Friday, April 25, 2025

Latest Posts

News: ಶಾಕಿಂಗ್ ವಿಚಾರ : ಕಪಲ್ಸ್‌ ಡೈವೋರ್ಸ್‌ಗೆ ಇದೇ ಕಾರಣ..!

- Advertisement -

News: ವಿವಾಹದ ಬಳಿಕ ದಂಪತಿಗಳ ನಡುವೆ ವೈ ಮನಸ್ಸು, ಜಗಳ ಇವು ಸಾಮಾನ್ಯವಾಗಿರುತ್ತವೆ. ಆದರೆ ಇದರಲ್ಲಿಯೇ ಅತಿಯಾದ ವ್ಯಾಮೋಹ, ನಿರೀಕ್ಷೆ ಹಾಗೂ ಅನುಮಾನ ಹೀಗೆ ಮಾನಸಿಕ ಆರೋಗ್ಯಕ್ಕೆ ಮಾರಕವಾಗುವ ಸಂಗತಿಗಳೇ ಬಹುತೇಕ ದಾಂಂಪತ್ಯಗಳಿಗೆ ಇತಿಶ್ರೀ ಹಾಡುತ್ತಿವೆ‌. ಅಲ್ಲದೆ ಈ ಡೈವೋರ್ಸ್‌ಗಳ ಬಗ್ಗೆ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಇದೀಗ ಹೊರಬಿದ್ದಿದ್ದು, ಇದು ಈಗ ದಂಪತಿಗಳ ಮಾನಸಿಕ ಆರೋಗ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ.

ಇನ್ನೂ ಪ್ರಮುಖವಾಗಿ ಡೈವೋರ್ಸ್‌ಗೂ ಮುನ್ನ ಗಂಡ ಹಾಗೂ ಹೆಂಡತಿ ನಡುವಿನ ಕಲಹಕ್ಕೆ ಕಾರಣಗಳನ್ನು ನೋಡಿದಾಗ, ಒಬ್ಬರನೊಬ್ಬರು ನಿಯಂತ್ರಿಸಲು ಯತ್ನಿಸುವುದು, ಲಿಂಗಾಧಾರಿತ ಕಾರ್ಯಗಳ ನಿರ್ವಹಣೆಯ ಮನಸ್ಥಿತಿ ಹೀಗೆ ಹಲವು ಕಾರಣಗಳಿಗಾಗಿ ದೇಶದಲ್ಲಿ ಡೈವೋರ್ಸ್‌ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದರಿಂದ ಮದುವೆಯಾಗುವ ಯವಕ ಹಾಗೂ ಯುವತಿಯರ ಮಾನಸಿಕ ಸ್ಥಿತಿಯ ಬಗ್ಗೆ ಆತಂಕ ಎದುರಾಗಿದೆ. ಅಲ್ಲದೆ ಕರ್ನಾಟಕ ರಾಜ್ಯದಲ್ಲೂ ಸಹ ಈ ವಿಚ್ಚೇದನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕಳೆದ 5 ವರ್ಷಗಳಲ್ಲಿ ಒಟ್ಟು 1,95,216 ಪ್ರಕರಣಗಳು ದಾಖಲಾಗಿವೆ. ಈ ಅಂಕಿ ಅಂಶ ನಿಜಕ್ಕೂ ಎಲ್ಲರನ್ನೂ ಚಿಂತಾಕ್ರಾಂತರನ್ನಾಗಿಸಿದೆ.

5 ವವರ್ಷಗಳಲ್ಲಿ ಹೊರಬಿತ್ತು ಶಾಕಿಂಗ್‌ ಅಂಕಿ-ಅಂಶ..!

