Sports News: ಸತತ 18 ವರ್ಷಗಳ ಹೋರಾಟದ ಬಳಿಕ ಅಂತಿಮವಾಗಿ ಐಪಿಎಲ್ ಕ್ರಿಕೆಟ್ ಆಟದಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ತಂಡದ ವಿರುದ್ಧ ಸೆಣಸಾಡಲಿದೆ.ಇದಕ್ಕಾಗಿಯೇ ಆರ್ಸಿಬಿಯ ಅಭಿಮಾನಿಗಳು ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸಿದ್ದಾರೆ. ಅಲ್ಲದೆ ಆರ್‌ಸಿಬಿ ಗೆಲುವಿಗಾಗಿ ರಾಜ್ಯದ ನಾಯಕರೂ ಸಹ ಶುಭಹಾರೈಸಿದ್ದಾರೆ. ಅಲ್ಲದೆ ಇದೀಗ ಆರ್ಸಿಬಿಗೆ ಬ್ರಿಟನ್ ಮಾಜಿ ಪ್ರಧಾನಿ ಕೂಡ ಕೊಹ್ಲಿ ಬಾಯ್ಸ್ಗೆ ತಮ್ಮ ಬೆಂಬಲ ಘೋಷಿಸಿ ಬೆಸ್ಟ್ ವಿಶ್ ಮಾಡಿದ್ದಾರೆ.
ಆರ್‌ಸಿಬಿಯೊಂದಿಗಿನ ನನ್ನ ಬಾಂಧವ್ಯ ಕುಟುಂಬದ ಮೂಲಕ ಶುರುವಾಯಿತು..!
ಇನ್ನೂ ಬ್ರಿಟನ್ ಮಾಜಿ ಪ್ರಧಾನಿ ಹಾಗೂ ಕರ್ನಾಟಕದ ಅಳಿಯ ರಿಷಿ ಸುನಕ್ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಐಪಿಎಲ್ ಫೈನಲ್‌ಗೆ ಆರ್‌ಸಿಬಿ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿಯೊಂದಿಗಿನ ನನ್ನ ಬಾಂಧವ್ಯ ಕುಟುಂಬದ ಮೂಲಕ ಶುರುವಾಯಿತು ಎಂದು ಹೇಳಿಕೊಂಡಿದ್ದರು. ನಾನು ಬೆಂಗಳೂರಿನ ಕುಟುಂಬದಾಕೆಯನ್ನು ಮದುವೆಯಾಗಿದ್ದೇನೆ. ಆದ್ದರಿಂದ ಆರ್‌ಸಿಬಿ ನನ್ನ ತಂಡ ಎಂದು ಭಾರತ ಭೇಟಿಯ ಸಂದರ್ಭದಲ್ಲಿ ಸುನಕ್ ಹೇಳಿದ್ದರು.
ಸುನಕ್ ಅವರು ತಮ್ಮ ಅತ್ತೆ-ಮಾವ ಅವರಿಂದ ಮದುವೆಯ ಉಡುಗೊರೆಯಾಗಿ ಆರ್‌ಸಿಬಿ ಜೆರ್ಸಿಯನ್ನು ಪಡೆದಿದ್ದರು. ಅಂದಿನಿಂದ ತಂಡವನ್ನು ಅನುಸರಿಸುತ್ತಿದ್ದಾರೆ. ನಾವು ಬಹಳ ಹಿಂದೆಯೇ ಪಂದ್ಯಗಳಿಗೆ ಹೋಗುತ್ತಿದ್ದೆವು. ನಾನು ಕಚೇರಿಯಲ್ಲಿದ್ದಾಗಲೂ ಸಹ, ಮ್ಯಾಚ್ ವೇಳೆ ಆರ್‌ಸಿಬಿ ತಂಡವನ್ನು ಹುರಿದುಂಬಿಸುತ್ತಿದ್ದೆ ಎಂದು ಸ್ಮರಿಸಿದ್ದರು.
ಕೊಹ್ಲಿ ಅವರೊಬ್ಬ ಲೆಜೆಂಡ್ ಎಂದಿದ್ದ ರಿಷಿ ಸುನಕ್..
ಸತತ 18 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿ ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಜಯಿಸಲು ಎದುರು ನೋಡುತ್ತಿರುವ ಸಂದರ್ಭದಲ್ಲಿ, ಸುನಕ್ ತಂಡದ ಬಗ್ಗೆ ಅದರಲ್ಲೂ ವಿಶೇಷವಾಗಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿದ್ದಾಗ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ನೀಡಿದ್ದ ಕೊಹ್ಲಿ ಸಹಿ ಮಾಡಿದ್ದ ಬ್ಯಾಟ್ ಹಿಡಿದು ‘ಕೊಹ್ಲಿ ಅವರೊಬ್ಬ ಲೆಜೆಂಡ್’ ಎಂದು ಬಣ್ಣಿಸಿದ್ದರು.
ಐಪಿಎಲ್ ಸೀಸನ್ ಆಟವನ್ನು ಕ್ರಾಂತಿಗೊಳಿಸಿದೆ..
ಆರ್‌ಸಿಬಿ ತಂಡದಲ್ಲಿ ಇಂಗ್ಲೆಂಡ್ನ ಆಟಗಾರರು ಕೂಡ ದೊಡ್ಡ ಪಾತ್ರ ವಹಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಫೈನಲ್‌ನಲ್ಲಿ ದೊಡ್ಡ ಕೊಡುಗೆ ನೀಡುತ್ತಾರೆ ಎಂದು ರಿಷಿ ಸುನಕ್ ಆಶಿಸಿದ್ದಾರೆ. ಐಪಿಎಲ್ ಆಟವನ್ನು ಕ್ರಾಂತಿಗೊಳಿಸಿದೆ. ಇಂದು, ಪ್ರತಿಯೊಬ್ಬ ವೃತ್ತಿಪರ ಕ್ರಿಕೆಟಿಗನೂ ಅದರ ಭಾಗವಾಗಲು ಬಯಸುತ್ತಾನೆ ಎಂದು ಅವರು ಹೇಳಿದ್ದರು.
ಇನ್ನೂ ಪ್ರಮುಖವಾಗಿ ಫೈನಲ್ ಪಂದ್ಯದತ್ತ ಇಡೀ ದೇಶವಲ್ಲದೆ ಜಗತ್ತನ ಕಣ್ಣು ನೆಟ್ಟಿದ್ದು, ಪಂದ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಲು ಕೋಟ್ಯಂತರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.