ಬೆಳಗಾವಿ: ಸಚಿವ ಭೈರತಿ ಬಸವರಾಜ್ ವಿರುದ್ಧದ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸುವರ್ಣಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಅಂದು ಖಾಲಿ ಪೇಪರ್ ಮೇಲೆ ಸಹಿ ತೆಗೆದುಕೊಂಡಿದ್ದಾರೆ. ಅಪರಾಧಿಕ ಒಳಸಂಚು ಮಾಡಿ ಅಣ್ಣಯ್ಯಪ್ಪ ಕಡೆಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ಸಹಿ ಹಾಕಿಸಿಕೊಂಡು ವಿಭಾಗಪತ್ರ ಸೃಷ್ಟಿ ಮಾಡಿದ್ದಾರೆ. 2003ರ ಮೇ 21ರಂದು ವಿಭಾಗ ಮಾಡಿಕೊಂಡು ಅಂದೇ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಮಾದಪ್ಪ ಎನ್ನುವವರು ಐವರ ಮೇಲೆ ಕೇಸ್ ಹಾಕಿದ್ದಾರೆ. ಸಚಿವ ಭೈರತಿ, ಎಮ್ಎಲ್ಸಿ ಶಂಕರ್ ಸೇರಿ ಐವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಜನಪ್ರತಿನಿಧಿಗಳ ಕೋರ್ಟ್‌ನಿಂದ ಈಬಗ್ಗೆ ಆದೇಶ ಬಂದಿದೆ ಎಂದು ಸುವರ್ಣಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಕೆ.ಆರ್.ಪುರಂ ಹೋಬಳಿಯ ಕಲ್ಕೆರೆ ಬಳಿಯ ಆಸ್ತಿ ಕಬಳಿಕೆ, ಭೂಕಬಳಿಕೆ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡುತ್ತಾರೆ. ಪ್ರಕರಣ ಸಂಬಂಧ ಪೊಲೀಸರು ಬಿ ರಿಪೋರ್ಟ್ ಹಾಕುತ್ತಾರೆ, ಬಿ ರಿಪೋರ್ಟ್ ಪ್ರಶ್ನಿಸಿ ಮಾದಪ್ಪ ಮೇಲ್ಮನವಿ ಸಲ್ಲಿಸುತ್ತಾರೆ. ಆಗ ಪಿಸಿಆರ್ ದಾಖಲಿಸಿಕೊಂಡು ವಿಚಾರಣೆ ನಡೆಯುತ್ತದೆ. ವಿಚಾರಣೆಗೆ ತೆಗೆದುಕೊಳ್ಳಲು ನಿರ್ಧಾರವಾಗಿ ದೂರು ದಾಖಲು ಮಾಡಲಾಗುತ್ತದೆ. ಭೈರತಿ ಬಸವರಾಜ್‌ರಿಂದ ಸಿಎಂ ರಾಜೀನಾಮೆ ಪಡೆಯಲಿ. ರಾಜೀನಾಮೆ ನೀಡದಿದ್ದರೆ ಸಂಪುಟದಿಂದ ವಜಾಗೊಳಿಸಲಿ. ಭೈರತಿ ಪವರ್ ಫುಲ್ ಪರ್ಸನ್ ಎಂದು ಜಡ್ಜ್ ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೈರತಿ ಬಸವರಾಜ್ ಆಗ ಸಿದ್ದರಾಮಯ್ಯನ ಶಿಷ್ಯ, ಈಗ ಅಲ್ಲ. ಈಗ ಅವನು ನನ್ನ ಶಿಷ್ಯನೆಂದು ಒಪ್ಪಿಕೊಳ್ಳಲೂ ನಾನು ಸಿದ್ಧನಿಲ್ಲ ಎಂದು ಗರಂ ಆಗಿದ್ದಾರೆ. ಒಳಸಂಚು, ದಾಖಲೆ ಸೃಷ್ಟಿ ಮಾಡಿದ ಆರೋಪದಡಿ ಮೊಕದ್ದಮೆ ದಾಖಲಾಗಿದೆ. ಭೈರತಿ ಬಸವರಾಜ್ ಸೇರಿ ಐವರಿಗೂ ಸಮನ್ಸ್ ಜಾರಿ ಮಾಡಿದೆ. ಇದು ಜಾಮೀನು ರಹಿತ ಕೇಸ್, ಅತ್ಯಂತ ಗಂಭೀರ ಪ್ರಕರಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.