Saturday, January 18, 2025

Latest Posts

Sandalwood News: ಮ್ಯಾಕ್ಸ್ ಬಂದ್ಮೇಲೆ UI ಕಲೆಕ್ಷನ್ ಬಿತ್ತಾ! ಬಾಕ್ಸಾಫೀಸ್ ಲೆಕ್ಕ ಸುಳ್ಳಾ?

- Advertisement -

Sandalwood News: ಕಳೆದ ವರ್ಷ ಕ್ರಿಸ್ ಮಸ್ ಹಬ್ಬದ ವೇಳೆ ಬಂದ ಮ್ಯಾಕ್ಸ್ ಮತ್ತು ‘ಯುಐ’ ಚಿತ್ರಗಳು 3ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಈ ಎರಡು ಸಿನಿಮಾಗಳಲ್ಲಿ ಸದ್ಯ ಸುದೀಪ್ ಅವರ ‘ಮ್ಯಾಕ್ಸ್’ ದರ್ಬಾರ್ ಜೋರಾಗಿದೆ. ಎರಡು ಸ್ಟಾರ್ ಸಿನಿಮಾಗಳು ಹಿಂದೆ ಮುಂದೆ ಬಂದರೆ ಸಹಜವಾಗಿಯೇ ಅದು ಕ್ಲ್ಯಾಶ್ ಆಗುತ್ತೆ. ಹಾಗಾಗಿ ಎರಡೂ ಸಿನಿಮಾಗಳ ಮಧ್ಯೆ ಬಾಕ್ಸಾಫೀಸ್ ಕ್ಲ್ಯಾಶ್ ಕೂಡ ಆಗಿದೆ. ಇಷ್ಟಕ್ಕೂ ಈ ಎರಡು ಸಿನಿಮಾಗಳ ಪೈಕಿ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬ ಚರ್ಚೆ ಕೂಡ ಇದೀಗ ಗಾಂಧಿನಗರದಲ್ಲಿ ನಡೆಯುತ್ತಿದೆ.

ಉಪೇಂದ್ರ ಅವರ ‘ಯುಐ’ ಡಿಸೆಂಬರ್ 20ಕ್ಕೆ ರಿಲೀಸ್ ಆಗಿತ್ತು. ಇದು ಸೈಕಲಾಜಿಕಲ್ ಚಿತ್ರ. ಜಿ. ಮನೋಹರ್ ಮತ್ತು ಕೆ.ಪಿ. ಶ್ರೀಕಾಂತ್ ಚಿತ್ರಕ್ಕೆ ಹಣ ಹಾಕಿದ್ದಾರೆ. ಹಲವು ವರ್ಷಗಳ ನಂತರ ಉಪೇಂದ್ರ ಅವರು ನಿರ್ದೇಶಿಸಿದ ಚಿತ್ರ ಎಂಬ ಕಾರಣಕ್ಕೆ ‘ಯುಐ’ ನಿರೀಕ್ಷೆ ಹುಟ್ಟಿಸಿದ್ದು ನಿಜ. ಆದರೆ, ಈ ಚಿತ್ರ ರಿಲೀಸ್ ಆಗಿದ್ದ ಕೇವಲ ನಾಲ್ಕೇ ದಿನದ ಅಂತರದಲ್ಲಿ ಸುದೀಪ್ ಅವರ ‘ಮ್ಯಾಕ್ಸ್’ ತೆರೆಗೆ ಅಪ್ಪಳಿಸಿತ್ತು.

ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಮ್ಮೆಲೆ ಹಿಂದೆ ಮುಂದೆ ರಿಲೀಸ್ ಆಗಿಬಿಟ್ಟರೆ, ಬಾಕ್ಸಾಫೀಸ್ ಕ್ಲ್ಯಾಶ್ ಆಗೋದು ಸಹಜ. ಸಣ್ಣ ಪ್ರಮಾಣದಲ್ಲಾದರೂ ಒಂದು ಸಿನಿಮಾಗೆ ಸಮಸ್ಯೆ ಆಗುತ್ತೆ. ಇದೆಲ್ಲ ಗೊತ್ತಿದ್ದರೂ, ಎರಡು ಸಿನಿಮಾಗಳು ತಮ್ಮ ತಮ್ಮ ಕಂಟೆಂಟ್ ಗಳ ಮೇಲಿನ ನಂಬಿಕೆ ಮೇಲೆ ಒಟ್ಟೊಟ್ಟಿಗೆ ರಿಲೀಸ್ ಆಗಿದ್ದವು. ನಮ್ಮ ಸಿನಿಮಾಗಳ ನಡುವೆ ಯಾವುದೇ ಪೈಪೋಟಿ ಇಲ್ಲ ಎಂದು ಎರಡೂ ತಂಡಗಳು ಹೇಳಿದ್ದವು. ಅತ್ತ ಉಪೇಂದ್ರ, ಸುದೀಪ್ ಕೂಡ ಪರಸ್ಪರ ಹೊಗಳಿಕೊಂಡಿದ್ದರು. ಇಬ್ಬರೂ ಕೂಡ ಶುಭಾಶಯ ಹೇಳಿಕೊಂಡಿದ್ದರು.

