Sunday, December 29, 2024

Latest Posts

Sandalwood News: Bossism ಕಾಲ ಮುಗೀತು! ರೊಚ್ಚಿಗೆದ್ದ ದಚ್ಚು ಫ್ಯಾನ್ಸ್‌ಗೆ ಸ್ಪಷ್ಟನೆ

- Advertisement -

Sandalwood News: ಭಾರತೀಯ ಚಿತ್ರರಂಗದ ಯಾವುದೇ ಭಾಷೆಯ ಸಿನಿಮಾರಂಗವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲೊಂದಷ್ಟು ಹೀರೋಗಳ ನಡುವೆ ಸಣ್ಣ ಮುನಿಸು, ಕೋಪ ಕಾಮನ್. ಹಾಗಾಗಿ ಅವರವರ ಫ್ಯಾನ್ಸ್ ಕೂಡ ಅದೇ ಹಾದಿಯಲ್ಲಿ ಸಾಗೋದು ಹೊಸ ವಿಷಯವೇನಲ್ಲ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗುವ ಫ್ಯಾನ್ಸ್, ಸೋಶಿಯಲ್ ಮೀಡಿಯಾದಲ್ಲೂ ಪರ-ವಿರೋಧ ಕಾಮೆಂಟ್ಸ್ ಹಾಕುವ ಮೂಲಕ ಕಚ್ಚಾಟ ಶುರುವಿಟ್ಟುಕೊಳ್ಳೋದು ಸಹಜ.

ಇದು ಕನ್ನಡಕ್ಕೂ ಹೊಸತೇನಲ್ಲ. ಕನ್ನಡ ಚಿತ್ರರಂಗದಲ್ಲೂ ಕೆಲ ಸ್ಟಾರ್ಸ್ ಫ್ಯಾನ್ಸ್ ನಡುವೆ ಆಗಾಗ ಇಂಥದ್ದೊಂದು ಕಾಮೆಂಟ್ಸ್ ಗದ್ದಲ ನಡೆಯುತ್ತಿರುತ್ತೆ. ಅಷ್ಟೇ ಅಲ್ಲ, ಅದು ಒಮ್ಮೊಮ್ಮೆ ತಾರಕ್ಕಕ್ಕೂ ಏರಿದ್ದು ಇದೆ. ಸದ್ಯ ಕನ್ನಡದಲ್ಲಿ ಫ್ಯಾನ್ಸ್ ನಡುವೆ ಜೋರು ಕಾಮೆಂಟ್ಸ್ ಗದ್ದಲ ಅಂದರೆ ಅದು ಸುದೀಪ್ ಮತ್ತು ದರ್ಶನ್ ಅವರ ಫ್ಯಾನ್ಸ್ ಅಂತಾನೇ ಹೇಳಬಹುದು.

ಹೌದು, ಸುದೀಪ್ ಮತ್ತು ದರ್ಶನ್ ಒಂದು ಕಾಲದ ಕುಚಿಕು ಗೆಳೆಯರು. ಒಬ್ಬರಿಗೊಬ್ಬರು ಅಷ್ಟೊಂದು ಆತ್ಮೀಯವಾಗಿದ್ದವರು. ಆದರೆ, ಅದೇಕೋ ಏನೋ ಇಬ್ಬರ ನಡುವೆ ದೊಡ್ಡ ಗ್ಯಾಪ್ ಆಯ್ತು. ಅದು ಎಷ್ಟರಮಟ್ಟಿಗೆ ಅಂದರೆ, ಒಬ್ಬರಿಗೊಬ್ಬರು ದೂರ ಆಗುವಷ್ಟು. ಪರಸ್ಪರ ಟೀಕೆ-ಟಿಪ್ಪಣಿ ಮಾಡದಿದ್ದರೂ, ಎಲ್ಲೋ ಒಂದು ಕಡೆ, ಇಬ್ಬರೂ ಮುಖ ಸಿಂಡರಿಸಿಕೊಂಡು ಇರುವಷ್ಟು ಕೋಪ ಇಬ್ಬರಲ್ಲೂ ಉಂಟಾಯ್ತು. ಇದು ಇಷ್ಟಕ್ಕೇ ನಿಲ್ಲುತ್ತಿಲ್ಲ.

