Political News: ಬಳ್ಳಾರಿ, ಏಪ್ರಿಲ್ 26: ಕರ್ನಾಟಕದ ರೈತರಿಗೆ ಬರ ಪರಿಹಾರಕ್ಕೆ ಹಣ ನೀಡಿ ಎಂದು ರಾಜ್ಯ ಸರ್ಕಾರ ಮನವಿ ಮಾಡಿದರೆ ಕೇಂದ್ರದ ಬಿಜೆಪಿ ಸರ್ಕಾರ ಬಿಡಿಗಾಸೂ ನೀಡದೆ ಚೊಂಬು ನೀಡಿತು. ಬಿಜೆಪಿ ಎಂದರೆ ಭಾರತೀಯ ಚೊಂಬು ಪಾರ್ಟಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ ತುಕಾರಾಂ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಬಿಜೆಪಿ ಸರ್ಕಾರ ದೇಶದ ಜನರಿಗೆ ಚೊಂಬು ನೀಡಿದೆ. ಅವರು ದೇಶದ ನಾಗರಿಕರಿಗೆ ಏನೂ ಕೊಡಲಿಲ್ಲ. ಅಧಿಕಾರದಲ್ಲಿದ್ದ ಹತ್ತು ವರ್ಷ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಲಿಲ್ಲ ಎಂದು ರಾಹುಲ್ ಗಾಂಧಿ ಅವರು ವೇದಿಕೆಯಲ್ಲಿ ಚೊಂಬನ್ನು ಪ್ರದರ್ಶನ ಮಾಡಿದರು.
ನರೇಂದ್ರ ಮೋದಿ ಅವರ ಸರ್ಕಾರ ಕೇವಲ ಇಪ್ಪತ್ತು ಜನರಿಗೆ ಮಾತ್ರವೇ ಅನುಕೂಲ ಮಾಡಿಕೊಟ್ಟಿದೆ. ಅವರ ಸಾಲ ಮನ್ನಾ ಮಾಡಿದೆ. ಕೋಟ್ಯಂತರ ರೈತರು ಅವರ ಕಣ್ಣಿಗೆ ಬೀಳಲಿಲ್ಲ, ಅವರ ಸಾಲ ಮನ್ನಾ ಮಾಡಲಿಲ್ಲ ಎಂದು ಹೇಳಿದರು.
ಪಕೋಡ ಮಾರಿ ಎಂದರು
ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಿದ್ದಾಗ ನರೇಂದ್ರ ಮೋದಿ ಅವರು ರಸ್ತೆಯಲ್ಲಿ ನಿಂತು ಗಂಟೆ ಬಾರಿಸಿ, ತಟ್ಟೆ ಬಾರಿಸಿ ಎಂದು ಕರೆ ನೀಡಿದರು. ಈಗ ಯುವಜನರಿಗೆ ಉದ್ಯೋಗ ನೀಡಿ ಎಂದು ಕೇಳಿದರೆ ಪಕೋಡ ಮಾರಿ ಎಂದು ಹೇಳುತ್ತಿದ್ದಾರೆ. ಇದೇ ಇವರು ಮಾಡುವ ಅಭಿವೃದ್ಧಿ ಎಂದು ವ್ಯಂಗ್ಯವಾಡಿದರು.
ದೇಶದ ಯುವಜನರಿಗೆ, ನಿರುದ್ಯೋಗಿಗಳಿಗೆ ಕಾಂಗ್ರೆಸ್ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ. ಅವುಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟ ಮಾಡಿದೆ. ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ. ಶ್ರೀಮಂತರ ಮಕ್ಕಳು ಓದಿದರೆ ಅವರಿಗೆ ಉದ್ಯೋಗ ಸಿಗುತ್ತದೆ. ಆದರೆ ಬಡವರ ಮಕ್ಕಳು ಓದಿದರೆ ಅವರಿಗೆ ಕೆಲಸ ಸಿಗೊಲ್ಲ. ಆದ್ದರಿಂದ ಅವರಿಗೂ ಶಿಷ್ಯವೇತನದ ಕೆಲಸಗಳನ್ನು ನೀಡಲಲಾಗುವುದು ಎಂದು ಹೇಳಿದರು.
