RATION CARD : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಸದ್ಯ ರಾಜ್ಯ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಲೋಪದೋಷ ಕಂಡುಬರ್ತಿದೆ. ಅಲ್ಲದೇ ಆಹಾರಗಳು ಎಷ್ಟು ಸುರಕ್ಷಿತ ಅನ್ನೋ ಅನುಮಾನ ಮೂಡಿದೆ. ಈ ಬಗ್ಗೆ ಸಿಎಜಿ ಶಾಕಿಂಗ್ ವರದಿಯನ್ನ ಬಿಡುಗಡೆ ಮಾಡಿದೆ.
ಹೌದು ರಸಗೊಬ್ಬರ ,ಕೀಟನಾಶಕಗಳ ಜೊತೆಗೆ ಆಹಾರ ಸಾಮಾಗ್ರಿಗಳನ್ನ ಸಂಗ್ರಹಿಸಿಡಲಾಗ್ತಿದೆ ಅನ್ನೋ ಶಾಕಿಂಗ್ ಮಾಹಿತಿ ಇದೀಗ ಸಿಎಜಿ ವರದಿಯಲ್ಲಿ ಬೆಳಕಿಗೆ ಬಂದಿದೆ. ಈ ವರದಿ ಬಂದ ಬೆನ್ನಲ್ಲೇ ಸಾಕಷ್ಟು ಅನುಮಾನಕ್ಕೂ ಎಡೆಮಾಡಿಕೊಡ್ತಿದೆ. ಸದ್ಯ ಈ ಬಗ್ಗೆ ಪಡಿತರದಾರರು ಸಾಕಷ್ಟು ಗೊಂದಲಕ್ಕೀಡಾಗಿದ್ದಾರೆ. ಅಲ್ಲದೇ ತಾವು ಸೇವಿಸ್ತಾ ಇರೋ ಆಹಾರ ಅಪಾಯದಲ್ಲಿದೆ ಅನ್ನೋ ಸಂಶಯ ಎದ್ದಿದೆ.
ಇನ್ನು 2017-2022 ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿಎಜಿ ಈ ಬಗ್ಗೆ ತನಿಖೆ ನಡೆಸಿದ್ದು. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಅಲ್ಲದೇ 2027-22 ವರೆಗೆ ವಿಧಾನಸಭೆಯಲ್ಲಿ ಮಂಡಿಸಲಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸರಬರಾಜು ನಿರ್ವಹಣೆ ಮೇಲಿನ ಲೆಕ್ಕಪರಿಶೋಧನೆಯಲ್ಲಿ ಪಡಿತರ ಆಹಾರ ಧಾನ್ಯದ ಸಂಗ್ರಹಣೆ ,ಸಾಗಣೆ ಮತ್ತು ಅದರ ನಿರ್ವಹಣೆ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಕೆಲಸ ನಿರ್ವಹಣೆಯಲ್ಲಿ ಸಾಕಷ್ಟು ಅವ್ಯವಹಾರ ಮತ್ತು ಎಡವಟ್ಟು ಆಗಿರೋದನ್ನ ಸಿಎಜಿ ಪತ್ತೆ ಮಾಡಿದೆ. ಇದರ ಜೊತೆಗೆ ಈ ಅವ್ಯವಹಾರಕ್ಕೆ ಸುಧಾರಣೆ ಕ್ರಮಗಳನ್ನು ಕೈಗೊಳ್ಳುವಂತೆ ಮಾಡಲು ಶಿಫಾರಸ್ಸು ಮಾಡಿದೆ.
ಅಂದಹಾಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಿದೆ. ಇದರ ಜೊತೆಗೆ ಆಹಾರ ಸಾಮಾಗ್ರಿಗಳನ್ನ ಕೀಟನಾಶಕಗಳ ಜೊತೆ ಸಂಗ್ರಹಿಸಿ ಇಟ್ಟ ಉದಾಹರಣೆಗಳು ಸಾಕಷ್ಟು ಇವೆ. ಹೀಗಾಗಿ ಆಹಾರ ಸಂಗ್ರಹಣೆಯಲ್ಲಿ ಸರಿಯಾದ ಕ್ರಮದಲ್ಲಿ ಫಾಲೋ ಮಾಡಲಾಗ್ತಿಲ್ಲ ಅಂತ ಸಿಎಜಿ ವಿರೋಧಿಸಿದೆ. ಅಲ್ಲದೇ ಕೆಲಸದ ಸಮಯದಲ್ಲಿ ನ್ಯಾಯಬೆಲೆ ಬೆಲೆ ಅಂಗಡಿಗಳನ್ನ ಮುಚ್ಚಿರುವುದು ಮತ್ತು ಹಳೆಯ ಹಾಗೂ ಅಧಿಕೃತವಲ್ಲದ ತೂಕ ಮಾಪನಗಳನ್ನು ಬಳಸಿರೋದನನ್ನ ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಗೆಯೇ ಪಡಿತರ ಆಹಾರ ಸಾಮಾಗ್ರಿಗಳನ್ನ ಸಾಗಾಟ ಮಾಡೋವಾಗ ಅಧಿಕೃತ ವಾಹನ ಬಿಟ್ಟು ಸ್ವಂತ ವಾಹನ ಬಳಸಿರೋದು ಕೂಡ ಗೊತ್ತಾಗಿದೆ. ಅಲ್ಲದೆ ಈ ವೇಳೆ ಯಾವುದೇ ತರಹದ ಜಿಪಿಎಸ್ ಬಳಸಿಲ್ಲ. ಜೊತೆಗೆ ನಿಗದಿಪಡಿಸಿರೋ ಮಾರ್ಗ ಬಿಟ್ಟು ಬೇರೆ ದಾರಿಯಲ್ಲಿ ಸಂಚಾರ ಮಾಡಲಾಗಿದೆ. ಇನ್ನು ಇಂತಹ ಅಕ್ರಮಗಳು ಆಗಿದ್ದರೂ ಕೂಡ ಯಾವುದೇ ಬಿಲ್ ಚುಕ್ತಾ ಮಾಡಿಲ್ಲ. ಇನ್ನು ಅಕ್ರಮಗಳು ಕಂಡುಬಂದಾಗ ವಶಕ್ಕೆ ಪಡೆದುಕೊಂಡ ದಾಸ್ತಾನುಗಳಿಗೆ ತಕ್ಷಣ ಯಾವುದೇ ಕ್ರಮ ಕೈಗೊಳ್ಳದೇ ಅದನ್ನ ವೇಷ್ಟ್ ಮಾಡಲಾಗಿದೆ.ಹೀಗಾಗಿನೇ ಸಿಎಜಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.
ಆಹಾರ ಧಾನ್ಯಗಳ ಒಟ್ಟಾರೆ ತೂಕದಿಂದ ಅದರ ಚೀಲಗಳ ತೂಕ ತೆಗೆದ್ರೆ ಆಹಾರ ಧಾನ್ಯಗಳ ಸರಿಯಾದ ತೂಕ ಸಿಗುತ್ತೆ, ಆದ್ರೆ ಈ ಕ್ರಮವನ್ನ ಯಾವ ಅಧಿಕಾರಿಗಳು ಕೂಡ ಅನುಸರಿಸಿಲ್ಲ. ಹೀಗಾಗಿ 11.84 ಕೋಟಿ ರೂ. ಯಷ್ಟು ಆಹಾರ ಧಾನ್ಯಗಳು ಪಡಿತರದಾರರ ಕೈಗೆ ಕಡಿಮೆ ಪೂರೈಕೆಯಾಗಿದೆ ಅನ್ನೋದನ್ನ ಕೂಡ ಸಿಎಜಿ ಹೇಳಿದೆ. ಇನ್ನು ತಿಂಗಳು ಪೂರ್ತಿ ನ್ಯಾಯಬೆಲೆ ಅಂಗಡಿಗಳನ್ನ ಮುಚ್ಚಿರುವುದು, ಪಡಿತರ ನೀಡದಿರೋದು, ಅಲ್ಲದೇ ಜನರಿಗೆ ಮೇಸೆಜ್ ಮೂಲಕ ಯಾವುದೇ ಮಾಹಿತಿ , ಸೂಚನೆ ನೀಡದೇ ಇರೋದು ಈ ಎಲ್ಲಾ ಅಕ್ರಮಗಳನ್ನ ಸದ್ಯ ಸಿಎಜಿ ಪತ್ತೆ ಮಾಡಿದೆ. ಹೀಗಾಗಿ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಜಿ ಸೂಚನೆ ನೀಡಿದೆ. ಇನ್ನು ಈ ಕುರಿತು ರಾಜ್ಯದ ಬೀದರ್ , ಮಂಡ್ಯ, ಗದಗ , ರಾಯಚೂರು ಜಿಲ್ಲೆಗಳಲ್ಲಿ ತನಿಖೆ ನಡೆಸಿ ಹೆಚ್ಚಿನ ತನಿಖೆಗೆ ಸೂಚಿಸಲಾಗಿದೆ.