ಮ್ಯಾಂಚೆಸ್ಟರ್:ಟೀಮ್ ಇಂಡಿಯಾ ನಿನ್ನೆ ಆಂಗ್ಲರ ವಿರುದ್ಧದ ನಿರ್ಣಾಯಕ ಮೂರನೆ ಏಕದಿನ ಪಂದ್ಯದಲ್ಲಿ 5 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಭಾರತ ಆಂಗ್ಲರ ನೆಲದಲ್ಲಿ ವಿಜಯಿಯಾಗಲು ಕಾರಣವಾಗಿದ್ದು ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಜೊತೆಗೂಡಿ 5ನೇ ವಿಕೆಟ್ ಗೆ 133 ರನ್ ಸೇರಿಸಿ ತಂಡವನ್ನು ಗೆಲುವಿಗೆ ಹೊಸ್ತಿಲಿಗೆ ತಂದು ನಿಲ್ಲಿಸಿದರು.
ಪರಾಕ್ರಮ ಮೆರೆದ ಪಂತ್ ಬೌಂಡರಿ ಸಿಕ್ಸರ್ ಗಳ ಸುರಿಮಳೆ ಗೈದರು. ಡೆಲ್ಲಿ ಡ್ಯಾಶರ್ ಪಂತ್ 113 ಎಸೆತ ಎದುರಿಸಿ ಅಜೇಯ 125 ರನ್ ಗಳನ್ನು ಹೊಡೆದರು. ಜೊತೆಗೆ ಹಲವಾರು ದಾಖಲೆಗಳನ್ನು ಮುಡಿಗೇರಿಸಿಕೊಂಡರು.
ಯಾವೆಲ್ಲಾ ದಾಖಲೆಗಳು ಪಂತ್ ಬರೆದರೆಂದು ನೋಡುವುದಾದರೆ..
ಏಷ್ಯಾದ ಹೊರಗೆ ಏಕದಿನ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಮೂರನೆ ಭಾರತೀಯ ವಿಕೆಟ್ ಕೀಪರ್ ಎಂಬ ಹಿರಿಮೆಗೆ ಪಂತ್ ಪಾತ್ರರಾಗಿದ್ದಾರೆ. ಈ ಸಾಧನೆ ಮೊದಲು ಮಾಡಿದ್ದು ರಾಹುಲ್ ದ್ರಾವಿಡ್ ಆಗಿದ್ದಾರೆ.
1999ರಲ್ಲಿ ಟೀಮ್ ಇಂಡಿಯಾ ಪರ ವಿಕೆಟ್ ಕೀಪರ್ ಆಗಿದ್ದ ರಾಹುಲ್ ದ್ರಾವಿಡ್ ಶ್ರೀಲಂಕಾ ವಿರುದ್ಧ 145 ರನ್ ಹೊಡೆದಿದ್ದರು. ನಂತರ 2020ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೆ.ಎಲ್. ರಾಹುಲ್ 112 ರನ್ ಹೊಡೆದು ದ್ರಾವಿಡ್ ಅವರ ದಾಖಲೆಯನ್ನು ಸರಿಗಟ್ಟಿದ್ದರು.
ಇದೀಗ ರಿಷಬ್ ಪಂತ್ ಆಂಗ್ಲರ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ತಂಡದ ಮೂರನೆ ವಿಕೆಟ್ ಕೀಪರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಇದರೊಂದಿಗೆ ಏಷ್ಯಾದ ಹೊರಗೆ ಏಕದಿನ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ವಿಶೇಷ ಸಾಧಕರ ಪಟ್ಟಿಗೆ ರಿಷಬ್ ಸೇರಿಕೊಂಡಿದ್ದಾರೆ.
ಒಟ್ಟಿನಲ್ಲಿ ರಿಷಬ್ ಪಂತ್ ಟೀಮ್ ಇಂಡಿಯಾದಲ್ಲಿ ಜವಾಬ್ದಾರಿಯುತವಾಗಿ ಆಟವಾಡಿ ಹಲವಾರು ದಾಖಲೆಗಳನ್ನು ತಮ್ಮದಾಗಿಸಿಕೊಂಡು ತಂಡದ ಫಿನಿಶರ್ ಎನಿಸಿಕೊಂಡಿದ್ದಾರೆ.