‘ಯುಐ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಮೊದಲ 4 ದಿನ ಭರ್ಜರಿ ಕಲೆಕ್ಷನ್ ಮಾಡಿದ್ದು ಸುಳ್ಳಲ್ಲ. ಬರೀ ಬುಕ್‌ ಮೈಶೋನಲ್ಲಿ 3 ದಿನ ಒಂದೊಂದು ಲಕ್ಷ ಟಿಕೆಟ್ ಬುಕ್ ಆಗಿದ್ದು ವಿಶೇಷವಾಗಿತ್ತು. ಆದರೆ ‘ಮ್ಯಾಕ್ಸ್’ ದೊಡ್ಡದಾಗಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಮಾಸ್ ಎಂಟರ್‌ಟೈನರ್‌ ಸಿನಿರಸಿಕರನ್ನು ದೊಡ್ಡದಾಗಿ ಗಮನ ಸೆಳೆಯುವಲ್ಲಿ ಯಶಸ್ವಿಯಾಯ್ತು. ಮ್ಯಾಕ್ಸ್ ಮ್ಯಾಕ್ಸಿಮಮ್ ಗಮನಸೆಳೆದಿದ್ದರಿಂದ ಯುಐ ಕಡೆ ಪ್ರೇಕ್ಷಕರ ಫೋಕಸ್ ಕಮ್ಮಿ ಆಗಿದ್ದು ಸುಳ್ಳಲ್ಲ.

ಹಬ್ಬದಂದು ಬಿಡುಗಡೆ ಆಗಿದ್ದ ‘ಮ್ಯಾಕ್ಸ್’ ಚಿತ್ರಕ್ಕೆ ಅದ್ಭುತ ಓಪನಿಂಗ್ ಸಿಕ್ಕಿತ್ತು. ಡಿಸೆಂಬರ್ 25ರ ಬೆಳಗ್ಗೆ 6 ಗಂಟೆ ಶೋನಿಂದಲೇ ಚಿತ್ರಕ್ಕೆ ಪಾಸಿಟಿವ್ ಟಾಕ್ ಬಂದಿತ್ತು. ಹಾಗಾಗಿ ಸಂಜೆಯ ಶೋಗಳು ಹೌಸ್‌ಫುಲ್ ಆದವು. ಮೊದಲ 3 ದಿನ 3000 ಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಆಗಿತ್ತು ಎಂದು ಚಿತ್ರತಂಡವೇ ಹೆಮ್ಮೆಯಿಂದ ಹೇಳಿಕೊಂಡಿತು. ಆದರೆ ‘ಯುಐ’ ಹಾಗೂ ‘ಮ್ಯಾಕ್ಸ್’ ಚಿತ್ರಗಳ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರದ ಪ್ರಕಾರ ಕ್ರಿಸ್‌ಮಸ್ ಬಾಕ್ಸಾಫೀಸ್ ಕದನದಲ್ಲಿ ‘ಯುಐ’ಗಿಂತ ‘ಮ್ಯಾಕ್ಸ್’ ಕೈ ಮೇಲಾಗಿತ್ತು. 2024ರ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ‘ಮ್ಯಾಕ್ಸ್’ ಎನಿಸಿಕೊಂಡಿತ್ತು. ಆದರೆ ಉಪ್ಪಿ ಚಿತ್ರಕ್ಕೆ ವಿದೇಶಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. 2024ರಲ್ಲಿ ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಕಂಡ ನಂಬರ್ ಒನ್ ಸಿನಿಮಾ ‘ಯುಐ’ ಎಂದು ಚಿತ್ರತಂಡ ಹೇಳಿಕೊಂಡು ಬೀಗಿತು. ಆದರೆ ‘ಮ್ಯಾಕ್ಸ್’ ರಿಲೀಸ್ ಬಳಿಕ ‘ಯುಐ’ ಕಲೆಕ್ಷನ್ ಬಿತ್ತು ಎಂದು ಸ್ವತಃ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿದ್ದಾರೆ. ‘

