ಹೈದರಾಬಾದ್ : ಹೈದರಾಬಾದಿನ (Hyderabad) ಹೊರವಲಯದಲ್ಲಿರುವ ಮುಂಚಿತ್ತಾಲ್ನಲ್ಲಿ 216 ಅಡಿ ಎತ್ತರದ ರಾಮಾನುಜಾಚಾರ್ಯರ (Ramanujacharya Statue) ಬೃಹತ್ ಪಂಚಲೋಹದ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅನಾವರಣಗೊಳಿಸಿದ್ದಾರೆ. ಭಾರತದ ಪುರಾತನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ಕಾರ್ಯ ಕೈಗೊಂಡ ರಾಮಾನುಜಾಚಾರ್ಯರ ಅನುಯಾಯಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಗದ್ಗುರು ಶ್ರೀ ರಾಮಾನುಜಾಚಾರ್ಯರು ವಿಶ್ವಕ್ಕೇ ಜ್ಞಾನ ಪಥ. ಗುರು ಮಾಧ್ಯಮ ಮೂಲಕವೇ ನಮಗೆಲ್ಲಾ ಜ್ಞಾನ ಪ್ರಸರಣ ಆಗುತ್ತದೆ. ಭವ್ಯವಾದ ವಿಶಾಲ ಮೂರ್ತಿಯು ಮಾನವ ಸಂಕುಲಕ್ಕೇ ಪ್ರೇರಣೆ ಎಂದು ಪ್ರತಿಮೆ ಲೋಕಾರ್ಪಣೆಗೊಳಿಸಿದ ಬಳಿಕ ಪ್ರಧಾನಿ ಮೋದಿ ತಿಳಿಸಿದ್ದಾರೆ. ರಾಮಾನುಜಾಚಾರ್ಯರು ತಮ್ಮ ಇಡೀ ಜೀವನವನ್ನು ಕರ್ಮಕ್ಕಾಗಿ ಸಮರ್ಪಿಸಿದರು. ಪ್ರಗತಿಶೀಲತೆ, ಪ್ರಾಚೀನತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ರಾಮಾನುಜರು ದಲಿತರು, ಹಿಂದುಳಿದವರನ್ನು ಆಲಿಂಗನ ಮಾಡಿದರು. ಜಾತಿಯಿಂದಲ್ಲ ಗುಣದಿಂದ ಕಲ್ಯಾಣವಾಗುತ್ತೆ. ರಾಮ ತನ್ನ ಕೈಯಿಂದ ಜಟಾಯು ಅಂತ್ಯಸಂಸ್ಕಾರ ಮಾಡಿದ. ಹೀಗಾಗಿ ಭೇದಭಾವ ಏಕೆ ಎಂದು ಹೇಳಿದರು. ಸಮಾಜದ ಅನಿಷ್ಟಗಳ ವಿರುದ್ಧ ತಮ್ಮ ಪೂರ್ತಿ ಶಕ್ತಿ ವಿನಿಯೋಗಿಸಿ ಹೋರಾಟ ಮಾಡಿದರು ಎಂದು ರಾಮಾನುಜಾಚಾರ್ಯರ ಬಗ್ಗೆ ಮಾತನಾಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ (Dr. B.R Ambedkar) ಕೂಡ ರಾಮಾನುಜರನ್ನು ಪ್ರಶಂಸಿಸುತ್ತಿದ್ದರು. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಪ್ರತಿಪಾದಿಸಿದ್ದರು. ಕನಕದಾಸರು (kanakadasaru) ಕನ್ನಡದಲ್ಲಿ ರಾಮಾನುಜರನ್ನು ಪ್ರಶಂಸಿಸಿದ್ದಾರೆ ಎಂದು ಮೋದಿ ನೆನಪಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟ ಅಧಿಕಾರಕ್ಕಾಗಿ ನಡೆದದ್ದಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾನವತೆ, ಆಧ್ಯಾತ್ಮಿಕತೆ ಇತ್ತು ಎಂದು ಮೋದಿ ಸ್ಮರಿಸಿಕೊಂಡಿದ್ದಾರೆ.