ಶಿಕ್ಷಣ ಸಚಿವರಾಗಲು ಶಿಕ್ಷಣ ಕ್ಷೇತ್ರದ ಅನುಭವ ಬೇಕಿಲ್ಲ: ಅತ್ಯಾಚಾರಿಗಳ ಬಿಡುಗಡೆ ಸಮರ್ಥಿಸಿದರೇ ಸಾಕೇ?!: ಜೋಶಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

Political News: ಬಿಜೆಪಿಯ ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 

ಈ ಹಿಂದೆ ಜೋಶಿ ನೀಡಿದ್ದ ಹೇಳಿಕೆಯನ್ನು ವಿರೋಧಿಸಿರುವ ಹರಿಪ್ರಸಾದ್, ಇಂಥ ಹೇಳಿಕೆ ನೀಡುವವರನ್ನು ನೀವು ಕೇಂದ್ರ ಶಿಕ್ಷಣ ಮಂತ್ರಿ ಮಾಡಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿರುವ ಅವರು,  ಬಿಜೆಪಿಯಲ್ಲಿ ಶಿಕ್ಷಣ ಸಚಿವರಾಗಲು ಶಿಕ್ಷಣ ಕ್ಷೇತ್ರದ ಅನುಭವ ಬೇಕಿಲ್ಲ; ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸುವ ‘ಸಂಸ್ಕಾರ’ ಇದ್ದರೆ ಸಾಕೇ?! ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳ ಬಿಡುಗಡೆಯನ್ನು ನಾಚಿಕೆಯಿಲ್ಲದೆ ಸಮರ್ಥಿಸಿದ್ದ ಪ್ರಹ್ಲಾದ್ ಜೋಶಿ ಇಂದು ದೇಶದ ಶಿಕ್ಷಣ ಖಾತೆಯ ಹೊಣೆ ನೀಡಿರುವುದು ಈ ದೇಶದ ದುರಂತವೇ ಸರಿ ಎಂದಿದ್ದಾರೆ.

ಅಲ್ಲದೇ, ಅತ್ಯಾಚಾರಿಗಳಿಗೆ ಹಾರ ಹಾಕಿ ಸ್ವಾಗತಿಸುವುದು ಬಿಜೆಪಿ ಕಾರ್ಯಕರ್ತರ ಸಂಸ್ಕೃತಿಯಾದರೇ; ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸುವುದು ಜೋಶಿಯ ರಾಜಕೀಯ ಸಂಸ್ಕೃತಿ; ಸಮರ್ಥಿಸುವವರನ್ನೇ ಸಚಿವ ಸ್ಥಾನ ನೀಡುವುದು ನರೇಂದ್ರ ಮೋದಿ ಸರ್ಕಾರದ ನೈತಿಕ ಸಂಸ್ಕೃತಿ!. ಇದು ಶಿಕ್ಷಣ ಸಚಿವಾಲಯವೋ ಅಥವಾ ಅತ್ಯಾಚಾರಿಗಳ ಸಮರ್ಥಕರ ರಾಜಕೀಯ ಪುನರ್ವಸತಿ ಕೇಂದ್ರವೋ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

“ಬೇಟಿ ಬಚಾವೋ” ಎಂದು ವೇದಿಕೆಗಳಲ್ಲಿ ಘೋಷಿಸುವ ಬಿಜೆಪಿ, ಅಧಿಕಾರದಲ್ಲಿ ಮಾತ್ರ “ಅತ್ಯಾಚಾರಿ ಬಚಾವೋ – ಸಮರ್ಥಕನಿಗೆ ಮಂತ್ರಿಪದವಿ ಕೊಡೊ” ನೀತಿ ಅನುಸರಿಸುತ್ತಿದೆ. ಮಹಿಳೆಯರಿಗೆ ನ್ಯಾಯ ಕೊಡಲಾಗದವರು, ವಿದ್ಯಾರ್ಥಿಗಳ ನೋವನ್ನು ಕೇಳಲಾಗದವರು ದೇಶದ ಶಿಕ್ಷಣ ಸಚಿವರಾಗಿ ನೇಮಕವಾಗುವುದು ಈ ದೇಶದ ದುರಂತ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ, ನಿಮ್ಮ ಸಚಿವ ಸಂಪುಟದ ಅರ್ಹತಾ ಪರೀಕ್ಷೆಯ ಪ್ರಶ್ನೆಗಳು ಹೀಗಿವೆಯೇ? ಮಹಿಳೆಯರ ಕಣ್ಣೀರನ್ನು ನಿರ್ಲಕ್ಷಿಸಿದ್ದೀರಾ? ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸುವುದನ್ನು ಮೌನವಾಗಿ ನೋಡಿದ್ದೀರಾ? ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದನ್ನು ಮೌನವಾಗಿ ಸಮ್ಮಿತಿಸಿದ್ದೀರಾ? ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿದ್ದೀರಾ? ಹಾಗಾದರೆ ನೀವು ಶಿಕ್ಷಣ ಸಚಿವರಾಗಲು ಸಂಪೂರ್ಣ ಅರ್ಹರು!.. ಎಂದು ಪ್ರಧಾನಿ ಮೋದಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ ಜೋಶಿಯ ಸಹೋದರನ ವಿರುದ್ಧ ದೈಹಿಕ ಶೋಷಣೆಯ ಗಂಭೀರ ಆರೋಪ ಮಾಡಿರುವ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದಾರೆ. ಆರೋಪದ ಸತ್ಯಾಸತ್ಯತೆ ನಿಷ್ಪಕ್ಷಪಾತ ತನಿಖೆಯಿಂದ ಹೊರಬರಲಿ. ಆದರೆ ಮಹಿಳೆಯೊಬ್ಬರ ನ್ಯಾಯದ ಕೂಗಿಗೂ ಸ್ಪಂದಿಸದ ಜೋಶಿ,ಈ ದೇಶದ ವಿದ್ಯಾರ್ಥಿಗಳಿಗೆ ಯಾವ ನೈತಿಕತೆಯ ಪಾಠ ಹೇಳುತ್ತಾರೆ?