ನರೇಗಾದಡಿ ಉದ್ಯೋಗ, ಕೂಲಿ ಹೆಚ್ಚಳ
ನರೇಗಾ ಯೋಜನೆಯಡಿ ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದ್ದು ಕಾಂಗ್ರೆಸ್, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನರೇಗಾದಡಿ ಇನ್ನಷ್ಟು ಕೆಲಸ ನೀಡಲಾಗುವುದು. ಅವರ ಕನಿಷ್ಠ ಕೂಲಿಯನ್ನು ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಿದರು.
ನ್ಯಾಯಯುತ ಎಂಎಸ್ ಪಿ
ರೈತರ ಸಾಲ ಮನ್ನಾ ಮಾಡದ ಬಿಜೆಪಿ ಸರ್ಕಾರ ಅವರ ಬೆಳೆಗಳಿಗೆ ಸರಿಯಾದ ಬೆಲೆಯನ್ನೂ ನೀಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು. ಅವರ ಬೆಳೆಗಳಿಗೆ ಸರಿಯಾದ ಬೆಲೆ ಹಾಗೂ ನ್ಯಾಯಯುತ ಎಂಎಸ್‌ಪಿ ನೀಡಲಾಗುವುದು ಎಂದರು.
ಅಗ್ನಿವೀರ್ ರದ್ದು, ಸರಳ ಜಿಎಸ್‌ಟಿ
ಬಿಜೆಪಿ ಸರ್ಕಾರ ಅಗ್ನಿವೀರ್ ಎಂಬ ಯೋಜನೆ ಜಾರಿ ಮಾಡಿ ಯುವಕರ ಕನಸಿಗೆ ತಣ್ಣೀರು ಎರಚಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಹಿಂದಕ್ಕೆ ಪಡೆಯುತ್ತೇವೆ. ಬಿಜೆಪಿ ಸರ್ಕಾರ ಜಿಎಸ್‌ಟಿ ಜಾರಿ ಮಾಡಿ ರೈತರನ್ನು ಹಾಗೂ ಬಡವರನ್ನು ಸುಲಿಗೆ ಮಾಡ್ತಾ ಇದ್ದಾರೆ. ಆದ್ದರಿಂದ ಸರಳ ಜಿಎಸ್‌ಟಿ ಜಾರಿ ಮಾಡಲಾಗುವುದು ಎಂದರು.
ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸಾಕಾರ
ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಯೋಜನೆಯನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದೇನೆ. ಇದು ಇಲ್ಲಿ ಆಗಬೇಕು. ಆಗ ಇಲ್ಲಿ ಹೊಸ ಉದ್ಯೋಗಗಳು ಸಿಗಲಿವೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಂವಿಧಾನ ದುರ್ಬಲಗೊಳಿಸುವ ಬಿಜೆಪಿ
ಬಡವರು, ಹಿಂದುಳಿದವರಿಗೆ ಅಧಿಕಾರ ನೀಡಿದ್ದು ಸಂವಿಧಾನ. ಇಂತಹ ಸಂವಿಧಾನವನ್ನು ದುರ್ಬಲಗೊಳಿಸಲು ಬಿಜೆಪಿ ಸನ್ನಾಹ ನಡೆಸಿದೆ. ಆದರೆ ಕಾಂಗ್ರೆಸ್ ಸಂವಿಧಾನವನ್ನು ಬಲಗೊಳಿಸಲು ಮುಂದಾಗಿದೆ. ದೇಶದ ಜನರಿಗೆ ಶಕ್ತಿ ನೀಡಲಿದೆ ಎಂದರು.
ಕೆಲಸಕ್ಕೆ ರಿಸೈನ್ ಕೊಟ್ಟು, ಬಾಸ್ ಎದುರು ಢೋಲು ಬಾರಿಸಿ, ಡಾನ್ಸ್ ಮಾಡಿದ ಯುವಕ, ವೀಡಿಯೋ ವೈರಲ್
ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬಂದ ಬಾಣಂತಿ, ಮಿಮಿಕ್ರಿ ಆರ್ಟಿಸ್ಟ್ ಇಂದುಶ್ರೀ..
ಮೋದಿ ಶೌಚಾಲಯ ಕಟ್ಟಿಸಿದ್ದಾರೆ. ಕಾಂಗ್ರೆಸ್‌ನವರು ಚೊಂಬು ಹಿಡ್ಕೊಂಡು ಓಡಾಡುತ್ತಿದ್ದಾರೆ: ಜೋಶಿ