ರಾಯಚೂರು : ಪುನೀತ್ ರಾಜಕುಮಾರ್ (puneeth rajkumar) ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅಚ್ಚುಮೆಚ್ಚಿನ ಅಪ್ಪುವನ್ನು ಆ ಜಿಲ್ಲೆಯಲ್ಲಿ ವಿಶೇಷವಾಗಿ ಸ್ಮರಿಸಲಾಗ್ತಿದೆ. ಮಕ್ಕಳನ್ನು ಹಿಗ್ಗಿ ಮುದ್ದಾಡುತ್ತಿದ್ದ ಆ ರಾಜಕುಮಾರ ಈಗಲೂ ಆ ಜಿಲ್ಲೆಯ ಪುಟಾಣಿ ಮಕ್ಕಳ ಜೊತೆಯಲ್ಲಿ ಸದಾ ನಗುತ್ತಿದ್ದಾರೆ. ಹೀಗೆ ಮುಗ್ಧತೆಯಿಂದ ಕೂತಿರೊ ಪುಟಾಣಿಗಳು. ಅಲ್ಲೊಬ್ರು ಇಲ್ಲೊಬ್ರು ಹಾಲು ಕುಡಿಯುತ್ತಾ ನಲಿಯುತ್ತಿರೊ ಮತ್ತಿಷ್ಟು ಮಕ್ಳು, ಮಗುವೊಂದರ ಕೈಯಿಂದ ಸ್ಲೇಟ್ ನಲ್ಲಿ ಅಪ್ಪು ಅಂತ ಬರೆಸೊ ಮೂಲಕ ಅಕ್ಷರಾಭ್ಯಾಸ ಮಾಡಿಸಿರೊ ಸಿಬ್ಬಂದಿ. ಹೀಗೆ ಕೂತ್ರು ನಿಂತ್ರು ಮುಗ್ಧ ಮನಸ್ಸಿನ ಸರದಾರ ಅಪ್ಪುವಿನ ಆರಾಧನೆ ಮಾಡ್ತಿರೊ ಈ ಮಕ್ಕಳೆಲ್ಲಾ ರಾಯಚೂರು ನಗರದ ವಾಸಿಗಳು. ಹೌದು, ರಾಯಚೂರು ನಗರದ 16 ನೇ ತಿಮ್ಮಾಪುರಪೇಟ್ ವಾರ್ಡ್ ನಲ್ಲಿ ಕರ್ನಾಟಕವೇ (karnataka) ಮೆಚ್ಚುವಂತ ಕೆಲಸ ಮಾಡಲಾಗಿದೆ. ಇದೇ 16 ನೇ ತಿಮ್ಮಾಪುರ ವಾರ್ಡ್ ನ ನಗರ ಸಭೆ ಸದಸ್ಯೆ ಗಾಯಿತ್ರಿ ಹರೀಶ್ ನಾಡಗೌಡ (Gayitri Harish Nadagowda) ಹಾಗೂ ಅವರ ಪತಿ ಮಾಜಿ ನಗರ ಸಭೆ ಸದಸ್ಯ ಹರೀಶ್ ನಾಡಗೌಡ (Harish Nadagowda) ಸೇರಿ ಇಂಥದ್ದೊಂದು ಅಪರೂಪದ ಕೆಲಸ ಮಾಡಿದ್ದಾರೆ. ಮಾಜಿ ನಗರ ಸಭೆ ಸದಸ್ಯ ಹರೀಶ್ ನಾಡಗೌಡಗೆ ಪುನೀತ್ ರಾಜಕುಮಾರ್ ಅಂದ್ರೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ವರ್ಷಗಳ ಕಾಲ ಅಪ್ಪು ಅಭಿನಿಯದ ಹಾಡುಗಳನ್ನೇ ಕಾಲರ್ ಟ್ಯೂನ್‌ಗಳಾಗಿ ಇಟ್ಟುಕೊಳ್ಳೊವಷ್ಟು ದೊಡ್ಡ ಅಭಿಮಾನಿಯಾಗಿದ್ರು ಹರೀಶ್. ನಟ ಡಾ.