ಆಗಾಗ ಇಬ್ಬರ ಫ್ಯಾನ್ಸ್ ನಡುವೆ ಒಂದಷ್ಟು ಕಾಮೆಂಟ್ಸ್ ವಾರ್ ನಡೆಯುತ್ತಲೇ ಇರುತ್ತೆ. ಅಭಿಮಾನಿಗಳ ವಾದ-ವಿವಾದ ಗಮನಿಸಿದರೂ, ಈ ಇಬ್ಬರು ಸ್ಟಾರ್ಸ್ ಮಾತ್ರ ತಮ್ಮ ಪಾಡಿಗೆ ತಾವಿದ್ದಾರೆ. ಕೆಲ ವೇದಿಕೆಗಳಲ್ಲಿ ಪರೋಕ್ಷವಾಗಿ ಡೈಲಾಗ್ ಹೇಳುವ ಮೂಲಕ ಮಾತಿನ ಪೆಟ್ಟು ಕೊಟ್ಟುಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸುದೀಪ್ ಅವರ ಮ್ಯಾಕ್ಸ್ ರಿಲೀಸ್ ಆಗಿದ್ದು, ಎಲ್ಲೆಡೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಈ ಸಂಭ್ರಮ ಹಂಚಿಕೊಳ್ಳೋಕೆ ಸುದೀಪ್ ಅವರ ಮನೆಯಲ್ಲಿ ಇತ್ತೀಚೆಗೆ ಅವರ ಆಪ್ತ ಬಳಗ ಸೇರಿತ್ತು. ಸುದೀಪ್ ಅವರ ಆತ್ಮೀಯರು ಸಹ ಈ ವೇಳೆ ಮನೆಗೆ ಹೋಗಿ ಶುಭ ಕೋರಿದ್ದರು. ಸುದೀಪ್ ಅವರ ಸಹೋದರನಂತೆ ಇರುವ ನಟ ಪ್ರದೀಪ್ ಕೂಡ ಕೇಕ್ ವೊಂದನ್ನು ತೆಗೆದುಕೊಂಡು ಹೋಗಿ ಸಂಭ್ರಮಿಸಿದ್ದರು. ಸಂಭ್ರಮಪಟ್ಟಿದ್ದು ವಿವಾದ ಆಗಲಿಲ್ಲ. ಆದರೆ, ಪ್ರದೀಪ್ ತೆಗೆದುಕೊಂಡು ಹೋಗಿದ್ದ ಕೇಕ್ ಮೇಲಿನ ಬರಹ ಸಣ್ಣ ಕಿಡಿ ಹೊತ್ತಿಸಿತ್ತು.

ಇಷ್ಟಕ್ಕೂ ಆ ಕೇಕ್ ಮೇಲಿದ್ದ ಬರಹ ಏನು? ಹಾಗೆ ನೋಡೋದಾದರೆ, ‘ಮ್ಯಾಕ್ಸ್’ ನೋಡಿ ಥ್ರಿಲ್ ಆಗಿದ್ದ ಪ್ರದೀಪ್ ಕೇಕ್ ಮೇಲೆ “Bossism ಕಾಲ ಮುಗೀತು. Maximum Mass ಕಾಲ ಶುರುವಾಯ್ತು” ಅಂತ ಬರೆಸಿದ್ದರು. ಆ ಕೇಕ್‌ನ ಫೋಟೊವನ್ನು ತಮ್ಮ ಎಕ್ಸ್ ಖಾತೆಯಲ್ಲೂ ಪ್ರದೀಪ್ ಪ್ರೀತಿಯಿಂದ ಹಂಚಿಕೊಂಡಿದ್ದರು. ಕೇಕ್ ಫೋಟೊ ಪೋಸ್ಟ್ ಮಾಡಿದ್ದ ಪ್ರದೀಪ್ ಮೇಲೆ ಅತ್ತ ದರ್ಶನ್ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ಅಷ್ಟೇ ಅಲ್ಲ, ಅದೇ ಸೋಶಿಯಲ್ ಮೀಡಿಯಾ ಮೂಲಕ ಪ್ರದೀಪ್ ವಿರುದ್ಧ ಕಿಡಿಕಾರಿದ್ದಾರೆ. ಎಲ್ಲಾ ಕಡೆ ಅವರು ಹಾಕಿದ್ದ ಕೇಕ್ ಫೋಟೋ ಸಾಕಷ್ಟು ವಿವಾದ ಆಗುತ್ತಿದ್ದಂತೆ, ಪ್ರದೀಪ್ ವಿಡಿಯೋ ಮೂಲಕ ‘Bossism’ ಕೇಕ್ ವಿವಾದಕ್ಕೆ ಸ್ಪಷ್ಟನೆ ಕೂಡ ನೀಡಿದ್ದಾರೆ. ಆ ಕೇಕ್‌ ಮೇಲೆ ಆ ಸಾಲು ಬರೆದಿದ್ದು ಯಾಕೆ? ಎಂಬ ಕುರಿತು ಕ್ಲಾರಿಟಿ ಕೊಟ್ಟಿದ್ದಾರೆ.

