ಬರ್ಮಿಂಗ್‍ಹ್ಯಾಮ್: ರಿಷಬ್ ಪಂತ್ ಅವರ ಸೊಗಸಾದ ಶತಕದ ನೆರೆವಿನಿಂದ ಭಾರತ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ ಐದನೆ ಟೆಸ್ಟ್ ಪಂದ್ಯದ ಮೊದಲ ದಿನ ಗೌರವ ಮೊತ್ತ ಪೇರಿಸಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಅರ್ಧ ಶತಕ ಸಿಡಿಸಿ ತಂಡದ ಕುಸಿತವನ್ನು ತಡೆದರು.
ಶುಕ್ರವಾರ ಎಡ್ಜ್‍ಬಾಸ್ಟನ್ ಮೈದಾನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಫಿಲ್ಡಿಂಗ್ ಆಯ್ದುಕೊಂಡಿತು. ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಶುಭಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ ಉತ್ತಮ ಆರಂಭ ಕೊಡುವಲ್ಲಿ ಎಡವಿದರು. 4 ಬೌಂಡರಿ ಸಿಡಿಸಿ 17 ರನ್ ಗಳಿಸಿದ್ದ ಶುಭಮನ್ ಗಿಲ್ ವೇಗಿ ಆ್ಯಂಡರ್ಸನ್ ಎಸೆತದಲ್ಲಿ ಕ್ರಾವ್ಲಿಗೆ ಕ್ಯಾಚ್ ನೀಡಿ ಹೊರ ನಡೆದರು.
ಮೂರನೆ ಕ್ರಮಾಂಕದಲ್ಲಿ ಬಂದ ಹನುಮ ವಿಹಾರಿ ಚೇತೇಶ್ವರ ಪೂಜಾರಗೆ ಒಳ್ಳೆಯ ಸಾಥ್ ಕೊಟ್ಟರು. ಆದರೆ ನಿಧಾನ ಗತಿಯಲ್ಲಿ ಆಡುತ್ತಿದ್ದ ಚೇತೇಶ್ವರ ಪೂಜಾರ 13 ರನ್ ಗಳಿಸಿದ್ದಾಗ ಕ್ರಾವ್ಲಿಗೆ ಕ್ಯಾಚ್ ನೀಡಿ ಹೊರ ನಡೆದರು.
ವಿರಾಟ್ ಕೊಹ್ಲಿ ಕ್ರೀಸ್‍ಗೆ ಬಂದಾಗ ಜೋರಾಗಿ ಮಳೆ ಬಂತು. ಪಂದ್ಯವನ್ನು ಕೆಲವು ಗಂಟೆಗಳ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ನಂತರ ಆರಂಭವಾದ ಪಂದ್ಯದಲ್ಲಿ ದಾಳಿಗಿಳಿದ ಮ್ಯಾಥೀವ್ ಪಾಟ್ಸ್ , ಹನುಮ ವಿಹಾರಿ (20 ರನ್) ಹಾಗೂ ವಿರಾಟ್ ಕೊಹ್ಲಿ (11 ರನ್) ಅವರನ್ನು ಬಲಿತೆಗೆದುಕೊಂಡರು.
ಆರನೆ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ (15 ರನ್) ವೇಗಿ ಆ್ಯಂಡರ್ಸನ್‍ಗೆ ವಿಕೆಟ್ ಒಪ್ಪಿಸಿದರು.
ತಂಡಕ್ಕೆ ನೆರವಾದ ಪಂತ್, ಜಡೇಜಾ
98 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾಗಿದ್ದು ರಿಷಬ್ ಪಂತ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ.ಈ ಜೋಡಿ ಆಂಗ್ಲ ಬೌಲರ್‍ಗಳ ಬೆವರಿಳಿಸಿತು. ರಿಷಬ್ ಪಂತ್ ಬೌಂಡರಿಗಳ ಸುರಿಮಳೆಗೈದರೆ ರವೀಂದ್ರ ಜಡೇಜಾ ನಿಧಾನಗತಿಯ ಆಟವಾಡಿ ಅರ್ಧ ಶತಕ ಸಿಡಿಸಿದರು.
51 ಎಸೆತದಲ್ಲಿ ಅರ್ಧ ಶತಕ ಸಿಡಿಸಿದ ರಿಚಬ್ ಪಂತ್ ನಂತರ 89 ಎಸೆತದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಈ ಶತಕದೊಂದಿಗೆ 5ನೇ ಟೆಸ್ಟ್ ಶತಕ ಸಿಡಿಸಿದ ಸಾಧನೆ ಮಾಡಿದರು. ವಿರಾಮದ ವೇಳೆಗೆ ಭಾರತ 5 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು. ರಿಷಭ್ ಪಂತ್ ಅಜೇಯ 146 ರನ್ ಗಳಿಸಿದ್ದಾಗ ಕ್ರೌವ್ಲಿಗೆ ಕ್ಯಾಚ್ ನೀಡಿದರು. ಶಾರ್ದೂಲ್ ಠಾಕೂರ್ 1, ಮೊಹ್ಮದ್ ಶಮಿ ಅಜೇಯ 0,ರವೀಂದ್ರ ಜಡೇಜಾ ಅಜೇಯ 83ರನ್ ಗಳಿಸಿ ಎರಡನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡರು. ಭಾರತ 7 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ.
ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ 3, ಮ್ಯಾಥೀವ್ ಪಾಟ್ಸ್ 2 ವಿಕೆಟ್ ಪಡೆದರು.