Spiritual: ಮನೆಯಲ್ಲಿ ಪೂಜೆ ಮಾಡುವ ವೇಳೆ ಪ್ರತೀ ಹಿಂದೂವಿನ ಮನೆಯಲ್ಲಿ ಘಂಟೆ ನಾದ ಕೇಳುತ್ತದೆ. ಅಲ್ಲದೇ, ದೇವಸ್ಥಾನದಲ್ಲೂ ದೊಡ್ಡ ದೊಡ್ಡ ಘಂಟೆಗಳನ್ನು ತೂಗಿ ಹಾಕಿರುತ್ತಾರೆ. ಭಕ್ತರು ದೇವಸ್ಥಾನದೊಳಗೆ ಬರುವಾಗ, ಘಂಟೆ ಬಾರಿಸಿ, ಒಳಗೆ ಬರುತ್ತಾರೆ. ಅಲ್ಲದೇ ದೇವಸ್ಥಾನದಲ್ಲಿ ಪೂಜೆಯಾಗುವ ಸಮಯದಲ್ಲೂ ಘಂಟೆ ಬಾರಿಸಲಾಗುತ್ತದೆ. ಹಾಗಾದರೆ, ಘಂಟೆ ಬಾರಿಸುವ ಹಿಂದಿರುವ ವಿಷಯವಾದರೂ ಏನು ಅಂತಾ ತಿಳಿಯೋಣ ಬನ್ನಿ..
ಪೂಜೆಯ ವೇಳೆ ಘಂಟೆಯನ್ನು ಸುಮ್ಮನೆ ಬಾರಿಸಲಾಗುವುದಿಲ್ಲ. ಅದರ ಹಿಂದೆ ಒಂದು ಬಲವಾದ ಕಾರಣವಿದೆ. ಅದೇನೆಂದರೆ, ಘಂಟೆ ನಾದದಿಂದ ಮನೆಯಲ್ಲಿ ಅಥವಾ ಆ ಸ್ಥಳದಲ್ಲಿರುವ ನಕಾರಾತ್ಮಕ ಶಕ್ತಿ ಮಾಯವಾಗುತ್ತದೆ. ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಪೂಜೆ ವೇಳೆ, ದೇವಸ್ಥಾನದಲ್ಲಿ ಘಂಟೆ ಬಾರಿಸಲಾಗುತ್ತದೆ.
ಎರಡನೇಯ ಕಾರಣವೆಂದರೆ, ದೇವರುಗಳು ಸದಾಕಾಲ ಧ್ಯಾನಸ್ಥರಾಗಿರುತ್ತಾರೆ ಅನ್ನೋ ನಂಬಿಕೆ ಇದೆ. ಅವರನ್ನು ಧ್ಯಾನದಿಂದ ಈಚೆ ತಂದು, ಪೂಜೆ ಒಪ್ಪಿಸಿಕೊಳ್ಳುವಂತೆ ಮಾಡಲು, ಘಂಟೆ ಬಾರಿಸಲಾಗುತ್ತದೆ. ಮನೆಗೆ ಅತಿಥಿಗಳು ಬಂದಾಗ, ನಮಗೆ ಗೊತ್ತಾಗಬೇಕು ಎಂದು ಅತಿಥಿಗಳು ಹೇಗೆ ಬೆಲ್ ಬಾರಿಸುತ್ತಾರೋ, ಅದೇ ರೀತಿ ಭಕ್ತರು ತಾವು ಬಂದಿದ್ದನ್ನು ದೇವರಿಗೆ ತಿಳಿಸಲು ಘಂಟೆ ಬಾರಿಸುತ್ತಾರೆ.
ಇನ್ನು ಮೊದಲಿನ ಕಾಲದಲ್ಲಿ ದೇವಸ್ಥಾನದಲ್ಲಿ ಘಂಟೆ ಬಾರಿಸಲು ಶುರು ಮಾಡಿದಾಗ, ಇನ್ನೇನು ಪೂಜೆ ಆರತಿಯಾಗುತ್ತದೆ ಅನ್ನೋ ಸೂಚನೆ ಅಕ್ಕಪಕ್ಕದಲ್ಲೇ ವಾಸಿಸುತ್ತಿದ್ದ ಭಕ್ತಿರಿಗೆ ಗೊತ್ತಾಗುತ್ತಿತ್ತು. ಅವರು ಪೂಜೆಗಾಗಿ ದೇವಸ್ಥಾನಕ್ಕೆ ಬಂದು, ಆರತಿಯಲ್ಲಿ ಭಾಗಿಯಾಗುತ್ತಿದ್ದರು. ಇನ್ನು ಘಂಟೆ ಬಾರಿಸುವುದರಿಂದ ಕ್ರಿಮಿ ಕೀಟಗಳು ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ.