Ramanagara News: ರಾಮನಗರದ ಬಿಡದಿಯ ಖಾಸಗಿ ಕಂಪನಿಯಲ್ಲಿ ಪಾಕ್ ಪರ ಬರಹ ಬರೆದಿದ್ದು ಸುದ್ದಿಯಾಗಿತ್ತು. ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಗೋಡೆಬರಹ ಬರೆದು, ಕನ್ನಡಿಗರ ಮನಸ್ಸಿಗೆ ನೋವಾಗುವಂತೆ ಅಗೌರವ ತೋರಿದ್ದರು.
ಇದೀಗ ಆ ಪಾಕಿಸ್ತಾನ ಪ್ರೇಮಿಗಳಾದ ಸಾಧಿಕ್ ಮತ್ತು ಹುಸೇನ್‌ನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿರುವ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ, ಬಿಡದಿಯ ಪ್ರತಿಷ್ಠಿತ ಕಾರ್ಖಾನೆಯಲ್ಲಿ ಪಾಕ್ ಪರ ಗೋಡೆ ಬರಹಕ್ಕೆ ಸಂಬಂಧಿಸಿದಂತೆ , ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಟಯೋಟೋ ಬುಷಾಕೋ ಕಾರ್ಖಾನೆಯ ಶೌಚಾಲಯದಲ್ಲಿ ದೇಶದ್ರೋಹಿ ಬರಹ ಬರೆಯಲಾಗಿತ್ತು. ಜೊತೆಗೆ ಕಿಡಿಗೇಡಿಗಳು ಕನ್ನಡಿಗರ ಬಗ್ಗೆಯೂ ಅವಹೇಳನಕಾರಿ ಪದ ಬಳಕೆ ಮಾಡಿದ್ದರು. ಇಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಬಂಧಿತರಿಬ್ಬರು ಉತ್ತರಕರ್ನಾಟಕ ಮೂಲದ ಹೈಮದ್ ಹುಸೇನ್ (21) ಮತ್ತು ಸಾದಿಕ್ (24) ಎಂದು ಗುರುತಿಸಲಾಗಿದೆ. ಇವರಿಬ್ಬರು ಗುತ್ತಿಗೆ ಆಧಾರದಲ್ಲಿ ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗಿದ್ದು, ಯಾಕೆ ಈ ರೀತಿ ಬರಹ ಬರೆದಿದ್ದು ಎಂದು ತನಿಖೆ ನಡೆಸಲಾಗುತ್ತಿದೆ.
ಕೆಲ ದಿನಗಳ ಹಿಂದೆ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಸೋತಿದ್ದಕ್ಕೆ, ಕೆಲ ಸಹೋದ್ಯೋಗಿಗಳು ಪಾಕ್ ಪರ ವ್ಯಂಗ್ಯವಾಡಿದ್ದರು. ಇದರಿಂದ ಹುಸೇನ್ ಮತ್ತು ಸಾದಿಕ್ ಇಬ್ಬರಿಗೂ ದ್ವೇಷದ ಕಿಚ್ಚು ಹೊತ್ತಿಕೊಂಡಿತ್ತು. ಈ ಕಾರಣಕ್ಕೆ ಪಾಕ್ ಪರ ಗೋಡೆ ಬರಹ ಬರೆದಿರಬಹುದು ಎನ್ನಲಾಗಿದೆ.
ಇನ್ನು ಇವರಿಬ್ಬರನ್ನು ಅರೆಸ್ಟ್ ಮಾಡುವುದಕ್ಕೂ ಮುನ್ನ ಪೊಲೀಸರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 800 ನೌಕರರನ್ನು ಕರೆಸಿ, ವಿಚಾರಣೆ ನಡೆಸಿ, ಅವರ ಕೈಬರಹ ಪಡೆದು, ಸಿಸಿಟಿವಿ ಕ್ಯಾಮೆರಾ ಎಲ್ಲವನ್ನೂ ಪರಿಶೀಲಿಸಿ, ಬಳಿಕ ಈ ಇಬ್ಬರ ವಿರುದ್ಧ ಕೆಲ ಸಾಕ್ಷ್ಯ ಸಿಕ್ಕ ಕಾರಣಕ್ಕೆ ಇವರಿಬ್ಬರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.