ಅವರು ಕೊಟ್ಟ ಕ್ಲಾರಿಟಿ ಬಗ್ಗೆ ಸ್ವತಃ ಅವರೇ ಹೇಳಿರುವುದೇನೆಂದರೆ, ನಾನು ಸಿನಿಮಾ ಸಾಲನ್ನು ಅನುವಾದಿಸಿದ್ದೆ” ಕೇಕ್ ಮೇಲೆ “ಬಾಸ್‌ಇಸಂ ಕಾಲ ಮುಗೀತು. ಮ್ಯಾಕ್ಸಿಸಂ ಮಾಸ್ ಕಾಲ ಶುರುವಾಯ್ತು” ಅಂತ ಬರೆದಿದ್ದೇಕೆ ಅನ್ನೋದಕ್ಕೆ ಕಾರಣವಿದು. ಇಲ್ಲಿ ಯಾವ ನಟನಿಗೂ ಕೂಡ ಹೋಲಿಕೆ ಮಾಡಿ ಬರೆದಿದ್ದು ಅಲ್ಲ. ಮ್ಯಾಕ್ಸ್’ ಚಿತ್ರದಲ್ಲಿಯೇ ಬರುವಂತಹ ಒಂದು ಸಾಂಗ್. ಮ್ಯಾಕ್ಸಿ ಮ್ಯಾಕ್ಸಿಸಂ ಮಾಸ್.. ಮಾಸ್‌ನಲ್ಲಿ ಮಾಸಿಗೆ ಬಾಸ್. ಈ ಸಾಲನ್ನೇ ಅನುವಾದಿಸಿ ಅದನ್ನೇ ಕೇಕ್ ಮೇಲೆ ಬರೆದಂತಹ ಲೈನ್ ಅದು” ಎಂದಿದ್ದಾರೆ.

“ಒಂದು ಪದ ಯಾರಿಗೂ ಸೀಮಿತವಲ್ಲ” ಇದೇ ವಿಡಿಯೋದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ವಇಚ್ಛೆಯಿಂದ ಹೇಗೆ ಬೇಕಾದರೂ ಕರೆಯಬಹುದು. ಒಂದು ಪದ ಯಾರಿಗೂ ಸೀಮಿತವಲ್ಲ ಎಂದಿದ್ದಾರೆ. “ಪ್ರತಿಯೊಬ್ಬ ನಾಯಕ ನಟನಿಗೂ ತನ್ನದೇ ಆದ ಅಭಿಮಾನಿ ಬಳಗವಿರುತ್ತೆ. ಆ ಅಭಿಮಾನಿಗಳು ತಮ್ಮ ನಟನನ್ನು ಬಾಸ್ ಅಂತಾರೆ, ಅಣ್ಣ ಅಂತಾರೆ, ಸರ್ ಅಂತಾರೆ, ಅವರಿಗೆ ಇಷ್ಟದಂತೆ ತಮ್ಮ ನಾಯಕ ನಟನನ್ನು ಕರೆಯುತ್ತಾರೆ, ಕಿರುಚುತ್ತಾರೆ ಸೆಲೆಬ್ರೆಟ್ ಮಾಡುತ್ತಾರೆ. ಇಲ್ಲಿ ಒಂದು ಪದ ಯಾವ ನಟನಿಗೂ ಸೀಮಿತವಾಗಿರಲ್ಲ ಅಂತ ಅನಿಸುತ್ತೆ. ಪ್ರತಿಯೊಬ್ಬ ಅಭಿಮಾನಿಗೂ ತನ್ನ ನಾಯಕ ನಟನನ್ನು ಹೇಗೆ ಬೇಕೋ ಹಾಗೆ ಕರೆಯಬಹುದು.” ಎಂದಿದ್ದಾರೆ.

“ಕಿಚ್ಚ ಮಾಸ್ ಅಂತ ಹೇಳಿದ್ದು” “ನಮ್ಮ ಕಿಚ್ಚ ಸುದೀಪ್ ಅಣ್ಣನ ಅಭಿಮಾನಿಗಳು ಬಾದ್‌ಷಾ ಅಂತಾರೆ, ಅಭಿನಯ ಚಕ್ರವರ್ತಿ ಅಂತಾರೆ, ಹಾಗೇ ಕಿಚ್ಚ ಬಾಸ್ ಅಂತಾರೆ. ಕಿಚ್ಚ ಬಾಸ್ ಅಲ್ಲ ಇನ್ಮುಂದೆ ಕಿಚ್ಚ ಮಾಸ್ ಅಂತಹ ಹೇಳುವುದಕ್ಕೆ ಹೋಗಿದ್ದು. ಬಾಸಿಸಂ ಕಾಲ ಮುಗೀತು.. ಇನ್ನೇಲೆ ಏನಿದ್ದರೂ ಮಾಸ್ ಕಾಲ ಶುರುವಾಗುತ್ತೆ. ಇದರಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಇದೂವರೆಗೂ ಸೋಶಿಯಲ್ ಮೀಡಿಯಾದಲ್ಲಿ ನಾನು ಪರ್ಸನಲ್ ಆಗಿ ಏನೂ ಹೇಳಿಲ್ಲ.” ಎಂದು ನಟ ಪ್ರದೀಪ್ ಹೇಳಿದ್ದಾರೆ.

ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss