ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಶೋಭಾ ಕರಂದ್ಲಾಜೆ ಮೊದಲ ಪ್ರತಿಕ್ರಿಯೆ, ಶುಭಾಶಯ ಕೋರಿದ ಪ್ರತಾಪ್ ಸಿಂಹ

Mysuru Political News: ಮೈಸೂರು: ದಸರಾ ಹಬ್ಬ ಮುಗಿಯುವುದರೊಳಗಾಗಿ ಬಿಜೆಪಿ ರಾಜ್ಯಾಧ್ಯಕ್ಷರ  ನೇಮಕವಾಗಲಿದೆ ಎಂಬ ನಿರೀಕ್ಷೆ ಜೋರಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಹೈಕಮಾಂಡ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಮಹಿಳೆಯೋರ್ವರು ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿಯಬಹುದು ಎಂಬ ಮಾತು ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನು ಬಗ್ಗೆ ಸ್ವತಃ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಕರ್ನಾಟಕ ಟಿವಿ ಜತೆ ಮಾತನಾಡಿದ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷೆ ಸ್ಥಾನ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕೇಂದ್ರ ಸಚಿವೆಯಾಗಿಯೇ ಸಂತೋಷವಾಗಿದ್ದೇನೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವೇ ಇಲ್ಲ. ನನಗೆ ಒಳ್ಳೇ ಖಾತೆ ಸಿಕ್ಕಿದೆ, ಅಲ್ಲಿಯೇ ಒಳ್ಳೇ ಕೆಲಸ ಮಾಡುತ್ತಿದ್ದೇನೆ. ನನಗೆ ವರಿಷ್ಠರಿಂದಲೂ ಯಾವ ಸೂಚನೆ ಬಂದಿಲ್ಲ. ಇಂತಹ ಸುದ್ದಿ ಹೇಗೆ ಬರುತ್ತಿವೆಯೋ ನನಗೆ ಗೊತ್ತಿಲ್ಲ. ಮುಂದೆಯೂ ಮೋದಿ ಪ್ರಧಾನಿಯಾಗಬೇಕು ಎನ್ನುವುದು ನನ್ನ ಇಚ್ಛೆ. ಮೋದಿ ಮತ್ತೆ ಪ್ರಧಾನಿ ಆಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ  ಜನ್ಮದಿನ ಶುಭಾಶಯ ಕೋರಿದರು. ಅಲ್ಲದೇ ಇದೇ ವೇಳೆ ರಾಜ್ಯ ರಾಜಕಾರಣಕ್ಕೆ ಬನ್ನಿ ಮೇಡಂ ಎಂದು ಕೋರಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ರಾಜ್ಯಾಧ್ಯಕ್ಷರ ನೇಮಕ ಬಗ್ಗೆ ಹೇಳಲು ನಾನು ಬಹಳ ಜೂನಿಯರ್. ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ. ನಾನು ಪಕ್ಷಕ್ಕೆ ಬಂದು ಈಗ 10 ವರ್ಷ ಆಗುತ್ತಿದೆ ಅಷ್ಟೇ. ಪಕ್ಷದಲ್ಲಿ ನೇಮಕ ವಿಚಾರದಲ್ಲಿ ನಾನು ಹೇಳಲು ಆಗುವುದಿಲ್ಲ. ಶೋಭಾ ಕರಂದ್ಲಾಜೆ ಅವರನ್ನು ಕಾರ್ಯಕರ್ತರು ರಾಜ್ಯ ರಾಜಕಾರಣಕ್ಕೆ ಕರೆಯುತ್ತಿದ್ದಾರೆ. ನಾನು ಅದೇ ಧಾಟಿಯಲ್ಲೇ ಶುಭಾಶಯ ಕೋರಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

Varthur Santhosh : ಕನ್ನಡದ ಬಿಗ್‌ಬಾಸ್ ಸೆಟ್‌ನಲ್ಲೇ “ಆ ಸ್ಪರ್ಧಿ” ಅರೆಸ್ಟ್

‘400-500 ಕೋಟಿ ಖರ್ಚು ಮಾಡಿ ಸುವರ್ಣ ಸೌಧವನ್ನ ಭೂತ ಬಂಗಲೆ ಮಾಡುವುದು ಸರಿಯಲ್ಲ’

ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಖಚಿತ: ವಿನಯ್ ಕುಲಕರ್ಣಿ

About The Author