ಪುನೀತ್ ರಾಜಕುಮಾರ್ ನಿಧನದ ಬಳಿಕ, ನೆಚ್ಚಿನ ನಟನ ಹೆಸರಿನಲ್ಲಿ ಏನನ್ನಾದ್ರೂ ಮಾಡಬೇಕು ಅಂತ ಡಿಸೈಡ್ ಮಾಡಿದ್ರು. ಅಪ್ಪು ಅವ್ರಿಗೆ ಮಕ್ಕಳೆಂದರೇ ಅಚ್ಚು ಮೆಚ್ಚು. ಹೀಗಾಗಿ ಮಕ್ಕಳು ಕೂಡ ಪುನೀತ್ರನ್ನು ಆರಾಧಿಸೊ ರೀತಿ ಮಾಡ್ಬೇಕು ಅಂತ ಅಪ್ಪು ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಕಸದಿಂದ ರಸ ತೆಗಿಯಬಹುದು ಅನ್ನೊ ಹಾಗೇ, ಹರೀಶ್ ತಿಮ್ಮಾಪುರ ವಾರ್ಡ್ ನಲ್ಲಿ ಕಸ ವಿಲೆವಾರಿ ಮಾಡಲಾಗ್ತಿದ್ದ ಜಾಗದಲ್ಲಿ, ಶಾಸಕರ ಅನುದಾನದ ಕೆಕೆಆರ್‌ಡಿಬಿ ಫಂಡ್ ಬಳಸಿಕೊಂಡು ಸುಮಾರು 15 ಲಕ್ಷ ವೆಚ್ಚದಲ್ಲಿ ಈ ಅಪ್ಪು ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿದ್ದಾರೆ. ಇದಷ್ಟೇ ಅಲ್ಲ, ಅಪ್ಪು ಅಂಗನವಾಡಿ ಕೇಂದ್ರದ ರಸ್ತೆಗೂ ಡಾ. ಪುನೀತ್ ರಾಜಕುಮಾರ್ ಹೆಸರಿಟ್ಟು,ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ. ಅಪ್ಪು ಅಂಗನವಾಡಿ ಕೇಂದ್ರದಲ್ಲಿ ಎಲ್ಲವೂ ಪುನೀತಮಯ. ತಾಯಿ ಕನ್ನಡಾಂಬೆಯ ಪಕ್ಕದಲ್ಲಿ ಅಪ್ಪು ಅವರ ಫೋಟೊಗಳನ್ನ ಅಳವಡಿಸಲಾಗಿದೆ. ಗೋಡೆಯ ಮೇಲೆ ಡಾ.ಪುನೀತ್ ರಾಜಕುಮಾರ್ ಮಾಡಿರೊ ಸಾಧನೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇತ್ತ ಅಪ್ಪು ಅಂದ್ರೆ ಅಪ್ಪಿ ಮುದ್ದಾಡೊ ಮಕ್ಕಳು ಕೂಡ, ಪ್ರತಿನಿತ್ಯ ಪುನೀತ್ ರಾಜಕುಮಾರ್ ಆರಾಧನೆ ಮಾಡ್ತಿದ್ದಾರೆ. ಪುಟಾಣಿ ಮಕ್ಕಳಿಗೆ ಶಿಕ್ಷಣದ ತರಬೇತಿಗಳ ಜೊತೆ ಅಪ್ಪು ಮಾಡಿರೊ ಸಮಾಜಮುಖಿ ಕೆಲಸಗಳನ್ನು ಪರಿಚಯಿಸೊ ಕಾರ್ಯ ನಡೀತಿದೆ. ಜೊತೆಗೆ ಅಪ್ಪು ಅಂತ¸ಸ್ಲೇಟ್‌ನಲಿ ಬರಿಸಿ ಅಕ್ಷರಾಭ್ಯಾಸವನ್ನು ಮಾಡಿಸಲಾಗ್ತಿದೆ. ಅದೆನೆ ಇರಲಿ, ಮಕ್ಕಳಿಗಾಗಿಯೇ ನಿರ್ಮಾಣವಾಗಿರೊ ಅಪ್ಪು ಅಂಗನವಾಡಿ ಕೇಂದ್ರ ಸದಾ ಹೀಗೆ ಪ್ರಜ್ವಲಿಸುತ್ತಲೇ ಇರಬೇಕು. ಇಲ್ಲಿ ಕಲಿಯೊ ಪ್ರತಿಮಗುವೂ ಡಾ.ಪುನೀತ್ ರಾಜಕುಮಾರ್ ಮುಗ್ಧತೆ,ಸರಳತೆಯನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳುವಂತಾಗಲಿ ಅನ್ನೋದೇ ನಮ್ಮ ಆಶಯ.