ಹಿಂದಿ ರಾಷ್ಟ್ರೀಯ ಭಾಷೆಯೆಂದು ನಟ ಅಜಯ್ ದೇವ್‌ಗನ್ ಕನ್ನಡದ ನಟ ಕಿಚ್ಚ ಸುದೀಪ್ ವಿರುದ್ಧ ಟ್ವೀಟ್ ಮಾಡಿ ಕನ್ನಡಿಗರನ್ನ ರೊಚ್ಚಿಗೇಳುವಂತೆ ಮಾಡಿದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಯಾವ ಮಟ್ಟಿಗೆ ಸಂಚಲನ ಮೂಡಿಸಿತೆಂದ್ರೆ ಟ್ವಿಟ್ಟರ್‌ನಲ್ಲಿ ನಂಬರ್-1 ಟ್ರೆಂಡಿಂಗ್ನಲ್ಲಿತ್ತು.
ಬಳಿಕ ಕಿಚ್ಚನ ಒಂದೇ ಒಂದು ಟಕ್ಕರ್ ಟ್ವೀಟ್‌ಗೆ ಗಬ್‌ಚುಪ್ ಆಗಿದ್ದ ಬಾಲಿವುಡ್ ನಟ ಅಜಯ್ ದೇವ್‌ಗನ್‌ಗೆ ಇಡೀ ಸೌತ್ ಇಂಡಿಯಾನೇ ಒಟ್ಟಿಗೆ ಬೆವರಿಳಿಸಿತು. ಫ್ಯಾನ್ ವಾರ್, ಸ್ಟಾರ್ ವಾರ್ ಇದೆಲ್ಲವನ್ನೂ ಬದಿಗಿಟ್ಟು ಕಿಚ್ಚನ ಪರ ತಮಿಳು, ತೆಲುಗು ಅಭಿಮಾನಿಗಳೆಲ್ಲರೂ ಸಾಥ್ ಕೊಟ್ಟರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಶೀತಲ ಸಮರ ನಡೀತಾನೇ ಇದೆ. ಇದೀಗ ಈ ವಿಚಾರಕ್ಕೆ ನಿರ್ದೇಶಕ ಯೋಗ್‌ರಾಜ್ ಭಟ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನು ಕನ್ನಡದ ಪಂಡಿತನೂ, ಹಿಂದಿ ಪಂಡಿತನೂ ಹೌದು ಎಂದು ಹೇಳಿದ್ದರು. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈಗ ಭಟ್ಟರೇ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದಾರೆ.
“ನಮಸ್ತೆ ರಾಷ್ಟ್ರೀಯ ಭಾಷೆ ವಿಚಾರವಾಗಿ ಮಾಧ್ಯಮ ಮಿತ್ರರು ಕೇಳಿದಾಗ, ಪ್ರತಿಕ್ರಿಯ ನೀಡುವಷ್ಟು ತಿಳಿದವನು ನಾನಲ್ಲ ಎಂದು ಹೇಳಿದ್ದೇನೆಯೇ ಹೊರತು. ರಾಷ್ಟ್ರ ಭಾಷೆ ಹಿಂದಿಯೇ ಎಂದು ನಾನು ಹೇಳಿಲ್ಲ. ಹೇಳುವುದೂ ಇಲ್ಲ. ಸಂವಿಧಾನ ಪ್ರಕಾರವಾಗಿ ರಾಷ್ಟ್ರೀಯ ಭಾಷೆ ಎನ್ನುವುದೇ ಇಲ್ಲವಾದ್ದರಿಂದ ಈ ಕುರಿತು ಚರ್ಚೆ ಎಲ್ಲರಿಗೂ ಹೋಗಿ ಮುಟ್ಟುವುದಿಲ್ಲ ಎಂದು ಹೇಳಿದ್ದಾರೆ. ಯಾರೇ ಆಗಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದ ಮಾತ್ರಕ್ಕೆ ಅದು ರಾಷ್ಟ್ರಭಾಷೆಯಾಗುವುದಿಲ್ಲ. ಈ ಕಾರಣಕ್ಕಾಗಿ ನಾನು ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸದೇ ಇಡೀ ವಿವಾದಕ್ಕೆ ಅಚ್ಚಕನ್ನಡದಲ್ಲಿ ಅಂತ್ಯ ಹಾಡಲೆತ್ನಿಸಿದ್ದೇನೆಯೇ ಹೊರತು ಬೇರೇನೂ ಇಲ್ಲ.
ನನ್ನ ಕನ್ನಡ, ನನ್ನ ಭಾಷಾ ಸ್ವಾಭಿಮಾನ, ಕನ್ನಡ ಸೇವೆ, ಕನ್ನಡ ತನದ ಬಗ್ಗೆ ತಮಗೆಲ್ಲ ತಿಳಿದೇ ಇದೆ. ನಾನು ನನ್ನ ಸನ್ಮಿತ್ರರಾದ ಸುದೀಪ್ ಸಾಹೇಬರ ಪರ ಎಂದು ತಮಗೆಲ್ಲಾ ಪ್ರತ್ಯೇಕವಾಗಿ ಹೇಳಬೇಕೆ? ಕನ್ನಡವೇ ನನ್ನ ಪಾಲಿನ, ನನ್ನ ಬಾಳಿನ ಏಕೈಕ ಭಾಷೆ ಸಿರಿಗನ್ನಡಂ ಗೆಲ್ಗೆ”. ಹೀಗಂತ ಸಹೃದಯಿ ಸ್ನೇಹಿತರಿಗೆ ಒಂದು ಸ್ಪಷ್ಟನೆ ಎಂದು ಈ ಪತ್ರವನ್ನ ನಿದೇಶಕ ಯೋಗ್ರಾಜ್ ಭಟ್ ಪೋಸ್ಟ್ ಮಾಡಿದ್ದಾರೆ.
ನಳಿನಾಕ್ಷಿ, ಕರ್ನಾಟಕ ಟಿವಿ