Sandalwood News: ಸಿನಿಮಾರಂಗದಲ್ಲಿ ಕಷ್ಟಗಳು ಹೊಸದೇನಲ್ಲ. ಸಿನಿಮಾಗಳಿಗೆ ಸಮಸ್ಯೆ ಎದುರಾಗೋದೂ ಕಾಮನ್. ರಿಲೀಸ್ ಬಾಗಿಲಿಗೆ ಬಂದ ಅದೆಷ್ಟೋ ಸಿನಿಮಾಗಳು ತೆರೆಗೆ ಅಪ್ಪಳಿಸಲಾಗದೆ ಉಳಿದ ಅದೆಷ್ಟೋ ಉದಾಹರಣೆಗಳೂ ಇವೆ. ಈಗ ಅಂತಹ ಸ್ಥಿತಿಗೆ ರಚಿತಾರಾಮ್ ಮತ್ತು ಶ್ರೀನಗರ ಕಿಟ್ಟಿ ಅಭಿನಯದ ಸಂಜು ವೆಡ್ಸ್ ಗೀತಾ 2 ಸೇರಿದೆ.
ಹೌದು, ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ಜನವರಿ 10ಕ್ಕೆ ಈ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ, ಅದೇಕೋ ಒಂದಷ್ಟು ಸಮಸ್ಯೆಗಳು ಈ ಚಿತ್ರವನ್ನು ಸುತ್ತಿಕೊಂಡಿವೆ. ಹಾಗಾಗಿ, ಸಿನಿಮಾ ಜನವರಿ 10ಕ್ಕೆ ರಿಲೀಸ್ ಆಗೋದೇ ಡೌಟು ಎಂಬ ಮಾತುಗಳು ಇದೀಗ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಗಿರಕಿ ಹೊಡೆಯುತ್ತಿವೆ.
ಸಂಕ್ರಾಂತಿ ಸಡಗರಕ್ಕೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಉಳಿದಿವೆ. ಹಬ್ಬಕ್ಕೆ ದಕ್ಷಿಣ ಭಾರತದ ಬಹುತೇಕ ಚಿತ್ರರಂಗದ ಸಿನಿಮಾಗಳು ಅಪ್ಪಳಿಸೋಕೆ ಸಜ್ಜಾಗಿವೆ. ಈ ಸಾಲಿಗೆ ಕನ್ನಡದ ಎರಡು ಸಿನಿಮಾಗಳು ಕೂಡ ಸೇರಿವೆ. ಒಂದು ಶರಣ್ ಅಭಿನಯದ ಛೂ ಮಂತರ್. ಮತ್ತೊಂದು ಶ್ರೀನಗರ ಕಿಟ್ಟಿ ಹಾಗು ರಚಿತಾ ರಾಮ್ ನಟನೆಯ ಸಂಜು ವೆಡ್ಸ್ ಗೀತಾ2. ಈಗಾಗಲೇ ಪರಭಾಷೆಯ ಸಿನಿಮಾಗಳ ಹಾವಳಿಯಿಂದಾಗಿ ಕನ್ನಡದ ಸಿನಿಮಾಗಳು ತತ್ತರಿಸಿರೋದು ಗೊತ್ತೇ ಇದೆ.
ಒಂದು ಕಡೆ ಥಿಯೇಟರ್ ಸಿಗುತ್ತಿಲ್ಲ. ಇನ್ನೊಂದೆಡೆ ಜನ ಥಿಯೇಟರ್ ಕಡೆ ಬರುತ್ತಿಲ್ಲ. ಹೀಗಾಗಿ ಕನ್ನಡದ ಅನೇಕ ಸಿನಿಮಾ ಮಂದಿ ಕಣ್ಣೀರಾಗುತ್ತಿದ್ದಾರೆ. ಈ ಮಧ್ಯೆ ಇನ್ನೇನು ರಿಲೀಸ್ ಆಗೋಕೆ ಎಲ್ಲಾ ತಯಾರಿ ಮಾಡಿಕೊಂಡ ಸಂಜು ವೆಡ್ಸ್ ಗೀತಾ 2 ಸಿನಿಮಾಗೆ ಸಂಕಷ್ಟ ಎದುರಾಗಿದೆ. ಅಂದರೆ, ಈ ಚಿತ್ರ ಜನವರಿ 10ಕ್ಕೆ ರಿಲೀಸ್ ಆಗೋದೇ ಡೌಟ್ ಎಂಬ ಸುದ್ದಿ ಹರಿದಾಡುತ್ತಿದೆ.
ಸದ್ಯ ನಿರ್ದೇಶಕ ನಾಗಶೇಖರ್ ಹಾಗು ತಂಡದ ಪ್ರಮುಖರು ಹೈದರಾಬಾದ್ ಗೆ ದೌಡಾಯಿಸಿದ್ದಾರೆ. ಅತ್ತ ಬುಕ್ ಮೈ ಶೋನಲ್ಲೂ ಟಿಕೆಟ್ ಬುಕ್ ಮಾಡೋಕೆ ಸಾಧ್ಯವಾಗುತ್ತಿಲ್ಲ. ಹಾಗಾದರೆ, ಸಿನಿಮಾಗೆ ಎದುರಾಗಿರುವ ಸಮಸ್ಯೆ ಏನು? ರಿಲೀಸ್ ಆಗೋದೇ ಡೌಟು ಅನ್ನೋದ್ದಕ್ಕೆ ಕಾರಣವೇನು? ಅದನ್ನು ನೋಡುವುದಾದರೆ….
ಎಲ್ಲವರೂ ಕರೆಕ್ಟ್ ಆಗಿದ್ದರೆ ಸಂಜು ವೆಡ್ಸ್ ಗೀತಾ 2′ ಜನವರಿ 10ರ ಶುಕ್ರವಾರ ರಿಲೀಸ್ ಆಗಬೇಕಿತ್ತು. ಸುಮಾರು ನಾಲ್ಕುವರೆ ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗಿದೆ. ಬಿಡುಗಡೆ ಹೊಸ್ತಿಲಲ್ಲಿ ಇರುವಾಗಲೇ ಆರ್ಥಿಕ ಸಮಸ್ಯೆಗೆ ಸಿನಿಮಾ ಸಿಲುಕಿದೆ ಎನ್ನಲಾಗುತ್ತಿದೆ.
‘ಸಂಜು ವೆಡ್ಸ್ ಗೀತಾ 2′ ಚಿತ್ರಕ್ಕೆ ಫೈನಾನ್ಸ್ ಪಡೆಯಲಾಗಿದೆ. ಹಾಗಾಗಿ, ರಿಲೀಸ್ ಮುನ್ನ ಹಣ ಕ್ಲಿಯರ್ ಮಾಡಬೇಕು. ಹಾಗಾಗಿ, ಫೈನಾನ್ಷಿಯರ್ ಕಡೆಯಿಂದ ಇನ್ನೂ ಕ್ಲಿಯರೆನ್ಸ್ ಸಿಕ್ಕಿಲ್ಲ . ಹೀಗಾಗಿ ರಿಲಿಸ್ ಡೌಟು ಎಂಬ ಸುದ್ದಿ ಓಡಾಡುತ್ತಿರುವುದು ಸುಳ್ಳಲ್ಲ.
ಸಿನಿಮಾ ತಂಡ ಮೂಲಗಳ ಪ್ರಕಾರ, ಫೈನಾನ್ಷಿಯರ್‌ಗೆ 2.5 ಕೋಟಿ ರೂಪಾಯಿ ಕೊಡಬೇಕಿದೆಯಂತೆ. ಆದರೆ, ಅದನ್ನು ತಂಡ ಇನ್ಟು ಆ ಹಣ ನೀಡಿಲ್ಲ. ಹೀಗಾಗಿ ಅವರ ಕಡೆಯಿಂದ ಕ್ಲಿಯರೆನ್ಸ್ ಸಿಕ್ಕಿಲ್ಲ. ಫೈನಾನ್ಷಿಯರ್ ರಿಲಿಸ್ ಗೂ ಮೊದಲು 75 ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದರಂತೆ.
ಆದರೆ, ಆ ಹಣವನ್ನೂ ತಂಡ ಕೊಡಲಾಗಿಲ್ಲ. ಈ ಕಾರಣಕ್ಕೆ ಫೈನಾನ್ಷಿಯರ್ ರಿಲೀಸ್‌ಗೆ ಅನುಮತಿ ಕೊಟ್ಟಿಲ್ಲ ಎಂಬ ಸುದ್ದಿ ಇದೆ. ಈ ಸಮಸ್ಯೆಯಲ್ಲಿರುವಾಗಲೇ ಸಂಜು ವೆಡ್ಸ್ ಗೀತಾ 2’ ಚಿತ್ರತಂಡಕ್ಕೆ ಮತ್ತೊಂದು ಸಮಸ್ಯೆ ಎದುರಾಗಿದೆ. ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಈ ಸಿನಿಮಾ ರಿಲೀಸ್ ಮಾಡದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ ಎನ್ನಲಾಗಿದೆ.
ಹೀಗಾಗಿ ನಿರ್ದೇಶಕ ನಾಗಶೇಖರ್ ಅವರ ತಂಡ ಹೈದರಾಬಾದ್ ಕಡೆ ಮುಖಮಾಡಿದೆ ಎಂಬ ಗುಸು ಗುಸು ಇದೆ. ಕೋರ್ಟ್ ಒಂದು ವೇಳೆ ಅನುಮತಿ ನೀಡಿದರೆ ಸಂಜು-ಗೀತಾರ ದರ್ಶನ ಆಗುತ್ತೆ. ಇಲ್ಲವಾದರೆ ಇಲ್ಲ. ಆದರೂ, ರಿಲೀಸ್ ಆಗುತ್ತೆ ಎಂಬ ಆಶಾಭಾವ ಒಂದು ಕಡೆಯಾದರೆ, ಮತ್ತೊಂದೆಡೆ, ಸಿನಿಮಾ ಟೀಮ್ ಹೇಳುವಂತೆ, ಡೌಟು ಎನ್ನಲಾಗುತ್ತಿದೆ. ಅದೇನೆ ಇರಲಿ, ಇಂತಹ ಸಮಸ್ಯೆಗಳು ಸಿನಿಮಾ ಟೀಮ್ ಗೆ ಹೊಸದೇನಲ್ಲ. ಇಂತಹ ಸಮಸ್ಯೆಗಳು ಬರೋದೇ ರಿಲೀಸ್ ವೇಳೆ.
ಹಿಂದೆ ಕೂಡ ಅನೇಕ ದೊಡ್ಡ ದೊಡ್ಡ ಸಿನಿಮಾಗಳಿಗೆ ಇಂಥದ್ದೊಂದು ಸಮಸ್ಯೆಗಳು ಎದುರಾಗಿದ್ದುಂಟು. ಆದರೆ, ಅದೇಗೋ, ನಿರ್ಮಾಪಕರು ಧೈರ್ಯ ಮಾಡಿ ಅವರಿವರ ಸಹಕಾರ ಪಡೆದು ರಿಲೀಸ್ ಮಾಡಿದ್ದುಂಟು. ಅಂಥದ್ದೊಂದು ಸಹಕಾರ ಈ ಸಿನಿಮಾಗೂ ಸಿಗಲಿ ಅನ್ನೋದೇ ನಮ್ಮ ಆಶಯ.
ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