ಭೋಪಾಲ್ : ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದು, ಮತ್ತೊಮ್ಮೆ ಗಮನ ಸೆಳೆಯುವ ವಿಚಾರವನ್ನು ಹೇಳಿದ್ದಾರೆ. ವಾಸ್ತವವಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮದ್ಯ ಸೇವನೆಯ ಬಗ್ಗೆ ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದಾರೆ.
ಆಲ್ಕೋಹಾಲ್ ಅನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಅದು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ಸೇವಿಸಿದರೆ ಅದು ವಿಷವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ತಮ್ಮ ಹೇಳಿಕೆಯಲ್ಲಿ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿದ್ದಾರೆ.
ಈ ಮುಂಚೆ ಕೊರೊನಾ ಸೋಂಕಿನ ನಿವಾರಣೆ ಕುರಿತು ಹೇಳಿಕೆ ನೀಡಿದ್ದ ಪ್ರಜ್ಞಾ ಸಿಂಗ್, ಹಸುವಿನ ಗಂಜಲ ಸೇವನೆ ಶ್ವಾಸಕೋಶದ ಸೋಂಕನ್ನು ನಿವಾರಿಸಬಲ್ಲದು ಎಂದಿದ್ದರು. “ನಾನು ಪ್ರತಿ ದಿನ ಗಂಜಲ ಕುಡಿಯುತ್ತೇನೆ. ಅದು ನನಗೆ ಕೊರೊನಾ ಸೋಂಕಿನಿಂದ ರಕ್ಷಣೆ ನೀಡಿದೆ” ಎಂದು ಹೇಳಿದ್ದರು. ಇಷ್ಟೇ ಅಲ್ಲದೆ, ಗಂಜಲ ಸೇವನೆಯಿಂದ ತಮಗಿದ್ದ ಕ್ಯಾನ್ಸರ್ ವಾಸಿಯಾಯಿತೆಂದು ಹೇಳಿ ಅಚ್ಚರಿ ಮೂಡಿಸಿದ್ದರು.
ವಾಸ್ತವವಾಗಿ ಬಿಜೆಪಿ ನಾಯಕಿ ಉಮಾಭಾರತಿ ಅವರ ಬೇಡಿಕೆಯ ಬಗ್ಗೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕೇಳಿದಾಗ, “ಮದ್ಯ ನಿಷೇಧವಾಗಬೇಕು, ಏಕೆಂದರೆ ಮದ್ಯದಿಂದ ಮನೆಗಳಲ್ಲಿ ತೊಂದರೆ ಉಂಟಾದಾಗ ಅದರ ನೋವು ಸಹಿಸಲಾಗದು, ಕುಡುಕರು ಮನೆಯವರನ್ನು ಹೊಡೆಯುತ್ತಾರೆ. ಆಲ್ಕೋಹಾಲ್ ನಿಂದಾಗಿ, ಅವರ ನೋವು ತುಂಬಾ ಅಸಹನೀಯವಾಗಿರುತ್ತದೆ. ಇದರಿಂದ ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಈ ಮದ್ಯಪಾನ ಬಳಕೆಯನ್ನು ನಿಲ್ಲಿಸಬೇಕು ಎಂದಿದ್ದಾರೆ.