ಬೆಂಗಳೂರಿನ ಆನೇಕಲ್ ಸಮೀಪದ ಸರ್ಜಾಪುರ(Sarjapura)ದಲ್ಲಿ ಕುಟುಂಬವೊಂದು ಸುಲಭವಾಗಿ ಹಣ ಮಾಡಲು ಹೋಗಿ ಈಗ ಸಿಕ್ಕಿಬಿದ್ದಿದ್ದಾರೆ. ಏನೂ ತಿಳಿಯದ ಅಮಾಯಕರನ್ನು ಬಳಸಿಕೊಂಡು ಹಣಮಾಡುವ ಕತರ್ನಾಕ್ ಕುಟುಂಬ. ಇಂತಹ ಕತರ್ನಾಕ್ ಸ್ಕೆಚ್ ಗೆ ಇಡೀ ಕುಟುಂಬವೇ ಬೆಂಬಲ ನೀಡಿದ್ದು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಪರಿಚಿತರ ಹೆಸರಿನಲ್ಲಿ ಅಡವಿಟ್ಟು ಆ ಬಳಿಕ ಆಭರಣ ಕಳ್ಳತನ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿ, ಪೊಲೀಸರಿಗೆ ಗಿರವಿ ಅಂಗಡಿ ಬಗ್ಗೆ ಸುಳಿವು ನೀಡಿ, ಪೊಲೀಸರೇ ಚಿನ್ನಾಭರಣಗಳನ್ನು ಕುಟುಂಬಕ್ಕೆ ತಂದು ಕೊಡುವಂತಹ ಸಂಚು ರೂಪಿಸಿದ್ದರು. ಈಗ ಇವರು ಪೊಲೀಸರ ಅತಿಥಿಗಳಾಗಿದ್ದಾರೆ. ಈ ಕತರ್ನಾಕ್ ಪ್ಲಾನ್ ಮೊದಲನೇ ಬಾರಿ ಸಕ್ಸಸ್ ಆಗಿತ್ತು. ಈ ಮೊದಲೇ ರೂಪಿಸಿದ ಪ್ಲಾನ್ ನಂತೆ ಈ ಕುಟುಂಬ ಯಶವಂತಪುರದಲ್ಲಿ(Yeshwantpur) ಸ್ನೇಹಿತರ ಮೂಲಕ ಚಿನ್ನಾಭರಣಗಳನ್ನು ಗಿರವಿ ಇಡುತ್ತಾರೆ. ಆ ಬಳಿಕ ಆಭರಣ ಕಳ್ಳತನ ಆಗಿದೆ ಎಂದು ನಾಟಕ ಆರಂಭಿಸುತ್ತಾರೆ. ಆನಂತರ ಪೊಲೀಸರ ಮುಂದೆ ಕಣ್ಣೀರು ಸುರಿಸಿ ಅವರನ್ನು ನಂಬಿಸುತ್ತಾರೆ. ನಂತರ ಪೊಲೀಸರು ತನಿಖೆ ನಡೆಸಿದ್ದು ಸರ್ಜಾಪುರದ ನಿವಾಸಿ ರವಿಪ್ರಕಾಶ್(Raviprakash)ಎಂಬುವವರು ದೇವಸ್ಥಾನಕ್ಕೆ ಇಂದು ಹೋಗಿದ್ದ ವೇಳೆಯಲ್ಲಿ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ, ನಮ್ಮ ಚಿನ್ನಾಭರಣಗಳನ್ನು ಪತ್ತೆ ಮಾಡಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದರು. ಹೀಗಾಗಿ ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಕಳ್ಳತನದ ಯಾವುದೇ ಕುರುಹು ಸಿಗದ ಕಾರಣ ಕುಟುಂಬದ ಮೇಲೆ ಅನುಮಾನ ಬಂದು ಪೊಲೀಸರು ಒಬ್ಬೊಬ್ಬರನ್ನೇ ಕರೆದು ವಿಚಾರಣೆ ನಡೆಸಿದಾಗ ಕುಟುಂಬದ ನಾಟಕ ಬಯಲಿಗೆ ಬಂದಿದೆ. ದೂರುದಾರ ರವಿಪ್ರಕಾಶ್ ಅವರ ಪುತ್ರ ಮಿಥುನ್ ಕುಮಾರ್ ತನ್ನ ಸ್ನೇಹಿತ ದೀಪಕ್ ಮೂಲಕ ಬ್ಯಾಂಕಿನಲ್ಲಿ ಒಡವೆ ಗಿರಿವಿ ಇರಿಸಿ, 25 ಲಕ್ಷ ರೂ ಹಣ ಪಡೆದಿದ್ದರು, ಇದಕ್ಕಾಗಿ ದೀಪಕ್ ಗೂ ಸ್ವಲ್ಪ ಹಣವನ್ನು ನೀಡಿದ್ದರು. ರವಿಪ್ರಕಾಶ್, ಹೆಂಡತಿ ಸಂಗೀತ, ತಂಗಿ ಆಶಾ, ಚರಣ್, ಮಿಥುನ್ ಕುಮಾರ್, ಇಂತಹ ನಾಟಕವನ್ನು ಆರಂಭಿಸಿದ್ದರು. ಈಗ ಪೊಲೀಸರು ಅವರನ್ನು ಜೈಲಿಗಟ್ಟಿದ್ದಾರೆ.