Recipe: ಬಸಳೆ ಸೊಪ್ಪು ಸಿಟಿ ಮಂದಿ ಬಳಸೋದು ತುಂಬಾನೇ ಅಪರೂಪ. ಉತ್ತರಕನ್ನಡ, ದಕ್ಷಿಣ ಕನ್ನಡದ ಜನರು ಬಸಳೆ ಸೊಪ್ಪನ್ನು ಹೆಚ್ಚು ಬಳಸುತ್ತಾರೆ. ಆದರೆ ನೀವು ಒಮ್ಮೆ ಬಸಳೆ ಸೊಪ್ಪಿನ ಸಾಂಬಾರ್ ಹೀಗೆ ಮಾಡಿದ್ರೆ, ಮನೆ ಜನರಿಗೆಲ್ಲ ಸಖತ್ ಇಷ್ಟವಾಗುತ್ತದೆ. ಹಾಗಾದ್ರೆ ಇದಕ್ಕೇನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.
ಬೇಕಾಗುವ ಸಾಮಗ್ರಿ: ಬಸಳೆ ಸೊಪ್ಪು, ಅರ್ಧ ಕಪ್ ಕಾಬೂಲ್ ಕಡಲೆಕಾಯಿ, 2 ಆಲೂಗಡ್ಡೆ, 1 ಈರುಳ್ಳಿ, ಕಾಲು ಕಪ್ ತೊಗರಿ ಬೇಳೆ, 5 ಎಸಳು ಬೆಳ್ಳುಳ್ಳಿ, ಒಂದೊಂದು ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು, 3 ಒಣಮೆಣಸು, ಸ್ವಲ್ಪ ಹುಣಸೆಹಣ್ಣು, 1 ಸ್ಪೂನ್ ಉದ್ದಿನ ಬೇಳೆ, ಕೊಂಚ ಅರಿಶಿನ, ಕೊಂಚ ಬೆಲ್ಲ, ಅರ್ಧ ಕಪ್ ಕಾಯಿತುರಿ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ತೊಗರಿ ಬೇಳೆ ಮತ್ತು ಕಾಬೂಲ್ ಕಡಲೆ ಕಾಯಿ ಬೇಯಿಸಿಕೊಳ್ಳಿ. ಬಳಿಕ ಆಲೂಗಡ್ಡೆ ಬೇಯಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಬಸಳೆ, ನೀರು ಹಾಕಿ ಬೇಯಿಸಲು ಇಡಿ. ಬಸಳೆ ಸ್ವಲ್ಪ ಬೆಂದ ಬಳಿಕ ಇದಕ್ಕೆ ಉಪ್ಪು, ಹುಣಸೆ ಹಣ್ಣು ಹಾಾಕಿ ಪೂರ್ತಿಯಾಗಿ ಬೇಯಿಸಿಕೊಳ್ಳಿ.
ಬಳಿಕ ಒಂದು ಪ್ಯಾನ್‌ಗೆ ಕೊಂಚ ಎಣ್ಣೆ ಹಾಕಿ, ಒಣಮೆಣಸು, ಉದ್ದಿನ ಬೇಳೆ, ಜೀರಿಗೆ, ಬೆಳ್ಳುಳ್ಳಿ, ಕೊತ್ತೊಂಬರಿ ಕಾಳು ಹಾಕಿ ಘಮ ಬರುವವರೆಗೂ ಹುರಿಯಿರಿ. ಇದನ್ನು ತಣಿಸಿ. ಈಗ ಮಿಕ್ಸಿ ಜಾರ್‌ಗೆ ತೆಂಗಿನ ತುರಿ, ಹುರಿದ ಮಿಶ್ರಣ, ಕೊಂಚ ನೀರು ಹಾಕಿ ಮಸಾಲೆ ರುಬ್ಬಿಕೊಳ್ಳಿ.
ಈಗ ಬೇಯಿಸಿದ ಆಲೂಗಡ್ಡೆ, ತೊಗರಿ ಬೇಳೆ, ಕಾಬೂಲ್ ಕಡಲೆಕಾಯಿ, ಬಸಳೆಯನ್ನು ಮಿಕ್ಸ್ ಮಾಡಿ, ಕೊಂಚ ಬೇಯಿಸಿ. ಬಳಿಕ ರುಬ್ಬಿಕೊಂಡ ಮಸಾಲೆ, ಬೆಲ್ಲ ಸೇರಿಸಿ, ಚೆನ್ನಾಗಿ ಕುದಿಸಿ. ಈಗ ಎಣ್ಣೆ, ಸಾಸಿವೆ, ಕರಿಬೇವು, ಹಿಂಗು ಹಾಕಿ ಒಂದು ಒಗ್ಗರಣೆ ಕೊಟ್ರೆ, ಘಮ ಘಮಿಸುವ ರುಚಿಯಾದ, ಬಸಳೆ ಸೊಪ್ಪಿನ ಸಾರು ರೆಡಿ.