ಅಲ್ಲದೆ 2025ರ ಜನವರಿಯಿಂದ ಮಾರ್ಚ್‌ವರೆಗೆ 5,576 ವಿಚ್ಚೇದನ ಪ್ರಕರಣಗಳು ದಾಖಲಾಗಿವೆ. ಅಂದಹಾಗೆ ಕಳೆದ 2020ರಲ್ಲಿ 20,454, 2021ರಲ್ಲಿ 24,141, 2022ರಲ್ಲಿ 66,863, 2023ರಲ್ಲಿ 41,230 ಹಾಗೂ 2024ರಲ್ಲಿ 36,952 ವಿಚ್ಚೇದನದ ಪ್ರಕರಣಗಳು ದಾಖಲಾಗಿವೆ. ಈ ಐದು ವರ್ಷಗಳ ಅವಧಿಯನ್ನು ಗಮನಿಸಿದಾಗ ಕರ್ನಾಟಕದಲ್ಲಿ ವಿಚ್ಚೇದನ ಪ್ರಮಾಣ ಏರಿಕೆಯಾಗಿದ್ದು ಕಂಡು ಬರುತ್ತಿದೆ. ಪ್ರಮುಖವಾಗಿ ಕಳೆದ 2022ರಲ್ಲಿ ಹೆಚ್ಚು ಡೈವೋರ್ಸ್‌ ಕೇಸ್‌ಗಳು ದಾಖಲಾಗಿ, ಇದರಿಂದ ರಾಜ್ಯದಲ್ಲಿ ವಿಚ್ಚೇದನದ ದರವು ಶೇಕಡಾ 176,96ರಷ್ಟಕ್ಕೆ ಏರಿಕೆಯಾಗಿತ್ತು. ಇನ್ನೂ 2021ರಲ್ಲಿಯೂ ಸಹ ಡೈವೋರ್ಸ್‌ ರೇಟ್‌ ಹೆಚ್ಚಳವಾಗಿತ್ತು. ಆದರೆ 2023 ಹಾಗೂ 2024ರಲ್ಲಿ ಭಾಗಶಃ ಪುನರಾವರ್ತನೆಯಾಗಿದೆ.

ಡೈವೋರ್ಸ್‌ಗಳಿಗೆ ಕಾರಣಗಳೇನು..?

ಇನ್ನೂ ಪ್ರಮುಖವಾಗಿ ವಿವಾಹ ದಾಂಪತ್ಯಗಳಲ್ಲಿ ಈ ಡೈವೋರ್ಸ್‌ಗಳು ಆಗಲು ಕಾರಣವೇನು ಎನ್ನುವುದನ್ನು ಗಮನಿಸಿದಾಗ ಹಲವು ಆತಂಕಕಾರಿ ಸಂಗತಿಗಳು ಬಯಲಾಗಿವೆ. ಅಂದಹಾಗೆ ಇಂದಿನ ದಿನಗಳಲ್ಲಿ ಮದುವೆಯು ಕೇವಲ ಸಮಾರಂಭವಾಗಿ ಬದಲಾಗುತ್ತಿದೆ. ಇದರಲ್ಲಿ ಯಾವುದೇ ಬದ್ಧತೆ ಕಂಡುಬರದಿರುವುದು ಕೂಡ ಒಂದು ಕಾರಣವಾಗಿದೆ. ಅಲ್ಲದೆ ಚಿಕ್ಕ ಚಿಕ್ಕ ನಿರಾಸೆಗಳನ್ನು ಸ್ವೀಕರಿಸದೆ ಇರುವುದು, ವಿವಾಹದಲ್ಲಿ ಹೆಚ್ಚಾದ ಅಪಾರದರ್ಶಕತೆ, ಗಂಡ ಹೆಂಡತಿಯರ ನಡುವಿನ ದೈಹಿಕ ಸಂಪರ್ಕದ ಬಗ್ಗೆ ಅರಿವು ಹಾಗೂ ಪರಸ್ಪರ ಗೌರವದ ಕೊರತೆಯು ಕಾರಣವಾಗಿದೆ. ಇಷ್ಟೇ ಅಲ್ಲದೆ ಅನೈತಿಕ ಸಂಬಂಧ, ದುಷ್ಚಟಗಳು ಹಾಗೂ ಮಾನಸಿಕ ಹಿಂಸೆಯು ವಿಚ್ಚೇದನದ ಅತಿದೊಡ್ಡ ಸಮಸ್ಯೆಗಳಾಗಿವೆ. ಅಲ್ಲದೆ ವಿವಾಹದಲ್ಲಿ ಮಾನಸಿಕ ಉಗ್ರತೆ ಹೆಚ್ಚಾಗುತ್ತಿರುವುದರಿಂದ ದಂಪತಿಗಳ ನಡುವಿನ ಬದ ಬಳಕೆ ಹಾಗೂ ಅವರ ಯೋಚನೆಗಳ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ ಎನ್ನುವುದು ತಜ್ಞರ ಕಳವಳವಾಗಿದೆ.

ಡೈವೋರ್ಸ್‌ ತಗ್ಗಿಸಲು ಹೈಕೋರ್ಟ್‌ ಪ್ರಯತ್ನ‌..

