Sandalwood News: ಅದೇನೋ ಗೊತ್ತಿಲ್ಲ. ಈ ಸಿನಿಮಾ ಮಂದಿ ವಿಚಾರದಲ್ಲಂತೂ ಆಗಾಗ ಪೊಲೀಸು, ಕೇಸು, ಕೋರ್ಟ್ ಇದೆಲ್ಲಾ ಕಾಮನ್ ಆಗುತ್ತಲೇ ಇದೆ. ಸಿನಿಮಾ ತಾರೆಯರು ಅಂದಮೇಲೆ ಒಂದಷ್ಟು ಜವಾಬ್ದಾರಿ ಇರಬೇಕು. ಆದರೆ, ಜವಾಬ್ದಾರಿ ಮರೆತಾಗ ಏನೇನೋ ಎಡವಟ್ಟುಗಳು ಆಗೋದುಂಟು. ಅಂತಹ ಅದೆಷ್ಟೋ ಎಡವಟ್ಟುಗಳು ಈಗಾಗಲೇ ಸಿನಿಮಾರಂಗದಲ್ಲಾಗಿವೆ. ಹಾಗೆ ನೋಡಿದರೆ, ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಕೇ್ಸ್ ವಿಚಾರವಾಗಿ ಒಂದೊಮ್ಮೆ ಜೈಲು ಸೇರಿ ಶಿಕ್ಷೆ ಅನುಭವಿಸಿ ಹೊರಬಂದಾಗಿದೆ. ಆದರೂ, ಆ ಭೂತ ಬೆಂಬಿಡದೆ ಬೆನ್ನತ್ತಿದೆ. ಹೌದು, ಈಗ ಮತ್ತೆ ಸಂಜನಾ ಗಲ್ರಾನಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಇಷ್ಟಕ್ಕೂ ಸಂಜನಾ ಗಲ್ರಾನಿಗೆ ಎದುರಾಗಿರುವ ಸಂಕಷ್ಟವಾದರೂ ಏನು ಎಂಬ ಪ್ರಶ್ನೆ ಎದುರಾಗೋದು ಸಹಜ. ಎಲ್ಲರಿಗೂ ಗೊತ್ತಿರುವಂತೆ ಸಂಜನಾ ಗಲ್ರಾನಿ ಅವರು ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿದ್ದರು. ಒಂದಷ್ಟು ದಿನಗಳ ಕಾಲ ಜೈಲೊಳಗಿದ್ದು ಹೊರಬಂದಿದ್ದರು. ಅವರ ಡ್ರಗ್ ಪ್ರಕರಣ ಹೈ ಕೋರ್ಟ್ ನಲ್ಲಿ ವಜಾಗೊಂಡಿತ್ತು. ಆಗಿದ್ದರೂ ಇದೀಗ ಪುನಃ ಆ ಪ್ರಕರಣಕ್ಕೆ ರೆಕ್ಕೆಪುಕ್ಕೆ ಅಂಟಿಸಲು ಸಿದ್ಧತೆ ನಡೆಯುತ್ತಿದೆ. ಸಿಸಿಬಿ ಪೊಲೀಸರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಂಜನಾ ಅವರು ಮತ್ತೆ ಕಾನೂನು ಹೋರಾಟಕ್ಕಿಳಿಯಬೇಕಾಗಬಹುದೇನೋ? ಈ ಕುರಿತಂತೆ ಸ್ವತಃ ಪೊಲೀಸ್ ಆಯುಕ್ತರೇ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಪ್ರಕರಣದ ಮುಂದಿನ ತನಿಖೆ ಹಂತದ ಬಗ್ಗೆ ಒಂದಷ್ಟು ಕುತೂಹಲ ಹೆಚ್ಚಿರುವುದಂತೂ ಸುಳ್ಳಲ್ಲ.
ಈ ಹಿಂದೆ ಡ್ರಗ್ ಪ್ರಕರಣ ಒಂದರಲ್ಲಿ ನಟಿ ಸಂಜನಾ ಗಲ್ರಾನಿ ಅವರು ಅರೆಸ್ಟ್ ಆಗಿದ್ದರು. ಈ ಪ್ರಕರಣ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಅಷ್ಟೇ ಅಲ್ಲ, ಈ ಪ್ರಕರಣದ ವಿಚಾರಣೆ ಬಳಿಕ ಇತ್ತೀಚೆಗೆ ಹೈಕೋರ್ಟ್ ನಲ್ಲಿ ವಜಾಗೊಂಡಿತ್ತು. ಈಗ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ . ಇದರಿಂದ ಸಂಜನಾ ಗಲ್ರಾನಿ ಅವರು ಮತ್ತೆ ಸಂಕಷ್ಟ ಎದುರಿಸುವ ಭೀತಿ ಯಲ್ಲಿದ್ದಾರೆ.
