ನಟ ಪ್ರಮೋದ್ ಶೆಟ್ಟಿ ಸದ್ಯ ಸಖತ್ ಬ್ಯುಸಿಯಾಗಿರುವ ನಟ. ವಿಲನ್ ಪಾತ್ರ, ಕಾಮಿಡಿಯನ್ ಪಾತ್ರ, ಪೊಲೀಸ್ ಪಾತ್ರ, ರಾಜಕೀಯ ವ್ಯಕ್ತಿಯ ಪಾತ್ರ ಸೇರಿ ಎಲ್ಲಾ ಪಾತ್ರಗಳಿಗೂ ಒಗ್ಗುವ ವ್ಯಕ್ತಿತ್ವ ಹೊಂದಿರುವ ಪ್ರಮೋದ್, ತೂತು ಮಡಿಕೆ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರಮೋದ್ ಇಂದು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ.
ತೂತು ಮಡಿಕೆ ಸಿನಿಮಾದಲ್ಲಿ ಪ್ರಮೋದ್ ರಾಜಕಾರಣಿಯ ಪಿಎ ಪಾತ್ರವನ್ನ ಮಾಡಿದ್ದಾರೆ. ಇದು ಪ್ರಮುಖ ಪಾತ್ರಗಳಲ್ಲಿ ಒಂದಾಗಿದ್ದು, ಈ ಪಾತ್ರವನ್ನ ನಿಭಾಯಿಸಿದ ಖುಷಿ ಪ್ರಮೋದ್‌ಗಿದೆ ಅನ್ನೋದು, ಅವರ ಮಾತಿನಿಂದಲೇ ಗೊತ್ತಾಗುತ್ತದೆ. ಆದ್ರೆ ಪಾತ್ರಕ್ಕೆ ಒಪ್ಪಿಕೊಳ್ಳೋಕ್ಕೂ ಮುನ್ನ, ಡೇಟ್ ಮ್ಯಾಚ್ ಮಾಡೋಕ್ಕೆ ಆಗಲ್ಲ ಅಂತಾ, ಈ ಪಾತ್ರ ಮಾಡೋಕ್ಕೆ ಪ್ರಮೋದ್ ಹಿಂದೇಟು ಹಾಕಿದ್ರು. ಆದ್ರೆ ಕಥೆ ಕೇಳಿದ ಮೇಲೆ ತಮ್ಮ ಪಾತ್ರದ ಮಹತ್ವ ಅರಿತು, ಪ್ರಮೋದ್ ಮತ್ತು ನಿರ್ದೇಶಕರು ಸಮಯ ನಿಭಾಯಿಸಿಕೊಂಡು, ಶೂಟಿಂಗ್ ಮುಗಿಸಿದ್ದಾರೆ.
ಇಷ್ಟೇ ಅಲ್ಲದೇ ಪ್ರಮೋದ್, ಹೋಪ್, ರಿಚರ್ಡ್ ಆ್ಯಂಟನಿ, ಲಾಫಿಂಗ್ ಬುದ್ಧ, ಹರಿಕಥೆ ಅಲ್ಲಾ ಗಿರಿಕಥೆ, ಹೀಗೆ ಸಾಲು ಸಾಲು ಸಿನಿಮಾದಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಆದ್ರೆ ಇವರ ಮೊದಲ ಸಿರಿಯಲ್‌ನಲ್ಲಿ ನಟಿಸುವಾಗ ಇವರಿಗೆ ಸಾಕಷ್ಟು ಅವಮಾನವಾಗಿತ್ತಂತೆ. ನೀನು ನಾಟಕ ಮಾಡಿಕೊಂಡು ಇರೋದಾದ್ರೆ ಮನೆ ಬಿಟ್ಟು ಹೋಗು ಅಂತಾ ಪ್ರಮೋದ್ ಶೆಟ್ಟರ ತಂದೆ ಹೇಳಿದ್ದರಂತೆ. ಆಗ ಪ್ರಮೋದ್, ರಂಗಭೂಮಿಗೆ ನಡೆದುಕೊಂಡೇ ಹೋಗುತ್ತಿದ್ದರು. ಅಲ್ಲಿ ಸೈ ಎನ್ನಿಸಿಕೊಂಡ ಬಳಿಕ, ಸಿರಿಯಲ್‌ನಲ್ಲಿ ಆ್ಯಕ್ಟ್ ಮಾಡಲು ನಿರ್ಧರಿಸಿದರು.
ಗಾರ್ಮೆಂಟ್ ಒಂದರಲ್ಲಿ ಸಿರಿಯಲ್ ಶೂಟಿಂಗ್ ನಡೆಯುವ ವೇಳೆ ಪ್ರಮೋದ್ ಆ್ಯಕ್ಟಿಂಗ್ ನೋಡಿ ಡೈರೆಕ್ಟರ್ ಹಿಗ್ಗಾಮುಗ್ಗಾ ಬೈದರಂತೆ. ಇವನು ಓವರ್ ಆ್ಯಕ್ಟಿಂಗ್ ಮಾಡ್ತಾನೆ ಅಂತೆಲ್ಲಾ ಹೇಳಿದ್ದರಂತೆ. ಇದನ್ನು ಕೇಳಿ, ಅಲ್ಲೇ ಇದ್ದ ಬಾತ್‌ರೂಂಗೆ ಹೋಗಿ, ಪ್ರಮೋದ್ ಕಣ್ಣೀರು ಹಾಕಿದ್ದರು. ಆಗ ಆ ಮಾತನ್ನೇ ಚಾಲೆಂಜ್ ಆಗಿ ತೆಗೆದುಕೊಂಡ ಪ್ರಮೋದ್, ಇಲ್ಲಿಯವರೆಗೆ ಬಂದು, ಎಲ್ಲಾ ರೀತಿಯ ಪಾತ್ರವನ್ನೂ ಮಾಡುವ ಅರ್ಹತೆ ಹೊಂದಿದ್ದಾರೆ.