Dharwad News: ಧಾರವಾಡ: ಜಿಲ್ಲೆಯಲ್ಲಿ ಜವಾಬ್ದಾರಿ ಮರೆತ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಮುಂದುವರೆಸಿದ್ದಾರೆ.
ಜನಸಮಸ್ಯೆಗಳಿಗೆ ಸ್ಪಂದಿಸದ, ಆಡಳಿತದಲ್ಲಿ ನಿರ್ಲಕ್ಷ ವಹಿಸಿದ ಅಧಿಕಾರಿಗಳಿಗೆ ಸಚಿವರು ಚೆನ್ನಾಗಿಯೇ ಮೈಚಳಿ ಬಿಡಿಸುವ ಕೆಲಸವನ್ನು ಇತ್ತೀಚಿನ ಸಭೆಗಳಲ್ಲಿ ಮಾಡುತ್ತಿದ್ದಾರೆ. ಶುಕ್ರವಾರವೂ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕರೆದಿದ್ದ ಬರ ಪರಿಹಾರ ಕ್ರಮಗಳ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಏನ್ರೀ ನಿಮ್ಮ ಕೆಲಸ..!? ಏನ್ ಮಾಡಿದ್ದೀರಿ, ತೋರಿಸಿ..!?
ಸಭೆಯಲ್ಲಿ ಸಚಿವರು, ಜಿಲ್ಲೆಯಲ್ಲಿ ಈವರೆಗೆ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವಿವರ ಕೇಳಿದರು. ಮಾಹಿತಿ ನೀಡಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಡವರಿಸಿದರು. ಆಗ ಸಚಿವರು ಆಕ್ರೋಶಗೊಂಡು, “ ಏನ್ರೀ.. ನಾನೀಗ ಬಂದಿದ್ದೇನೆ; ಮಾಹಿತಿ ಗೊತ್ತಿಲ್ಲ; ಕೆಲಸ ಆಗೊಲ್ಲ; ಬರೊಲ್ಲ ಎಂಬೆಲ್ಲ ಇಲ್ಲಸಲ್ಲದ ಕಾರಣಗಳನ್ನು ನೀಡಲೇಬಾರದು. ಕೆಲಸ ಮಾಡುವುದಷ್ಟೇ ನಿಮ್ಮ ಗುರಿ ಆಗಬೇಕು” ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ವೇದಿಕೆಯಲ್ಲೇ ಹಿಗ್ಗಾಮುಗ್ಗಾ ತರಾಟೆ
ಮತ್ತೆ ವೇದಿಕೆಯತ್ತ ಗ್ರಾಮೀಣಾಭಿವೃದ್ಧಿ ಇಲಾಖೆಯ ಎಲ್ಲ ತಾಲ್ಲೂಕು ಅಧಿಕಾರಿಗಳನ್ನು ಬರಲು ಹೇಳಿ, ಮಾಹಿತಿ ಕೊಡುವಂತೆ ಕೇಳಿದರು. ನರೇಗಾದಡಿ ಯಾರ್ಯಾರು? ಏನೇನು ಪ್ರೊಗ್ರೆಸ್ ಮಾಡಿದ್ದೀರಿ..!? ಜಿಲ್ಲೆಯಲ್ಲಿ ಈ ತಿಂಗಳು ಏನೇನು ಕೆಲಸ ಆಗಿದೆ..!? ಏನು ಮಾಡಿಸಿದ್ದೀರಿ..!? ಎಷ್ಟು ಪ್ರಮಾಣದಲ್ಲಿ ಕೆಲಸ ಆಗಿದೆ..!? ಎಷ್ಟು ಜನ ಕೂಲಿ ಕಾರ್ಮಿಕರು ಕೆಲಸ ಮಾಡಿದ್ದಾರೆ..!? ಎಂದೆಲ್ಲ ಪ್ರಶ್ನಿಸಿದರು.
ಪೋಟೋ ತೋರಿಸಿ.. ನೋಡೋಣ…!?
ಮತ್ತೆ, ಕಳೆದ ಮೂರು ತಿಂಗಳಲ್ಲಿ ಎಷ್ಟು ಕೂಲಿ ಕಾರ್ಮಿಕರ ಸಭೆಗಳನ್ನ ಕರೆದಿದ್ದೀರಿ, ಚರ್ಚಿಸಿದ್ದೀರಿ..!? ಮಾಹಿತಿ ಕೊಡಿ, ಕೂಲಿ ಕಾರ್ಮಿಕರ ಜೊತೆ, ಮತ್ತೆ ಎಲ್ಲೆಲ್ಲಿ ಕೆಲಸ ಮಾಡಿಸಿದ್ದೀರಿ.. ಪೋಟೋ ತೋರಿಸಿಯೆಂದು ಅಧಿಕಾರಿಗಳನ್ನು ಗದರಿಸಿದರು. ಅಧಿಕಾರಿಗಳು ಸಚಿವರಿಗೆ ಕೆಲವೊಂದು ಹಳೆಯ ಪೋಟೋ ತೋರಿಸಿದಕ್ಕೆ ಸಚಿವರು ಆಕ್ರೋಶಗೊಂಡರು.
ಇನ್ನು ಮುಂದೆ ಹೀಗೆಯೇ ಇಂತಹ ವರ್ತನೆ ಮುಂದುವರಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಸಚಿವರು, “ ಜಿಲ್ಲೆಗೆ ಇಂತಹ ಬೇಜಾಬ್ದಾರಿ ಅಧಿಕಾರಿಗಳು ಏಕೆ ಬೇಕ್ರೀ ಸಂಬಳಕ್ಕೆ ತಕ್ಕಂತೆ ಕೆಲಸ ಮಾಡುವುದಕ್ಕೆ ಆಗುವುದಿಲ್ವಾ..!? “ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ದಿಟ್ಟಿಸುತ್ತ ಜಿಲ್ಲಾ ಪಂಚಾಯಿತಿ ಸಿಇಓ ಅವರನ್ನು ಪ್ರಶ್ನಿಸಿದರು.
‘ಲೂಟಿ ಮಾಡುವವರಿಗೆ ಕೊಳ್ಳೆ ಹೊಡೆಯುವವರಿಗೆ ನಮ್ಮ ಸರ್ಕಾರ ಎಂಬುದನ್ನ ನಿರೂಪಿಸಿದ್ದಾರೆ’
‘ರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ. ಸಿಬಿಐಗೆ ಸವಾಲ್ ಅಲ್ಲ, ನ್ಯಾಯಾಲಯಕ್ಕೆ ಸವಾಲ್’