ ಅನಾಮಿಕರ ಗುಂಡಿಗೆ ರಕ್ತ ಚೆಲ್ಲಿದ್ದ ಎಂದು ಅವರು ತಿಳಿಸಿದ್ದಾರೆ.
ಅಂದರೆ ಈ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡವರು, ಅದರಲ್ಲೂ ಯಾರು ಖಡ್ಗದಿಂದ ಬದುಕುತ್ತಾರೋ ಅಂಥವರು ಅದರಿಂದಲೇ ಜೀವ ಬಿಡುತ್ತಾರೆ ಎಂಬ ಮಾತಿದೆ. ಈ ಮಾತು ಹಫೀಜ್ ಸಯೀದ್ ವಿಚಾರದಲ್ಲೂ ನಿಜವಾಗಲಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವು ಉಗ್ರರಿಗೆ ರಕ್ಷಣೆ ಮಾಡಲು ಮುಂದಾಗಿದೆ. ಹೀಗಾಗಿ ಪಾಕ್ ಭಯೋತ್ಪಾದಕರನ್ನು ಬೆಂಬಲಿಸುತ್ತಲೇ ಬಂದಿದೆ, ಅದು ಈಗ ಸತ್ಯವಾಗುತ್ತಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.
ಒಟ್ನಲ್ಲಿ.. ಭಾರತ ದೇಶದಲ್ಲಿ ನಡೆದ ವಿವಿಧ ಭಯೋತ್ಪಾದಕ ಚಟುವಟಿಕೆಗಳಿಗೆ ಕಾರಣರಾದ ಉಗ್ರರನ್ನು ತನ್ನ ಪಾಪ ಕರ್ಮಗಳಿಂದಲೇ ಬಳಲುತ್ತಿರುವ ಪಾಕಿಸ್ತಾನ ಸಾಕುತ್ತಿದೆ ಅನ್ನೋದನ್ನ ಪ್ರತಿಯೊಬ್ಬ ಭಾರತೀಯನು ಮರೆಯುವುದು ಸಾಧ್ಯವಿಲ್ಲ. ಮುಂಬೈ ದಾಳಿಯಂತಹ ಭೀಕರ ಕೃತ್ಯಗಳಲ್ಲಿ ರೂವಾರಿಯಾಗಿದ್ದ ಹಫೀಜ್ ಸಯೀದ್‌ನಿಗೆ ತನ್ನ ಕರ್ಮದ ಫಲ ಈಗ ಕಾಡುತ್ತಲೇ ಇದೆ ಅನ್ನೋದು ಕೂಡ ಸತ್ಯವಾಗಿದೆ. ಅದೆಷ್ಟೋ ಜನರ ಜೀವ ಬಲಿಪಡೆದು ಸಂಭ್ರಮಿಸುತ್ತಿದ್ದವರೀಗ ಬಿಲ ಸೇರುವ ಸಮಯ ಬಂದಿದೆ. ಜೀವ ಭಯದ ಕಾರಣಕ್ಕೆ ರಕ್ಷಣೆಗಾಗಿ ಪಾಕಿಗಳ ಮೊರೆ ಹೋಗಿದ್ದಾರೆ, ಅಲ್ಲದೆ ಭಾರತದ ಜನಪ್ರಿಯತೆ ಹಾಗೂ ಗಟ್ಟಿತನದ ಫಲವಾಗಿ ನಮ್ಮ ವಿರುದ್ಧ ಸಂಚು ರೂಪಿಸಲು ಪಾಕಿಸ್ತಾನ ವಿಫಲ ಯತ್ನಗಳನ್ನು ಮಾಡಿಸುತ್ತಲೇ ಇದೆ ಅನ್ನೋದು ಕೂಡ ಅಷ್ಟೇ ನಿಜವಾಗಿದೆ. ಅದೇನೆ ಇರಲಿ.. ಗುಂಡು, ಮದ್ದು, ರಕ್ತ ಅಂತ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಿ, ಜನರನ್ನು ನಿರ್ದಯವಾಗಿ ಕೊಲ್ಲುತ್ತಿದ್ದವರ ರಕ್ತ ಹರಿಯುವ ಕಾಲ ಸನ್ನಿಹಿತವಾದಂತೆ ಕಂಡು ಬರುತ್ತಿದೆ. ಅದಕ್ಕೆ ಹೇಳೋದು ಕರ್ಮದ ಫಲ ಯಾರೊಬ್ಬರನ್ನೂ ಬಿಡಲಾರದು ಅಂತ..