Political News: ಕಲಬುರಗಿ- ಯಾದಗಿರಿ ರಸ್ತೆಯಲ್ಲಿ ಬಸ್ ನಿಲ್ದಾಣವಿಲ್ಲದೇ, ಜನ ಪರದಾಡುತ್ತಿದ್ದಾರೆಂಬ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ವಿರೋಧ ಪಕ್ಷದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಕಲಬುರಗಿ-ಯಾದಗಿರಿ ರಸ್ತೆಯ 90 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದೇ ಒಂದು ಬಸ್ ನಿಲ್ದಾಣವಿಲ್ಲದೆ ಜನಸಾಮಾನ್ಯರು ರಣ ಬಿಸಿಲಲ್ಲಿ ಸುಡುತ್ತಿದ್ದಾರೆ ಎನ್ನುವ ಸುದ್ದಿ ನಿಜಕ್ಕೂ ಆಘಾತ ಮೂಡಿಸಿದೆ. ಇದೇನು ಸಾಮಾನ್ಯ ಕೊರತೆಯೋ ಅಥವಾ ವೈಫಲ್ಯವೋ ಅಲ್ಲ. ದಶಕಗಳಿಂದ ಕಲ್ಯಾಣ ಕರ್ನಾಟಕವನ್ನ ಸ್ವಂತ “ಜಹಗೀರು” ಅಂದುಕೊಂಡಿರುವ ನಿಮ್ಮ ಕುಟುಂಬ ಈ ಭಾಗದ ಜನರಿಗೆ ಮಾಡಿದ ಘೋರ ಅನ್ಯಾಯ ಎಂದು ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಡುವ 45 ಡಿಗ್ರಿ ಬಿಸಿಲಿನಲ್ಲಿ ಮಕ್ಕಳು, ಗರ್ಭಿಣಿಯರು, ವಯೋವೃದ್ಧರು ನೆರಳಿಲ್ಲದೆ ರಸ್ತೆ ಬದಿಯಲ್ಲಿ ನರಳುತ್ತಿದ್ದಾರೆ. ಕುಡಿಯಲು ಹನಿ ನೀರಿಲ್ಲ, ಶೌಚಾಲಯದ ವ್ಯವಸ್ಥೆಯಿಲ್ಲ. ಇದೇನಾ ನಿಮ್ಮ ಕಾರ್ಯವೈಖರಿ? ದಿನಾ ಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿ ಉಪದೇಶ ಮಾಡುವ ತಮಗೆ ನಿಮ್ಮ ಸ್ವಂತ ಜಿಲ್ಲೆಯ ಜನರ ಈ ನರಕಯಾತನೆ ಕಣ್ಣಿಗೆ ಕಾಣಿಸುತ್ತಿಲ್ಲವೇ ಸ್ವಾಮಿ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
“ಮತ ನಿಮ್ಮದು, ಮಜ ನಮ್ಮದು” ಎನ್ನುವ ಎನ್ನುವಂತಾಗಿದೆ ನಿಮ್ಮ ಧೋರಣೆ. ಈ ಭಾಗದ ಜನ ನಿಮ್ಮನ್ನ ನಂಬಿ ವೋಟ್ ಹಾಕಿದ್ದು ಅವರು ರಸ್ತೆ ಬದಿಯಲ್ಲಿ ನಿಲ್ಲಲಿ ಅಂತಲ್ಲ, ನೀವು ಬೆಂಗಳೂರು-ದೆಹಲಿಯಲ್ಲಿ ರಾಜಾತಿಥ್ಯ ಅನುಭವಿಸಲಿ ಅಂತಲೂ ಅಲ್ಲ. ದಶಕಗಳಿಂದ ನೀವು ಮಾಡಿದ್ದು “ಜನ ಕಲ್ಯಾಣ”ವಲ್ಲ, ಬರೀ “ಖರ್ಗೆ ಕುಟುಂಬ ಕಲ್ಯಾಣ”. ಜನರ ಹೆಸರಲ್ಲಿ ಅಧಿಕಾರ ಅನುಭವಿಸಿ, ಅದೇ ಜನರಿಗೆ ಒಂದು ಬಸ್ ತಂಗುದಾಣ ಕೊಡಲಾಗದ ನೀವು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತೀರಿ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ನಿಮ್ಮ ಪ್ರಚಾರದ ಗೀಳು, ಗಿಮಿಕ್ಗಳು ಇನ್ನು ನಡೆಯಲ್ಲ. ತಕ್ಷಣ ಈ ಮಾರ್ಗದಲ್ಲಿ ಬಸ್ ನಿಲ್ದಾಣ ಮತ್ತು ಮೂಲಸೌಕರ್ಯ ಕಲ್ಪಿಸದಿದ್ದರೆ, ಕಲ್ಯಾಣ ಕರ್ನಾಟಕದ ಜನರೇ ನಿಮ್ಮನ್ನ ಅಧಿಕಾರದಿಂದ ಕೆಳಗಿಳಿಸಿ ಮನೆಗೆ ಕಳುಹಿಸುವುದು ಗ್ಯಾರಂಟಿ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.




