Dharwad News: ಧಾರವಾಡ: ಧಾರವಾಡದಲ್ಲಿ ಬಿಜೆಪಿ ಮಹಿಳಾ ಮತ್ತು ಯುವ ಮೋರ್ಚಾ ಸಮಾವೇಶ ನಡೆದಿದ್ದು, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸಮಾವೇಶವನ್ನು ಉದ್ಘಾಟಿಸಿದ್ದಾರೆ. ನಟಿ ಮಾಳವಿಕಾ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಶಾಸಕ ಮಹೇಶ ಟೆಂಗಿನಕಾಯಿ, ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಅಣ್ಣಾಮಲೈ, ಎಲ್ಲ ಕಡೆಯೂ ಬಿಜೆಪಿ ಬರಬೇಕು. ಎಂಎಲ್‌ಎ, ಎಂಪಿ, ಸ್ಥಳೀಯ ಸಂಸ್ಥೆ ಎಲ್ಲ ಕಡೆ ಬಿಜೆಪಿ ಇರಬೇಕು. ಒಂದು ವಿಷಯದಲ್ಲಿ ನಾವು ಬಹಳ ಗಟ್ಟಿಯಾಗಿ ನಿಲ್ಲಬೇಕು. ಪ್ರಧಾನಿ ಯಾರಾಗಬೇಕು ಎಂಬ ವಿಷಯದಲ್ಲಿ ಗಟ್ಟಿಯಾಗಿರಬೇಕು. ಕ್ಷೇತ್ರದಲ್ಲಿ 2004 ಕಾಂಗ್ರೆಸ್ 400ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು. ಕ್ರಮೇಣ ಚುನಾವಣೆಯಿಂದ ಚುನಾವಣೆಗೆ ಕಡಿಮೆಯಾಗುತ್ತ ಬಂದಿದೆ. ಈ ಸಲ 300ಕ್ಕೂ ಕಡಿಮೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ. ಯಾಕಂದ್ರೆ ಪಕ್ಷ ಎಲ್ಲಿಯೂ ಇಲ್ಲದಂತಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ರಾಹುಲ್ ಗಾಂಧಿ ಅಮೇಥಿಯಿಂದ ರಾಯಬರೇಲಿಗೆ ಶಿಫ್ಟ್ ಆಗಿದೆ. 1952ರಲ್ಲಿ ಅವರ ತಾತ ಫೀರೋಜ್ ಗಾಂಧಿ ಬಂದಿದ್ದರು. ಅದೇ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಬಂದಿದ್ದರು. ಅವರಿಗೆ ಅವರೇ ಪ್ರಧಾನ ಮಂತ್ರಿ ಅಭ್ಯರ್ಥಿ ಅಂತಾ ಹೇಳಿಕೊಳ್ಳುತ್ತಾರೆ. ಆದರೆ ಒಂದು ಕ್ಷೇತ್ರದಲ್ಲಿ ಗಟ್ಟಿಯಾಗಿ ಸ್ಪರ್ಧಿಸಲು ರಾಹುಲ್ ಗಾಂಧಿಗೆ ಆಗುತ್ತಿಲ್ಲ. ಇವತ್ತು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಕೊನೆಯ ಎರಡು ಗಂಟೆ ಅವಧಿಯಲ್ಲಿ ರಾಯಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ಅಭ್ಯರ್ಥಿಯಾಗುವ ಅರ್ಹತೆ ಇಲ್ಲದ ಏಕೈಕ ವ್ಯಕ್ತಿ ರಾಹುಲ್ ಗಾಂಧಿ. INDI ಒಕ್ಕೂಟ ಮಾಡಿಕೊಂಡು 8 ತಿಂಗಳಾಯ್ತು. ಆದರೆ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
ಇಸ್ರೇಲ್-ಇರಾನ್ ಯುದ್ಧ ವಿಚಾರದ ಬಗ್ಗೆ ಮಾತನಾಡಿದ ಅಣ್ಣಾಮಲೈ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅದು ನಿರ್ಣಯ ಆಗಲಿದೆ. ಯಾಕಂದ್ರೆ ಭಾರತೀಯ ಪ್ರಧಾನಿ ಏನು ಮಾತನಾಡುತ್ತಾರೆ ಎಂದು ಇಡೀ ಜಗತ್ತು ನೋಡುತ್ತಿದೆ. ಅವರು ಏನು ಹೇಳುತ್ತಾರೆ ಅನ್ನೋದನ್ನು ಎರಡು ದೇಶ ಕಾಯುತ್ತಿವೆ. ಮೋದಿಯವರಿಗೆ ಕಣ್ಣುಮುಚ್ಚಿ ಮತ ಹಾಕುವ ರಾಜ್ಯ ಕರ್ನಾಟಕ. ಯಾಕಂದ್ರೆ ಮೋದಿಯವರು ಯಾವತ್ತೂ ಯಾವ ತಪ್ಪು ಮಾಡುವುದಿಲ್ಲ. ದೇಶದ ಎಲ್ಲರನ್ನೂ ರಕ್ಷಣೆ ಮೋದಿ ಮಾಡುತ್ತಾರೆ. ಧಾರವಾಡದ ಕಾಂಗ್ರೆಸ್ ನಾಯಕರೊಬ್ಬರು ಮೋದಿ 10 ವರ್ಷದಲ್ಲಿ ಏನು ಮಾಡಿಲ್ಲ ಎಂದು ಆರೋಪಿಸಿದ್ದಾರಂತೆ. ಅವರು ಧಾರವಾಡ-ಹುಬ್ಬಳ್ಳಿ ಅಭಿವೃದ್ಧಿ ನೋಡಬೇಕು. ಮುಂದಿನ ದಿನಗಳಲ್ಲಿ ಬೆಂಗಳೂರು ನಂತರದ ನಗರ ಹು-ಧಾ ಆಗಲಿದೆ. ಮುಂದಿನ 25 ವರ್ಷ ಈ ನಗರ ಬೆಳೆಯಲು ಬೇಕಾದ ಎಲ್ಲ ಸೌಲಭ್ಯ ಜೋಶಿ ಕೊಟ್ಟಿದ್ದಾರೆ. ಇಲ್ಲಿ ಐಐಟಿ, ಐಐಐಟಿ ಎಲ್ಲವೂ ಬಂದಿವೆ. ಅತೀ ಹೆಚ್ಚು ಸಾರ್ಟ್ ಆಪ್ ಆಗುವ ನಗರ ಹು-ಧಾ ಆಗಲಿದೆ. ಮುಂದಿನ ಹತ್ತು ವರ್ಷದಲ್ಲಿ ಹು-ಧಾ ಬೆಂಗಳೂರಿಗೆ ಸಮಾನವಾಗಿ ಬೆಳಯುತ್ತದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ತಮಿಳನಾಡು ಸಿಎಂ ಇಂಡಿ ಒಕ್ಕೂಟದಲ್ಲಿದ್ದಾರೆ. ಎಲೆಕ್ಷನ್ ಮುಗಿದ ಬಳಿಕ ಕೊಡೆಕೈನಾಲ್‌ಗೆ ವಿಶ್ರಾಂತಿಗೆ ಹೋಗಿದ್ದಾರೆ. ಅಲ್ಲಿ ಗಾಲ್ಫ್ ಆಡುತ್ತಿದ್ದಾರೆ. ವಯನಾಡಿಗೆ ರಾಹುಲ್ ಗಾಂಧಿ ಬಂದಿದ್ದು ಐದೇ ಸಲ. ಆದರೆ ಐದು ಸಲ ಎಂಪಿಯಾಗಿ 80 ಸಲ ವಿದೇಶಕ್ಕೆ ಹೋಗಿದ್ದಾರೆ. ಮೋದಿ ರಾಜಕೀಯ ಮತ್ತು ಆಡಳಿತದ ಕೆಲಸ 24×7 ಮಾಡಿದ್ದಾರೆ. ರಾಜಕೀಯ ಇಂಡಿ ಒಕ್ಕೂಟದವರಿಗೆ ಒಂದು ಹವ್ಯಾಸದಂತೆ. ಅವರ ಮಕ್ಕಳಿಗೆ ಅನುಕೂಲ ಕಲ್ಪಿಸಲು ರಾಜಕೀಯ ಬಳಸುತ್ತಿದ್ದಾರೆ. ಆದರೆ ರಾಜಕೀಯ ನಮಗೆ ದೇವರ ಸಮಾನ. ಅದಕ್ಕಾಗಿಯೇ ಮೋದಿ ಕೈ ಮುಗಿದು ಮೊದಲ ದಿನ ಸದನಕ್ಕೆ ಹೋಗಿದ್ದರು. ಕರ್ನಾಟಕದಲ್ಲಿ ಮೋದಿ ಎಷ್ಟೆಲ್ಲ ಶೌಚಾಲಯ ನಿರ್ಮಿಸಿದ್ದಾರೆ. ಆದರೂ ಕಾಂಗ್ರೆಸ್ ನವರು ಚೊಂಬು ಹಿಡಿದುಕೊಡು ಓಡಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಬಗ್ಗೆ ಅಣ್ಣಾಮಲೈ ತಮಾಷೆ ಮಾಡಿದ್ದಾರೆ.
ಕಾಂಗ್ರೆಸ್ ವ್ಯಾರಂಟಿ ಇಲ್ಲದ ಪಕ್ಷ. ಆದರೆ ಅವರು ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಒಂದಿಲ್ಲೊಬ್ಬರು ಆ ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಇವರ ಪಕ್ಷಕ್ಕೆ ಸರಿಯಾಗಿ ವಾರಂಟಿ ಇಲ್ಲ. ಗ್ಯಾರಂಟಿ ಕೊಡುತ್ತಾರಂತೆ. ನೇಹಾ ಹಿರೇಮಠ ಕೊಲೆ ಅಂತರಾಷ್ಟ್ರೀಯ ನ್ಯೂಸ್ ಆಗಿದೆ. ಘಟನೆ ನೋಡಿ ನಮ್ಮ ಹೃದಯವೇ ನಿಂತಂತೆ ಆಯ್ತು. ಆದರೆ ಗೃಹ ಮಂತ್ರಿ, ಸರ್ಕಾರ ನೇಹಾ ಹಿರೇಮಠದ್ದೇ ತಪ್ಪು ಎನ್ನುವಂತೆ ಮಾತನಾಡಿದ್ದರು. ಬಿಜೆಪಿ ಹೋರಾಟ ಮಾಡಿದ ಬಳಿಕ ಕಾಂಗ್ರೆಸ್ ನೇಹಾ ಹಿರೇಮಠ ಮನೆಗೆ ಬಂದಿತ್ತು ಎಂದು ಅಣ್ಣಾಮಲೈ ಹೇಳಿದ್ದಾರೆ.