ಮಹಿಳೆ ಬೀದಿಯಲ್ಲಿ ನ್ಯಾಯಕ್ಕಾಗಿ ಕುಳಿತಿದ್ದಾಳೆ; ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಬೀದಿಗಿಳಿದಿದ್ದಾರೆ; ಜೋಶಿಯವರು ಮಾತ್ರ ದೆಹಲಿಯ ಅಧಿಕಾರದ ಕುರ್ಚಿಯಲ್ಲಿ ಕುಳಿತು ಶಿಕ್ಷಣದ ಪಾಠ ಹೇಳುತ್ತಿದ್ದಾರೆ! ಮೋದಿ ಆಡಳಿತದ ನೈತಿಕ ದಿವಾಳಿತನಕ್ಕೆ ಇದಕ್ಕಿಂತ ಸ್ಪಷ್ಟ ಚಿತ್ರಣ ಇನ್ನೇನು ಬೇಕು? ಎಂದು ಹರಿಪ್ರಸಾದ್ ಮೋದಿ ಆಡಳಿತವನ್ನು ಪ್ರಶ್ನಿಸಿದ್ದಾರೆ.

ಶಿಕ್ಷಣ ಸಚಿವರನ್ನು ಆಯ್ಕೆ ಮಾಡುವ ಮೊದಲು ವಿರೋಧ ಪಕ್ಷದ ಸಲಹೆ ಕೇಳಬೇಕೆಂಬ ನಿರೀಕ್ಷೆಯಂತೂ ನಮಗಿಲ್ಲ. ಕನಿಷ್ಠ ತಮ್ಮದೇ ಸಚಿವ ಸಂಪುಟದ ಸಹೋದ್ಯೋಗಿ ಹೆಚ್.ಡಿ.ಕುಮಾರಸ್ವಾಮಿಯವರ ಮಾತನ್ನಾದರೂ ಮೋದಿ ಕೇಳಬಹುದಿತ್ತು. ಜೋಶಿಯ “ಸಂಸ್ಕೃತಿ” ಕುರಿತು ಅವರು ಈಗಾಗಲೇ ಅದ್ಭುತವಾದ ಅರ್ಹತಾ ಪ್ರಮಾಣಪತ್ರವೇ ನೀಡಿದ್ದಾರೆ!

“ಮಹಾತ್ಮ ಗಾಂಧಿಯನ್ನು ಕೊಂದ ವರ್ಗಕ್ಕೆ ಸೇರಿದವರು”, “ಶೃಂಗೇರಿ ಮಠದ ಮೇಲೆ ದಾಳಿ ನಡೆಸಿದ ಪೇಶ್ವೆಗಳ ವಂಶಸ್ಥರು”, “ಜೋಶಿಗೆ ಸಂಸ್ಕೃತಿಯೇ ಇಲ್ಲ—ಅದು ಬೇಕಾಗಿಯೂ ಇಲ್ಲ”, “ಕುತಂತ್ರ ರಾಜಕೀಯ ಮಾಡುವ ಪಾರ್ಥೇನಿಯಂ” ಎಂದು ಜೋಶಿಯವರ ಗುಣಗಾನ ಮಾಡಿದ್ದವರು ಇದೇ ಕುಮಾರಸ್ವಾಮಿ. ಇಂತಹ ಮಹೋನ್ನತ ‘ಪ್ರಶಂಸಾಪತ್ರ’ ಪಡೆದ ವ್ಯಕ್ತಿಗೇ ದೇಶದ ಶಿಕ್ಷಣ ಖಾತೆ ನೀಡಿರುವುದು ಮೋದಿ ಸರ್ಕಾರದ ಆಯ್ಕೆ ಪ್ರಕ್ರಿಯೆ ಎಷ್ಟು ಸಂಸ್ಕಾರಯುತವಾಗಿದೆ ಎಂಬುದಕ್ಕೆ ಸಾಕ್ಷಿ! ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

About The Author