ಸಂಕ್ರಾಂತಿ ಸಂಭ್ರಮದಲ್ಲಿ ಕನ್ನಡದ ಎರಡು ಚಿತ್ರಗಳು ಬಿಡುಗಡೆಗೆ ಸಜ್ಜಾದ್ದವು. ಆದರೆ ಪರಭಾಷಾ ಸಿನಿಮಾಗಳ ನಡುವೆ ‘ಸಂಜು ವೆಡ್ಸ್ ಗೀತಾ’-2 ಹಾಗೂ ‘ಛೂ ಮಂತರ್’ ಚಿತ್ರಗಳಿಗೆ ಸರಿಯಾಗಿ ಥಿಯೇಟರ್‌ಗಳು ಸಿಗಲಿಲ್ಲ. ಹಾಗಾಗಿ ನಾಗಶೇಖರ್ ನಿರ್ದೇಶನದ ಸಿನಿಮಾ ರಿಲೀಸ್ ಮುಂದೂಡಲಾಯಿತು.

ಈ ಬಗ್ಗೆ ಫಿಲ್ಮ್ ಚೇಂಬರ್‌ನಲ್ಲಿ ಭಾರೀ ಚರ್ಚೆ ಆಯ್ತು. ‘ಛೂ ಮಂತರ್’ ಚಿತ್ರಕ್ಕೂ ಸರಿಯಾಗಿ ಸ್ಕ್ರೀನ್‌ಗಳು ಸಿಕ್ಕಿಲ್ಲ. ನಾನೇ ಎರಡರಲ್ಲಿ ಒಂದು ಸಿನಿಮಾ ರಿಲೀಸ್ ಮುಂದೂಡುವಂತೆ ನಿರ್ಮಾಪಕರಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ತಿಳಿಸಿದ್ದಾರೆ. ‘ಯುಐ’ ಹಾಗೂ ‘ಮ್ಯಾಕ್ಸ್’ ಚಿತ್ರಗಳು ನಾಲ್ಕು ದಿನದ ಅಂತರದಲ್ಲಿ ಬಿಡುಗಡೆ ಆಗಿದ್ದವು.

ಆದರೆ ‘ಯುಐ’ ಒಳ್ಳೆ ಕಲೆಕ್ಷನ್ ಆಗುತ್ತಿತ್ತು. ಬಳಿಕ ‘ಮ್ಯಾಕ್ಸ್’ ಬಂದ ಬಳಿಕ ‘ಯುಐ’ ಕಲೆಕ್ಷನ್ ಬಿತ್ತು. ಅದು ನೋಡಿ ಹೊಟ್ಟೆ ಉರಿಯಿತು. ಹಾಗಾಗಿ ಮತ್ತೆ ಎರಡು ಸಿನಿಮಾ ಒಟ್ಟಿಗೆ ಬರುವುದು ಬೇಡ ಎಂದು ಎಂದು ಮನವಿ ಮಾಡಿದ್ದಾಗಿ ನರಸಿಂಹಲು ಹೇಳಿದ್ದಾರೆ. ಫಿಲ್ಮ್ ಚೇಂಬರ ಅಧ್ಯಕ್ಷರ ಮಾತು ಕೇಳಿದರೆ ‘ಯುಐ’ ಚಿತ್ರದ ಗಳಿಕೆ ಬಹಳ ಕಮ್ಮಿ ಆಯ್ತಾ? ಎನ್ನುವ ಅನುಮಾನವೂ ಮೂಡಿದೆ. ಹಾಗಾದರೆ ಉಪ್ಪಿ ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿದೆ ಎನ್ನುವುದೆಲ್ಲಾ ಸುಳ್ಳಾ? ಎಂದು ಸುದೀಪ್ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ನರಸಿಂಹಲು ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ.

ವಿಜಯ್ ಭರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss