ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಕೂಡಲೇ ಯಡಿಯೂರಪ್ಪ ರಾಜ್ಯದ ಜನತೆಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಪ್ರತಿಜ್ಞಾವಿಧಿ ಸ್ವೀಕಾರ ಬಳಿಕ ಸಂಪುಟ ಸಭೆ ನಡೆಸಿದ ಬಿಎಸ್ವೈ ನೂತನ ಯೋಜನೆಗಳನ್ನು ಘೋಷಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ಮೊದಲಿಗೆ ವಿಜಯ್ ದಿವಸ್ ಅಂಗವಾಗಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ನನಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಿದ ನಾಡಿನ 6ವರೆ ಕೋಟಿ ಜನರಿಗೆ ಅಭಿನಂದನೆಗಳು. ಸಿಎಂ ಸ್ಥಾನ ಸಿಕ್ಕಿರುವುದು ರಾಜ್ಯದ ಜನತೆಗೆ ಸಂದ ಗೌರವ ಎಂದರು. ಇನ್ನು 4-5 ತಿಂಗಳಲ್ಲೇ ನಮ್ಮ ಸರ್ಕಾರಕ್ಕೂ ಹಾಗೂ ಹಿಂದಿನ ಸಮ್ಮಿಶ್ರ ಸರ್ಕಾರಕ್ಕೂ ಇರುವ ವ್ಯತ್ಯಾಸವೇನು ಅನ್ನೋದನ್ನು ಜನರಿಗೆ ತೋರ್ಪಡಿಸೋ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ. ರಾಜ್ಯದಲ್ಲಿ ಕುಸಿದಿರೋ ಆಡಳಿತ ಯಂತ್ರವನ್ನು ಸರಿಪಡಿಸಬೇಕಿದೆ. ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ನಡೆಸೋದಿಲ್ಲ ಅಂತ ಜನತೆಗೂ ಹಾಗೂ ಪ್ರತಿಪಕ್ಷಗಳಿಗೆ ಭರವಸೆ ನೀಡ್ತೇನೆ ಅಂತ ಯಡಿಯೂರಪ್ಪ ನುಡಿದರು.
ಇನ್ನು ನಾಡಿನಲ್ಲಿ ಬರ ತಾಂಡವವಾಡ್ತಿದೆ , ರೈತರ ಸಮಸ್ಯೆ ಪರಿಹರಿಸೋ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುತ್ತೇವೆ. ಇದೀಗ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಎರಡು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕುರಿತಾಗಿ 2 ಕಂತಿನಲ್ಲಿ 4 ಸಾವಿರ ರೂಪಾಯಿ ಯೋಜನೆಯ ಫಲಾನುಭವಿಗಳಿಗೆ ನೀಡಲು ತೀರ್ಮಾನ ಮಾಡಲಾಗಿದೆ ಅಂತ ಘೋಷಣೆ ಮಾಡಿದ ನೂತನ ಸಿಎಂ ಯಡಿಯೂರಪ್ಪ, ನಾನು ರೈತನ ಮಗನಾಗಿ ರಾಜ್ಯ ಸರ್ಕಾರದ ವತಿಯಿಂದ ರೈತರ ಪರ ಕೆಲಸ ಮಾಡೋದು ನನ್ನ ಕರ್ತವ್ಯ ಎಂದರು.
ಇನ್ನು 100 ಕೋಟಿ ನೇಕಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದ್ದು ನಾಡಿನ ಎರಡು ಕಣ್ಣುಗಳಾದ ರೈತರು ಹಾಗೂ ನೇಕಾರರಿಗೆ ಇದು ಉಪಯುಕ್ತವಾಗಲಿದೆ ಎಂದರು. ವಿಧಾನಸಭೆಯಲ್ಲಿ ಸೋಮವಾರ ಬಹುಮತ ಸಾಬೀತುಪಡಿಸಲಿದ್ದು ಅಂದೇ ಹಣಕಾಸು ವಿಧೇಯಕ ಅಂಗೀಕಾರಿಸುತ್ತೇವೆ ಅಂತ ನೂತನ ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದ್ರು.