‘ಈಗಾಗಲೇ ಸರ್ಕಾರದ ಮಟ್ಟದಲ್ಲಿ ಸಭೆ ನಡೆಸಿ ಅರ್ಜಿ ತಯಾರಿ ಮಾಡಲಾಗಿದೆ. ಪ್ರಾಸಿಕ್ಯೂಷನ್ ಅನುಮತಿ ಬರುತ್ತಿದ್ದಂತೆ ಅರ್ಜಿ ಸಲ್ಲಿಕೆ ಆಗಲಿದೆ’ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಸಂಜನಾ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸಂಜನಾ ಅವರು ಇತ್ತೀಚೆಗೆ ಪ್ರಕರಣ ವಜಾಗೊಂಡಿದ್ದರ ಬಗ್ಗೆ ಹಲವು ವಾಹಿನಿಗಳಿಗೆ ಸಂದರ್ಶನ ನೀಡಿದ್ದರು. ನಾನು ಕ್ಲೀನ್ ಚಿಟ್ ಪಡೆದುಕೊಂಡಿದ್ದಾಗಿ ವಿವರಿಸಿದ್ದರು. ಯಾರೋ ಮಾಡಿದ್ದ ತಪ್ಪಿಗೆ ಹೀಗೆಲ್ಲಾ ಆಗಿತ್ತು ಅಂದಿದ್ದರು. ಈಗ ನೋಡಿದರೆ, ಸಿಸಿಬಿ ಪುನಃ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಒಪ್ಪಿಸಿ, ಆ ಮೂಲಕ ಕಾನೂನು ಮೊರೆ ಹೋಗಲು ಸಜ್ಜಾಗುತ್ತಿದೆ. ಪ್ರಕರಣ ವಜಾಗೊಂಡ ಖುಷಿಯಲ್ಲಿದ್ದ ಸಂಜನಾಗೆ ಈ ಮೂಲಕ ಮತ್ತೆ ಸಂಕಷ್ಟ ಎದುರಾಗಿರೋದು ಸುಳ್ಳಲ್ಲ. ಸದ್ಯ ಮನೆ, ಸಂಸಾರ ಅಂತೆಲ್ಲಾ ಸುಮ್ಮನಿರುವ ಸಂಜನಾ, ಒಂದಷ್ಟು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಪಾಡಿಗೆ ತಾವಿದ್ದಾರೆ. ಈಗ ನೋಡಿದರೆ, ಆ ಪ್ರಕರಣ ಮತ್ತೆ ಜೀವ ಪಡೆದುಕೊಳ್ಳುತ್ತಿದೆ ಅಂದಾಕ್ಷಣ, ಕೊಂಚ ಭೀತಿ ಉಂಟಾಗಿರೋದಂತು ಸುಳ್ಳಲ್ಲ ಬಿಡಿ.
ಅಂದಹಾಗೆ, ಈ ಪ್ರಕರಣದಲ್ಲಿ ಭಾಗಿಯಾಗಿದ್ದವರಿಗೂ ಈಗ ಢವ ಢವ ಶುರುವಾಗುತ್ತಿರೋದು ನಿಜ. ಅದೇನೆ ಇರಲಿ, ಸಿನಿಮಾ ಮಂದಿ ಏನೇ ಮಾಡಿದರೂ, ಎಚ್ಚರಿಕೆಯಿಂದ ಮಾಡಬೇಕು ಅನ್ನೋ ಸ್ಪಷ್ಟ ಸಂದೇಶ ಇಂತಹ ಪ್ರಕರಣಗಳಿಂದ ಗೊತ್ತಾಗುತ್ತಿದೆ. ಅದೇನೆ ಇದ್ದರೂ, ಎಲ್ಲವನ್ನೂ ಕಾಲವೇ ನಿರ್ಧರಿಸುತ್ತೆ. ಕಾಲಾಯಾ ತಸ್ಮೈ ನಮಃ ಅಂತ ದೊಡ್ಡೋರು ಸುಮ್ಮನೆ ಹೇಳಿಲ್ಲ ಅನ್ನುವುದಕ್ಕೆ ಆಗಾಗ ಈ ರೀತಿಯ ಸುದ್ದಿಗಳು ಸಾಕ್ಷಿಯಾಗುತ್ತವೆ.
ವಿಜಯ್ ಭರಮಸಾಗರ್, ಕರ್ನಾಟಕ ಟಿವಿ, ಫಿಲ್ಮ್‌ಬ್ಯೂರೋ