ಅಲ್ಲದೆ ರಾಜ್ಯದಲ್ಲಿನ ವಿಚ್ಚೇದನಕ್ಕೆ ಸಂಬಂಧಿಸಿದ ಈ ಅಂಕಿ- ಅಂಶಗಳು ಕೇವಲ ನ್ಯಾಯಾಲಯಗಳಲ್ಲಿ ದಾಖಲಾಗಿರುವ ದೂರುಗಳನ್ನು ಆಧರಿಸಿದೆ. ಆದರೆ ನ್ಯಾಯಾಲಯದ ಮೊರೆ ಹೋಗದೆ ಮಾನಸಿಕವಾಗಿ ವಿಚ್ಚೇದನ ಪಡೆದುಕೊಂಡು ಅದೆಷ್ಟೋ ಜನ ಬದುಕುತ್ತಿದ್ದಾರೆ ಎಂಬ ಅಭಿಪ್ರಾಯ ಕೌಟುಂಬಿಕ ಆಪ್ತ ಸಮಾಲೋಚಕರದ್ದಾಗಿದೆ.

ಇನ್ನೂ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಈ ವಿಚ್ಚೇದನ ಪ್ರಕರಣಗಳು ಹಾಗೂ ಅದರ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಹಿರಿಯರು ಮಾಡುತ್ತಿರುತ್ತಾರೆ. ಗಂಡ ಹಾಗೂ ಹೆಂಡತಿ ಇಬ್ಬರು ಹಾಗೂ ಅವರ ಕುಟುಂಬಸ್ಥರೊಂದಿಗೆ ಪರಸ್ಪರ ಸಂಧಾನಕ್ಕೆ ಇವರು ಪ್ರಯತ್ನಿಸುತ್ತಾರೆ. ಅಲ್ಲದೆ ಸರ್ಕಾರವು ಸಹ ಈ ಪ್ರಕರಣಗಳಿಗಾಗಿಯೇ ಮಧ್ಯಸ್ಥಿಕೆ ಕೇಂದ್ರಗಳನ್ನು ತೆರೆದು ಅವುಗಳ ಮೂಲಕ ಕುಟುಂಬದ ಹಕ್ಕುಗಳ ರಕ್ಷಣೆ ಮಾಡಲು ಹಲವು ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಈ ಮೂಲಕ ದಂಪತಿಗಳ ನಡುವಿನ ಕಲಹ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯ ಕಾರ್ಯ ನಡೆಯುತ್ತಿದೆ. ಅಲ್ಲದೆ ಕೌಟುಂಬಿಕ ಆಸ್ತಿಯ ವ್ಯಾಜ್ಯಗಳ ವಿವಾದ ಇತ್ಯರ್ಥಕ್ಕಾಗಿ ರಾಜ್ಯ ಹೈಕೋರ್ಟ್‌ ನಿಪುಣ ಹಾಗೂ ಪ್ರಬುದ್ಧ ಮಧ್ಯಸ್ಥಿಕೆದಾರರ ಮೂಲಕ ವಿಚ್ಚೇದನ ಪ್ರಕರಣಗಳನ್ನು ತಗ್ಗಿಸಲು ಪ್ರಯತ್ನ ಮುಂದುವರೆಸಿದೆ.

ಲಾಕ್‌ಡೌನ್‌ ಎಫೆಕ್ಟ್..!

ಮುಖ್ಯವಾಗಿ ಕಳೆದ 2022 ಕೊರೋನಾ ಸಮಯ, ಲಾಕ್‌ ಡೌನ್‌ ಆಗಿದ್ದರಿಂದ ಗಂಡ ಹಾಗೂ ಹೆಂಡತಿ ಹೆಚ್ಚಾಗಿ ಮನೆಯಲ್ಲಿ ಇರುವ ಸನ್ನಿವೇಶ ನಿರ್ಮಾಣವಾಗಿತ್ತು. ಈ ವೇಳೆ ಅತಿಯಾದ ಆನ್ಲೈನ್ ಬಳಕೆಯಿಂದ ಪರಸ್ಪರ ಸಣ್ಣ ಪುಟ್ಟ ಗೊಂದಲಗಳು ಹಾಗೂ ಅನುಮಾನಗಳು ಅಧಿಕವಾಗಿದ್ದವು. ಇದಲ್ಲದೆ ಹಲವು ಸಾಮಾಜಿಕ ಹಾಗೂ ಮಾನಸಿಕ ಪರಿವರ್ತನೆಗಳು, ಆರ್ಥಿಕ ಅಸ್ಥಿರತೆ ಹಾಗೂ ವೈಯಕ್ತಿಕ ಸಂಬಂಧಗಳಲ್ಲಾದ ಬದಲಾವಣೆಗಳು ವಿಚ್ಚೇದನ ಏರಿಕೆಗೆ ಪೂರಕವಾಗಿದ್ದವು. ಅಲ್ಲದೆ ಪರಸ್ಪರ ರಹಸ್ಯ ಸಂಗತಿಗಳು, ಗೌಪ್ಯ ವಿಚಾರಗಳು ಗೊತ್ತಾಗುವಂತೆ ಆಗಿದ್ದರಿಂದಲೂ ಡೈವೋರ್ಸ್‌ ಆಗಿವೆ ಎನ್ನಲಾಗುತ್ತಿದೆ.

ಒಟ್ನಲ್ಲಿ..ಈ ವಿಚ್ಚೇದನ ಪ್ರಕರಣಗಳಲ್ಲಿ ಯೋಜಿತ ವಿವಾಹಗಳು ಹಾಗೂ ಪ್ರೇಮ ವಿವಾಹಗಳೂ ಇವೆ. ಆದರೆ ಗಂಡ ಹೆಂಡತಿ ತಾವು ಮದುವೆಯಾಗಿರುವ ಜೀವನದ ಉದ್ದೇಶ ಹಾಗೂ ಬದ್ಧತೆಗಳನ್ನು ಮರೆಯುತ್ತಿರುವುದು ಕೂಡಾ‌ ಇದಕ್ಕೆ ಕಾರಣವಾಗಿರುವುದು ಕಳವಳಕಾರಿಯಾಗಿದೆ. ಈ ಇಬ್ಬರು ಸಣ್ಣ ಪುಟ್ಟ ವಿಚಾರಕ್ಕೆ ಅಸಹನೆ, ಕಲಹಗಳನ್ನು ಸೃಷ್ಟಿಸಿ ತಮ್ಮ ಬದುಕಿಗೆ ತಾವೇ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ, ಆದರೆ ಈಗ ಪರಿಸ್ಥಿತಿ ಬದಲಾಗಿ ಗಂಡ ಹೆಂಡಿರ ಜಗಳ ಕೋರ್ಟ್‌ ಮೆಟ್ಟಿಲಿನ ತನಕ ಎನ್ನುವಂತಾಗಿದೆ. ಎಷ್ಟೇ ಆದರೂ ದಂಪತಿಗಳು ಪರಸ್ಪರ ಅರ್ಥಮಾಡಿಕೊಳ್ಳುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು, ಜೊತೆಗೆ ಪ್ರತಿಯೊಂದು ವಿಚಾರಕ್ಕೂ ಸಹ ತಕ್ಷಣ ಪ್ರತಿಕ್ರಿಯೆ ನೀಡದೆ ಅದರ ಬಗ್ಗೆ ಯೋಚಿಸಿ ನಂತರ ಪ್ರತಿಕ್ರಿಯಿಸಬೇಕು. ಹೀಗಾದಾಗ ವಾದ ವಿವಾದಗಳು ಕಡಿಮೆಯಾಗುತ್ತವೆ, ಸಂಸಾರದಲ್ಲಿ ನೆಮ್ಮದಿ ಬರುತ್ತದೆ ಹಾಗೂ ದಾಂಪತ್ಯದಲ್ಲಿ ವಿಶ್ವಾಸ, ನಂಬಿಕೆ ಬೆಳೆಯುತ್ತದೆ. ಅದೇನೆ ಇರಲಿ.. ಸಮಾಜದಲ್ಲಿ ನಡೆಯುತ್ತಿರುವ ಕೊಲೆ, ಅತ್ಯಾಚಾರ ಹಾಗೂ ದರೋಡೆಯಂತಹ ಕೃತ್ಯಗಳನ್ನು ಗಮನಿಸಿದಾಗ, ನಾವು ಸಾಮಾನ್ಯವಾಗಿ ಹೇಳುತ್ತೇವೆ ಕಾಲ ಕೆಟ್ಟು ಹೋಯಿತಲ್ಲ ಅಂತ, ಆದರೆ ನಾವು ನಿಜವಾಗಿಯೂ ಅರಿಯಬೇಕಿರುವುದು ಕೆಟ್ಟಿರುವುದು ಕಾಲವಲ್ಲ ನಮ್ಮಗಳ ಮನಸ್ಥಿತಿಗಳು. ಹಾಗೆಯೇ ಈ ದಂಪತಿಗಳ ವಿಚಾರದಲ್ಲೂ ಸಹ ಅಷ್ಟೇ ಕೆಟ್ಟಿರುವುದು ಕಾಲವಲ್ಲ ಇಬ್ಬರ ಯೋಚನೆಗಳೇ ಅನ್ನೋದು ಸುಳ್ಳಲ್ಲ…

- Advertisement -

Latest Posts

Don't Miss